Skip to content
Opens in a new window
Listen to this chapter • 10:09

[1] ಇಸ್ರಾಯೇಲರೇ ಕೇಳಿರಿ, ನೀವು ಜೀವದಿಂದ ಉಳಿದು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವಂತೆ ಸಾಧ್ಯವಾಗಲು ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನಿಸಿ ಅನುಸರಿಸಬೇಕು.

[2] ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಯಾವುದನ್ನೂ ಕೂಡಿಸಬಾರದು, ಅವುಗಳಿಂದ ಯಾವುದನ್ನೂ ತೆಗೆಯಬಾರದು.

[3] ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ಗಮನಿಸಿದ್ದೀರಿ. ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶಮಾಡಿದ್ದಾನೆ.

[4] ನಿಮ್ಮ ದೇವರಾದ ಯೆಹೋವನನ್ನು ನೀವು ನಂಬಿ ನಡೆದುದರಿಂದ ನೀವಾದರೋ ಇಂದಿನವರೆಗೂ ಉಳಿದಿದ್ದೀರಿ.

[5] ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.

[6] ಇವುಗಳನ್ನು ಕೈಕೊಂಡು ಅನುಸರಿಸಿರಿ. ನೀವು ಅನುಸರಿಸಿ ನಡೆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ, ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು.

[7] ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು?

[8] ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?

[9] ಹೀಗಿರುವುದರಿಂದ ನೀವು ಬಹು ಜಾಗರೂಕತೆಯಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ, ನೀವು ನೋಡಿದ ಸಂಗತಿಗಳನ್ನು ಎಷ್ಟು ಮಾತ್ರವೂ ಮರೆಯದೆ ಜೀವದಿಂದಿರುವ ವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳಿಗೂ ಮತ್ತು ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು.

[10] ಆ ಸಂಗತಿಗಳು ಯಾವುವೆಂದರೆ, ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ, “ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂಮಿಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವುದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದನು.

[11] ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಕತ್ತಲೂ, ಮೋಡವೂ, ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿಯಿತು.

[12] ಆಗ ಯೆಹೋವನು ಆ ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದನು. ಆತನು ಮಾತನಾಡಿದ ಸ್ವರ ನಿಮಗೆ ಕೇಳಿಸಿತೇ ಹೊರತು ಯಾವ ಆಕಾರವೂ ಕಾಣಿಸಲ್ಲಿಲ್ಲ.

[13] ನೀವು ಅನುಸರಿಸಬೇಕೆಂದು ಆತನು ನೇಮಿಸಿದ ನಿಬಂಧನೆಯನ್ನು ಅಂದರೆ ಹತ್ತು ಆಜ್ಞೆಗಳನ್ನು ನಿಮಗೆ ವಿವರಿಸಿ, ಎರಡು ಕಲ್ಲಿನ ಹಲಗೆಗಳಲ್ಲಿ ಅದನ್ನು ಕೆತ್ತಿಸಿದನು.

[14] ನೀವು ನದಿ ದಾಟಿ ಸ್ವಾಧೀನಮಾಡಿಕೊಳ್ಳುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನಿಮಗೆ ಬೋಧಿಸಬೇಕೆಂದು ಯೆಹೋವನು ಆ ಕಾಲದಲ್ಲಿ ನನಗೆ ಆಜ್ಞಾಪಿಸಿದ್ದನ್ನು ನೀವು ನೆನಪಿನಲ್ಲಿಟ್ಟುಕೊಂಡು ನಿಮ್ಮ ಸಂತತಿಯವರಿಗೆ ತಿಳಿಸಬೇಕು.

[15] ಹೋರೇಬಿನಲ್ಲಿ ಯೆಹೋವನು ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದಾಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲ. ಆದುದರಿಂದ ನೀವು ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.

[16] ನೀವು ಸ್ತ್ರೀಪುರುಷರ ರೂಪವನ್ನಾಗಲಿ,

[17] ಭೂಮಿಯ ಮೇಲೆ ಸಂಚರಿಸುವ ಮೃಗದ ರೂಪವನ್ನಾಗಲಿ, ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ,

[18] ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ರೂಪವನ್ನಾಗಲಿ ಮತ್ತು ಭೂಮಿಯ ಕೆಳಗಣ ನೀರಿನಲ್ಲಿರುವ ಮೀನಿನ ರೂಪವನ್ನಾಗಲಿ ದೇವರ ಸ್ವರೂಪವೆಂದು ಮಾಡಿಕೊಂಡು ಭ್ರಷ್ಟರಾಗಬಾರದು.

[19] ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯ, ಚಂದ್ರ ಅಥವಾ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂ ಬಾರದು ಮತ್ತು ನಮಸ್ಕರಿಸಲೂ ಬಾರದು.

[20] ನಿಮ್ಮನ್ನಾದರೋ ಯೆಹೋವನು ತನಗೆ ಸ್ವಂತ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತದೇಶದಿಂದ ತಪ್ಪಿಸಿದನು; ಆ ಸಂಕಲ್ಪವು ಈಗ ನೆರವೇರಿತು.

[21] ಅದಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಗೊಂಡು ನಾನು ಯೊರ್ದನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ಒಳ್ಳೆಯ ದೇಶವನ್ನು ಸೇರದೆ,

[22] ಇಲ್ಲಿಯೇ ಸಾಯಬೇಕೆಂದು ಖಂಡಿತವಾಗಿ ಹೇಳಿದನು. ನೀವಾದರೋ ನದಿದಾಟಿ ಆ ಒಳ್ಳೆಯ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

[23] ಎಚ್ಚರಿಕೆಯಾಗಿರಿ, ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ನೀವು ಮರೆತು, ಪೂಜಿಸಬೇಡಿರೆಂದು ಆತನು ನಿಷೇಧಿಸಿದ ಯಾವ ವಸ್ತುವಿನ ವಿಗ್ರಹವನ್ನೂ ಮಾಡಿಕೊಳ್ಳಬಾರದು.

[24] ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದೆ ಉರಿಯುವ ಬೆಂಕಿಯಂತೆ ದ್ರೋಹಿಗಳನ್ನು ದಹಿಸಿಬಿಡುವವನಾಗಿದ್ದಾನೆಂದು ತಿಳಿಯಿರಿ.

[25] ನೀವು ಮಕ್ಕಳನ್ನೂ ಮತ್ತು ಮೊಮ್ಮಕ್ಕಳನ್ನೂ ಪಡೆದು ಬಹುಕಾಲ ಆ ದೇಶದಲ್ಲಿದ್ದ ಮೇಲೆ ದ್ರೋಹಿಗಳಾಗಿ ಯಾವ ವಿಗ್ರಹವನ್ನಾದರೂ ಮಾಡಿಕೊಂಡು, ನಿಮ್ಮ ದೇವರಾದ ಯೆಹೋವನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ,

[26] ಆತನನ್ನು ಕೋಪಗೊಳಿಸಿದರೆ, ನೀವು ಯೊರ್ದನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವ ಆ ದೇಶದಲ್ಲಿ ಉಳಿಯದೆ, ಬೇಗನೆ ನಾಶವಾಗಿ ಹೋಗುವಿರಿ ಎಂದು ಭೂಮ್ಯಾಕಾಶಗಳನ್ನು ಸಾಕ್ಷಿಯಾಗಿಟ್ಟು ಎಚ್ಚರಿಸುತ್ತೇನೆ. ನೀವು ಆ ದೇಶದಲ್ಲಿ ಬಹುದಿನ ಇರದೆ ನಾಶವಾಗಿಯೇ ಹೋಗುವಿರಿ.

[27] ಯೆಹೋವನು ನಿಮ್ಮನ್ನು ಅನ್ಯಜನಗಳಲ್ಲಿ ಚದರಿಸುವನು; ಆತನು ನಿಮ್ಮನ್ನು ಓಡಿಸುವ ದೇಶಗಳ ಜನರ ಮಧ್ಯದಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿಯುವಿರಿ.

[28] ನೀವು ಆ ದೇಶಗಳಲ್ಲಿ ಮನುಷ್ಯರು ಮಾಡಿಕೊಂಡ ದೇವರುಗಳನ್ನು ಅಂದರೆ ಮರದಲ್ಲಾಗಲಿ, ಕಲ್ಲಿನಲ್ಲಾಗಲಿ ಕೆತ್ತಲ್ಪಟ್ಟು ನೋಡಲಾರದೆ, ಕೇಳಲಾರದೆ, ತಿನ್ನಲಾರದೆ, ವಾಸನೆ ಗ್ರಹಿಸಲಾರದೆ ಇರುವ ದೇವರುಗಳನ್ನು ಪೂಜಿಸುವವರಾಗುವಿರಿ.

[29] ಆಗ ಅಲ್ಲಿಂದಲಾದರೂ ನೀವು ಸಂಪೂರ್ಣ ಹೃದಯದಿಂದಲೂ, ಪೂರ್ಣ ಮನಸ್ಸಿನಿಂದಲೂ ನಿಮ್ಮ ದೇವರಾದ ಯೆಹೋವನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು.

[30] ಮೇಲೆ ಹೇಳಿದ ಎಲ್ಲಾ ಕಷ್ಟಗಳು ನಿಮಗೆ ಸಂಭವಿಸಿ, ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.

[31] ನಿಮ್ಮ ದೇವರಾದ ಯೆಹೋವನು ಕನಿಕರವುಳ್ಳ ದೇವರಾದುದರಿಂದ ಆತನು ನಿಮ್ಮನ್ನು ಅಲಕ್ಷ್ಯಮಾಡುವುದಿಲ್ಲ, ವಿನಾಶಕ್ಕೆ ಬಿಡುವುದಿಲ್ಲ. ಆತನು ನಿಮ್ಮ ಪೂರ್ವಿಕರ ಸಂಗಡ ಪ್ರಮಾಣಪೂರ್ವಕವಾಗಿ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ.

[32] ದೇವರು, ಮನುಷ್ಯರನ್ನು ಸೃಷ್ಟಿಸಿ ಭೂಮಿಯ ಮೇಲೆ ಇರಿಸಿದ ದಿನ ಮೊದಲುಗೊಂಡು ಇಂದಿನವರೆಗೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೂ ಇಂತಹ ಅದ್ಭುತ ಕಾರ್ಯವು ನಡೆದದ್ದುಂಟೋ, ಇಲ್ಲವೆ ಇಂತಹ ಸುದ್ದಿ ಕೇಳಿದ್ದುಂಟೋ ಎಂದು ವಿಚಾರಿಸಿಕೊಳ್ಳಿರಿ.

[33] ದೇವರು ಬೆಂಕಿಯ ಜ್ವಾಲೆಯೊಳಗಿಂದ ಮಾತನಾಡಿದ ಸ್ವರವು ನಿಮಗೆ ಕೇಳಿಸಿತಲ್ಲಾ; ಬೇರೆ ಯಾವ ಜನರಾದರೂ ದೇವರ ಸ್ವರವನ್ನು ಕೇಳಿ ಬದುಕಿದ್ದುಂಟೋ?

[34] ಬೇರೆ ಯಾವ ದೇವರೂ ಮನಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಮಹಾಭೀತಿ ಇವುಗಳನ್ನು ಪ್ರಯೋಗಿಸಿ, ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯೊಳಗಿಂದ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದಾನೇ? ನಿಮ್ಮ ದೇವರಾದ ಯೆಹೋವನಾದರೋ ಐಗುಪ್ತದೇಶದಲ್ಲಿ ನಿಮಗೋಸ್ಕರ ಇದನ್ನೆಲ್ಲಾ ನಿಮ್ಮ ಕಣ್ಣು ಮುಂದೆ ನಡಿಸಿದ್ದಾನಲ್ಲಾ.

[35] ಯೆಹೋವನೊಬ್ಬನೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದೆಲ್ಲಾ ನಿಮಗೆ ಮಾತ್ರ ತೋರಿಸಿದ್ದಾನೆ.

[36] ಆತನು ನಿಮ್ಮ ಶಿಕ್ಷಣಕ್ಕೋಸ್ಕರ ಆಕಾಶದಿಂದ ತನ್ನ ಸ್ವರವನ್ನು ನಿಮಗೆ ಕೇಳಿಸುವಂತೆ ಮಾಡಿದನು; ಮತ್ತು ತನ್ನ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ತೋರಿಸಿದನು. ಅದಲ್ಲದೆ ಆ ಅಗ್ನಿಜ್ವಾಲೆಯೊಳಗಿಂದ ಆತನು ಆಡಿದ ಮಾತುಗಳನ್ನು ಕೇಳಿಸುವಂತೆ ಮಾಡಿದನು.

[37] ಆತನು ನಿಮ್ಮ ಪೂರ್ವಿಕರನ್ನು ಪ್ರೀತಿಸಿ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನು ಆರಿಸಿಕೊಂಡು,

[38] ಈಗ ನಮ್ಮ ಅನುಭವಕ್ಕೆ ಬಂದ ಪ್ರಕಾರ ನಿಮಗಿಂತ ಮಹಾಬಲಿಷ್ಠವಾದ ಜನಾಂಗಗಳನ್ನು ಹೊರಡಿಸಲು ಅವರ ದೇಶದಲ್ಲಿ ನಿಮ್ಮನ್ನು ಸೇರಿಸಿ, ಆ ದೇಶವನ್ನು ನಿಮಗೇ ಸ್ವದೇಶವಾಗಿ ಕೊಡಬೇಕೆಂದು ಸಂಕಲ್ಪಿಸಿ, ತಾನೇ ನಿಮ್ಮೊಂದಿಗಿದ್ದು ತನ್ನ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದನಲ್ಲಾ.

[39] ನೀವು ಇದನ್ನೆಲ್ಲಾ ಆಲೋಚಿಸಿ ಆಕಾಶದಲ್ಲಿಯೂ ಮತ್ತು ಭೂಮಿಯಲ್ಲಿಯೂ ಯೆಹೋವನೊಬ್ಬನೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುವುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿಡಬೇಕು.

[40] ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶುಭವುಂಟಾಗುವಂತೆಯೂ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸದಾಕಾಲ ಬಾಳುವಂತೆಯೂ, ನಾನು ನಿಮಗೆ ಈಗ ತಿಳಿಸಿದ ಆತನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು.

[41] ಆ ಕಾಲದಲ್ಲಿ ಮೋಶೆ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯ ಪಟ್ಟಣಗಳನ್ನು ಗೊತ್ತುಮಾಡಿದನು.

[42] ಯಾವ ದ್ವೇಷವೂ ಇಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಲಿ ಎಂದು ಆ ಪಟ್ಟಣಗಳನ್ನು ನೇಮಿಸಿದನು.

[43] ಅವು ಯಾವುವೆಂದರೆ - ರೂಬೇನ್ಯರಿಗೋಸ್ಕರ ಮೀಶೋರ್ ಎಂಬ ಎತ್ತರವಾದ ಬಯಲು ಸೀಮೆಯ ಅರಣ್ಯದಲ್ಲಿರುವ ಬೆಚೆರ್; ಗಾದ್ಯರಿಗೋಸ್ಕರ ಗಿಲ್ಯಾದಿನಲ್ಲಿರುವ ರಾಮೋತ್ ಮತ್ತು ಮನಸ್ಸೆಯವರಿಗೋಸ್ಕರ ಬಾಷಾನಿನಲ್ಲಿರುವ ಗೋಲಾನ್ ಪಟ್ಟಣಗಳು.

[44] ಮೋಶೆ ಇಸ್ರಾಯೇಲರಿಗೆ ಕೊಟ್ಟ ಧರ್ಮಶಾಸ್ತ್ರವು ಇದೇ.

[45] ಇಸ್ರಾಯೇಲರು ಐಗುಪ್ತ ದೇಶದಿಂದ ಬಂದಾಗ ಮೋಶೆಯು ಇಸ್ರಾಯೇಲರಿಗೆ ತಿಳಿಸಿದ ಆಜ್ಞಾವಿಧಿನಿಯಮಗಳು ಇವೇ.

[46] ಅವರು ಯೊರ್ದನ್ ನದಿಯ ಆಚೆ ಬೇತ್‍ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೆಷ್ಬೋನಿನಲ್ಲಿ ವಾಸಿಸಿದರು. ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಮೋಶೆಯೂ ಮತ್ತು ಇಸ್ರಾಯೇಲರೂ ಐಗುಪ್ತದೇಶದಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.

[47] ಅವರು ಅವನ ರಾಜ್ಯವನ್ನೂ, ಬಾಷಾನ್ ದೇಶದ ಅರಸನಾದ ಓಗನ ರಾಜ್ಯವನ್ನೂ ಮತ್ತು ಯೊರ್ದನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ರಾಜ್ಯಗಳನ್ನು ಗೆದ್ದುಕೊಂಡಿದ್ದರು.

[48] ಅಂತು ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ ಮತ್ತು

[49] ಅರಾಬಾ ಎಂಬ ತಗ್ಗಿನಲ್ಲಿ ಪಿಸ್ಗಾ ಬೆಟ್ಟದ ಬುಡದಲ್ಲಿರುವ ಅರಾಬ್ ಸಮುದ್ರದ ವರೆಗೆ ಯೊರ್ದನ್ ನದಿಯ ಆಚೆ ಇರುವ ಭಾಗವನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದರು.

ಧರ್ಮೋಪದೇಶಕಾಂಡ — Chapters