Skip to content
Opens in a new window
Listen to this chapter • 4:22

[1] ಯಾಜಕಸೇವೆ ಮಾಡುವ ಲೇವಿಯರಿಗಾಗಲಿ ಅಥವಾ ಲೇವಿಯ ಕುಲದವರಲ್ಲಿ ಯಾರಿಗೇ ಆಗಲಿ ಇತರ ಇಸ್ರಾಯೇಲರೊಡನೆ ಸ್ವಂತಕ್ಕಾಗಿ ಪಾಲಾಗಲಿ ಅಥವಾ ಸ್ವಾಸ್ತ್ಯವಾಗಲಿ ದೊರೆಯುವುದಿಲ್ಲ. ಯೆಹೋವನಿಗೆ ಸಮರ್ಪಿಸಲ್ಪಡುವ ಹೋಮದ್ರವ್ಯಗಳೂ ಆತನಿಗೋಸ್ಕರ ಪ್ರತ್ಯೇಕಿಸಲ್ಪಟ್ಟದ್ದೆಲ್ಲವೂ ಅವರಿಗೆ ಜೀವನಾಧಾರ.

[2] ಸ್ವದೇಶಸ್ಥರೊಂದಿಗೂ ಅವರಿಗೆ ಸ್ವತ್ತು ದೊರೆಯುವುದಿಲ್ಲ; ಯೆಹೋವನು ಅವರಿಗೆ ಹೇಳಿದಂತೆ ತಾನೇ ಅವರಿಗೆ ಸ್ವತ್ತಾಗಿರುವನು.

[3] ಜನರ ಕಡೆಯಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಗಳಲ್ಲಿಯಾಗಲಿ, ಆಡು ಮತ್ತು ಕುರಿಗಳಲ್ಲಿಯಾಗಲಿ ಪಶುವನ್ನು ಕೊಯಿದು ಯಜ್ಞಮಾಡುವವರೆಲ್ಲರೂ ಅದರ ಮುಂದೊಡೆಯನ್ನೂ, ಎರಡು ದವಡೆಗಳನ್ನೂ, ಕೋಷ್ಠವನ್ನೂ (ಒಳಭಾಗವನ್ನು) ಯಾಜಕರಿಗೆ ಕೊಡಬೇಕು.

[4] ಧಾನ್ಯ, ದ್ರಾಕ್ಷಾರಸ ಮತ್ತು ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗೂ ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನೂ ಅವರಿಗೆ ಕೊಡಬೇಕು.

[5] ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕುಲಗಳಲ್ಲಿ ಇವರನ್ನೂ ಮತ್ತು ಇವರ ತರುವಾಯ ಇವರ ಸಂತತಿಯವರನ್ನೂ ತನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆ ಮಾಡುವುದಕ್ಕೆ ತಾನೇ ನೇಮಿಸಿಕೊಂಡನಲ್ಲಾ.

[6] ಇಸ್ರಾಯೇಲರ ಯಾವುದಾದರೂ ಒಂದು ಊರಲ್ಲಿ ಇಳಿದುಕೊಂಡಿರುವ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು, ಯೆಹೋವನು ಆರಿಸಿಕೊಂಡ ಪವಿತ್ರ ಸ್ಥಳಕ್ಕೆ ಬಂದು,

[7] ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ತಾನೂ ಸೇವೆ ನಡಿಸಿದರೆ,

[8] ಅವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ, ಇತರ ಲೇವಿಯರೊಂದಿಗೆ ಸಮವಾಗಿ ಭೋಗಿಸುವುದಕ್ಕೆ ಬಾಧ್ಯನಾಗಿರುವನು.

[9] ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಅಸಹ್ಯವಾದ ಕೆಲಸಗಳನ್ನು ನೀವು ಅನುಸರಿಸಲೇಬಾರದು.

[10] ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು,

[11] ಮಾಟಗಾರರು, ತಂತ್ರಗಾರರು, ಸತ್ತವರಲ್ಲಿ ವಿಚಾರಿಸುವವರು, ಬೇತಾಳ, ಪ್ರೇತ, ಭೂತ ಎಂದು ಪೂಜಿಸುವವರು ಯಾರೂ ನಿಮ್ಮಲ್ಲಿ ಇರಬಾರದು.

[12] ಇಂಥ ಕೆಲಸಗಳನ್ನು ನಡಿಸುವವರನ್ನು ಯೆಹೋವನು ಸಹಿಸುವುದಿಲ್ಲ; ನಿಮ್ಮ ದೇವರಾದ ಯೆಹೋವನು ಇಂಥ ಹೇಯಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ಹೊರ ಹೋಗುವಂತೆ ಮಾಡಿದ್ದಾನೆ.

[13] ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು.

[14] ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ಶಕುನಗಳನ್ನು ನೋಡುತ್ತಾರೆ ಮತ್ತು ಯಂತ್ರ ಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಯೆಹೋವನಿಂದ ಅಪ್ಪಣೆಹೊಂದಲಿಲ್ಲ.

[15] ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು ನಿಮಗೆ ಏರ್ಪಡಿಸುವನು; ಅವನಿಗೆ ನೀವು ಕಿವಿಗೊಡಬೇಕು.

[16] ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನೀವು, “ನಮ್ಮ ದೇವರಾದ ಯೆಹೋವನ ಸ್ವರವನ್ನು ಇನ್ನು ಕೇಳುವುದಕ್ಕಾಗಲಿ ಅಥವಾ ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡವುದಕ್ಕಾಗಲಿ ನಮಗೆ ಮನಸ್ಸಿಲ್ಲ, ಹಾಗೇನಾದರು ಕೇಳಿ ನೋಡಿದರೆ ಸತ್ತು ಹೋಗುವೆವು” ಎಂದು ನೀವು ಹೇಳಿದಿರಷ್ಟೆ.

[17] ಆಗ ಯೆಹೋವನು ನನಗೆ, “ಇವರು ಹೇಳಿದ ಮಾತು ಒಳ್ಳೆಯದೇ;

[18] ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.

[19] ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಗೊಡುವದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು.

[20] ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ, ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತನಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.

[21] ‘ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ’ ಅಂದುಕೊಳ್ಳುತ್ತೀರೋ?

[22] ಪ್ರವಾದಿಯು ‘ಇದು ಯೆಹೋವನ ನುಡಿ’ ಎಂದು ಹೇಳಿ, ಆತನು ತಿಳಿಸಿದ ಸಂಗತಿಯೂ ನಡೆಯದೆ ಹೋದರೆ, ಅವನ ಮಾತು ಯೆಹೋವನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ನನ್ನ ಅಪ್ಪಣೆ ಇಲ್ಲದೆ ಮಾತನಾಡಿದವನು ಮತ್ತು ನೀವು ಅವನಿಗೆ ಹೆದರಬಾರದು” ಎಂದು ಹೇಳಿದನು.

ಧರ್ಮೋಪದೇಶಕಾಂಡ — Chapters