Skip to content
Opens in a new window
Listen to this chapter • 7:31

[1] ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು;

[2] “ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ?” ಎಂದು ಅವರನ್ನು ಕೇಳಲು ಅವರು ಅವನಿಗೆ; “ಇಲ್ಲ, ಪವಿತ್ರಾತ್ಮವರವು ಉಂಟೆಂಬುದನ್ನೇ ನಾವು ಕೇಳಿಲ್ಲ” ಅಂದರು.

[3] ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು.

[4] ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು,

[5] ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು.

[6] ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಇಳಿದುಬಂದನು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು.

[7] ಅಲ್ಲಿ ಸುಮಾರು ಹನ್ನೆರಡು ಮಂದಿ ಗಂಡಸರಿದ್ದರು.

[8] ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.

[9] ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.

[10] ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು.

[11] ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ,

[12] ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.

[13] ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು.

[14] ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.

[15] ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು;

[16] ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.

[17] ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ, ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರೂ ಭಯಭೀತರಾದರು. ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂದಿತು.

[18] ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.

[19] ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.

[20] ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.

[21] ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.

[22] ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು.

[23] ಆ ಕಾಲದಲ್ಲಿ ಈ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.

[24] ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು.

[25] ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ.

[26] ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ.

[27] ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು.

[28] ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.

[29] ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

[30] ಪೌಲನು ಜನರೊಳಗೆ ನುಗ್ಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.

[31] ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು.

[32] ಜನಸಮೂಹದಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಕೂಗಾಡಿದರೆ ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗುತ್ತಿದ್ದರು. ಬಹುಜನರಿಗೆ ತಾವು ಅಲ್ಲಿ ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ.

[33] ಯೆಹೂದ್ಯರು ಅಲೆಕ್ಸಾಂದ್ರನನ್ನು ಮುಂದಕ್ಕೆ ನೂಕಲು, ಗುಂಪಿನಲ್ಲಿ ಕೆಲವರು ಅವನಿಗೆ ಸೂಚನೆ ಕೊಟ್ಟರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಕೂಡಿದ್ದ ಜನರಿಗೆ ಪ್ರತಿವಾದ ಮಾಡಬೇಕೆಂದಿದ್ದನು.

[34] ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಎರಡು ಘಂಟೆ ಹೊತ್ತು ಕೂಗಿದರು.

[35] ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?

[36] ಈ ಸಂಗತಿ ಅಲ್ಲವೆನ್ನುವುದಕ್ಕೆ ಯಾರಿಂದಲೂ ಆಗದಿರುವುದರಿಂದ ನೀವು ಶಾಂತಿಯಿಂದಿರಬೇಕು; ದುಡುಕಿ ಏನೂ ಮಾಡಬಾರದು.

[37] ನೀವು ಹಿಡಿದುತಂದಿರುವ ಈ ಮನುಷ್ಯರು ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ, ನಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.

[38] ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಅಕ್ಕಸಾಲಿಗರಿಗೂ ಯಾವನ ಮೇಲಾದರೂ ದೂರುಗಳಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.

[39] ಏನಾದರೂ ಹೆಚ್ಚು ವಿಚಾರಣೆ ಬೇಕಾದರೆ ಅದು ನ್ಯಾಯವಾಗಿ ನೆರೆದ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು.

[40] ಈ ದಿನದಲ್ಲಿ ನ್ಯಾಯವಾದ ಕಾರಣವಿಲ್ಲದೆ ನೆರೆದ ಜನರ ವಿಷಯದಲ್ಲಿ ಇದು ಒಂದು ದಂಗೆ ಎಂಬುದಾಗಿ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದವಾಯಿತು. ಈ ದೊಂಬಿಯನ್ನು ಕುರಿತು ವಿಚಾರಣೆನಡೆಸಿದರೆ ನಮ್ಮಿಂದ ಉತ್ತರಕೊಡುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದನು.

[41] ಈ ಮಾತುಗಳನ್ನು ಹೇಳಿ ಜನರ ಗುಂಪನ್ನು ಕಳುಹಿಸಿಬಿಟ್ಟನು.

ಅಪೊಸ್ತಲರ ಕೃತ್ಯಗಳು — Chapters