Skip to content
Opens in a new window
Listen to this chapter • 4:00

[1] ನೀವು ನಿಮ್ಮ ಶತ್ರುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟಾಗ ಅವರ ಹತ್ತಿರ ಕುದುರೆಗಳೂ, ರಥಗಳೂ ಮತ್ತು ನಿಮಗಿಂತ ಹೆಚ್ಚಾದ ಕಾಲ್ಬಲವೂ ಇರುವುದನ್ನು ಕಂಡರೆ ಹೆದರಬಾರದು. ಏಕೆಂದರೆ ಐಗುಪ್ತದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಯೆಹೋವನು ನಿಮ್ಮ ಕಡೆ ಇದ್ದಾನಲ್ಲಾ.

[2] ನಿಮಗೆ ಯುದ್ಧ ಸಮೀಪಿಸಿದಾಗ ಯಾಜಕನು ಮುಂದೆ ಬಂದು ಭಟರ ಸಂಗಡ ಮಾತನಾಡಿ ಅವರಿಗೆ,

[3] “ಇಸ್ರಾಯೇಲರೇ, ಕೇಳಿರಿ; ನೀವು ಈಗ ಶತ್ರುಗಳೊಡನೆ ಯುದ್ಧಮಾಡುವ ಕಾಲ ಸಮೀಪಿಸಿತಷ್ಟೆ. ನೀವು ಎದೆಗುಂದಬಾರದು, ದಿಗಿಲುಪಡಬಾರದು, ನಡುಗಬಾರದೂ ಮತ್ತು ಅವರಿಗೆ ಹೆದರಲೂಬಾರದು.

[4] ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಸಂಗಡ ಇದ್ದು ಶತ್ರುಗಳೊಡನೆ ನಿಮಗೋಸ್ಕರ ಯುದ್ಧಮಾಡಿ ನಿಮಗೆ ಜಯವನ್ನು ಉಂಟುಮಾಡುವನು” ಎಂದು ಹೇಳಬೇಕು.

[5] ಮತ್ತು ಸೈನ್ಯಾಧಿಪತಿಗಳು ಅವರಿಗೆ, “ನಿಮ್ಮಲ್ಲಿ ಯಾವನಾದರೂ ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಪ್ರತಿಷ್ಠೆ ಮಾಡದಿದ್ದರೆ ಅವನು ಆ ಮನೆಗೆ ಹೋಗಲಿ, ಅವನು ಯುದ್ಧಕ್ಕೆ ಬಂದು ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಳ್ಳಬಹುದು.

[6] ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಹಣ್ಣುಗಳನ್ನು ಇನ್ನೂ ಅನುಭೋಗಿಸದಿದ್ದರೆ ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ತೋಟದ ಹಣ್ಣುಗಳನ್ನು ಅನುಭೋಗಿಸಬಹುದು.

[7] ಯಾವನಾದರೂ ತಾನು ಮದುವೆಗೆ ನಿಶ್ಚಯ ಮಾಡಿಕೊಂಡ ಹೆಣ್ಣನ್ನು ಇನ್ನೂ ಸೇರಿಸಿಕೊಳ್ಳದಿದ್ದರೆ ಅವನು ಮನೆಗೆ ಹೋಗಲಿ; ಅವನು ಯುದ್ಧದಲ್ಲಿ ಸತ್ತರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳಬಹುದು” ಎಂದು ಹೇಳಬೇಕು.

[8] ಇದಲ್ಲದೆ, “ಯಾವನಾದರೂ ಅಧೈರ್ಯದಿಂದ ಯುದ್ಧ ಮಾಡಲು ಹಿಂಜರಿದರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು” ಎಂದು ಹೇಳಬೇಕು.

[9] ಸೈನ್ಯಾಧಿಪತಿಗಳು ಭಟರಿಗೆ ಈ ರೀತಿಯಾಗಿ ಹೇಳಿದ ನಂತರ ದಂಡಿನವರ ಮೇಲೆ ನಾಯಕರನ್ನು ನೇಮಿಸಬೇಕು.

[10] ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಅದರ ಹತ್ತಿರಕ್ಕೆ ಬಂದಾಗ ಮೊದಲು ಅದು ಯುದ್ಧವಿಲ್ಲದೆ ಸಮಾಧಾನದಿಂದಲೇ ಅಧೀನವಾಗಬಹುದೆಂದು ಪ್ರಕಟಿಸಬೇಕು.

[11] ಅದರಲ್ಲಿರುವವರು ಒಪ್ಪಿ ಬಾಗಿಲನ್ನು ನಿಮಗೆ ತೆರೆದುಕೊಟ್ಟರೆ ಅವರೆಲ್ಲರೂ ನಿಮಗೆ ಬಿಟ್ಟೀಕೆಲಸವನ್ನು ಮಾಡುವ ದಾಸರಾಗಬೇಕು.

[12] ಅವರು ನಿಮ್ಮ ಮಾತಿಗೆ ಸಮ್ಮತಿಸದೆ ಎದುರಿಸಿದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.

[13] ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ನಿಮಗೆ ವಶವಾಗುವಂತೆ ಮಾಡಿದಾಗ ಅದರಲ್ಲಿರುವ ಗಂಡಸರೆಲ್ಲರನ್ನೂ ಕನಿಕರಿಸದೆ ಸಂಹಾರಮಾಡಬೇಕು.

[14] ಹೆಂಗಸರನ್ನೂ, ಮಕ್ಕಳನ್ನೂ, ದನಗಳನ್ನೂ ಮತ್ತು ಊರಿನಲ್ಲಿರುವ ಆಸ್ತಿಯನ್ನೂ ನೀವು ಸ್ವಂತಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ನಿಮಗೆ ವಶಪಡಿಸಿದ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.

[15] ಈ ದೇಶದ ಜನಾಂಗಗಳಿಗೆ ಸೇರದೆ ದೂರವಾಗಿರುವ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ನೀವು ಹಾಗೆಯೇ ನಡೆದುಕೊಳ್ಳಬೇಕು.

[16] ಆದರೆ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಂತಕ್ಕಾಗಿ ಕೊಡುವ ಈ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ಹಾಗೆ ಮಾಡದೆ ಉಸಿರಾಡುವ ಒಬ್ಬರನ್ನಾದರೂ ಉಳಿಸಬಾರದು.

[17] ನಿಮ್ಮ ದೇವರಾದ ಯೆಹೋವನು ನಿಮಗೆ ಅಪ್ಪಣೆಕೊಟ್ಟಂತೆ ಇವರನ್ನು ಅಂದರೆ ಹಿತ್ತಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು, ಇವರೆಲ್ಲರನ್ನೂ ನಾಶಮಾಡಿಬಿಡಬೇಕು.

[18] ಇಲ್ಲವಾದರೆ ಅವರು ತಮ್ಮ ದೇವರುಗಳಿಗಾಗಿ ಆಚರಿಸುವ ನಿಷಿದ್ಧವಾದ ಆಚಾರಗಳನ್ನು ನಿಮಗೆ ಕಲಿಸಿಕೊಟ್ಟಾರು; ಮತ್ತು ನೀವು ನಿಮ್ಮ ದೇವರಾದ ಯೆಹೋವನಿಗೆ ದ್ರೋಹಿಗಳಾಗಬಹುದು.

[19] ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅದಕ್ಕೆ ಬಹುದಿನ ಮುತ್ತಿಗೆಹಾಕಿದಾಗ, ಅದಕ್ಕೆ ಸೇರಿರುವ ಮರಗಳನ್ನು ಹಾಳುಮಾಡಬಾರದು; ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಯಾರಿಗೂ ಶತ್ರುಗಳಲ್ಲ! ಅವುಗಳೊಡನೆ ಯುದ್ಧಮಾಡಬಹುದೇ?

[20] ಮರಗಳು ತಿನ್ನತಕ್ಕ ಹಣ್ಣು ಕೊಡುವುದಿಲ್ಲವೆಂದು ನೀವು ತಿಳಿದಾಗ ಮಾತ್ರ ಅದನ್ನು ಕಡಿದು ನಾಶಮಾಡಬಹುದು. ಅವುಗಳಿಂದ ಯುದ್ಧಸಲಕರಣೆಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣವು ನಾಶವಾಗುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.

ಧರ್ಮೋಪದೇಶಕಾಂಡ — Chapters