Skip to content
Opens in a new window
Listen to this chapter • 5:41

[1] ಐದು ದಿನಗಳಾದ ಮೇಲೆ ಮಹಾಯಾಜಕನಾದ ಅನನೀಯನು, ಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಯನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು, ಪೌಲನ ಮೇಲೆ ದೇಶಾಧಿಪತಿಗೆ ದೂರು ಹೇಳಿದನು.

[2] ಪೌಲನನ್ನು ಕರೆಯಿಸಿದನಂತರ ತೆರ್ತುಲ್ಯನು ಅವನ ಮೇಲೆ ತಪ್ಪುಹೊರಿಸುವುದಕ್ಕೆ ಪ್ರಾರಂಭಿಸಿ ಹೀಗಂದನು; “ಮಹಾ ಶ್ರೇಷ್ಠನಾದ ಫೇಲಿಕ್ಸನೇ, ನಿನ್ನ ಮೂಲಕವಾಗಿ ನಮಗೆ ಬಹು ಸಮಾಧಾನ ಉಂಟಾಗುವುದರಿಂದಲೂ, ನಿನ್ನ ಮುಂದಾಲೋಚನೆಯಿಂದ ಈ ದೇಶದ ಜನರಿಗೆ ಎಲ್ಲಾ ವಿಧದಲ್ಲಿಯೂ, ಎಲ್ಲಾ ಸ್ಥಳಗಳಲ್ಲಿಯೂ, ಸುಧಾರಣೆಗಳು ಆಗುವುದರಿಂದಲೂ

[3] ನಾವು ಈ ಉಪಕಾರಗಳನ್ನು ಕೃತಜ್ಞತೆಯಿಂದ ಒಪ್ಪಿಕೊಳ್ಳುತ್ತೇವೆ.

[4] ಆದರೆ ನಿನ್ನನ್ನು ಹೆಚ್ಚಾಗಿ ಬೇಸರಗೊಳಿಸುವುದಕ್ಕೆ ಮನಸ್ಸಿಲ್ಲದೆ ನಾವು ಸಂಕ್ಷಿಪ್ತವಾಗಿ ಹೇಳುವ ಮಾತುಗಳನ್ನು ದಯೆಯಿಂದ ಕೇಳಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತೇನೆ.

[5] “ಈ ಮನುಷ್ಯನನು ‘ಹಾನಿಕರವೂ ಲೋಕದ ಎಲ್ಲೆಡೆ ಇರುವ, ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೆಂತಲೂ, ನಜರೇನ ಎಂಬ ಪಂಥದ ನಾಯಕ ಎಂತಲೂ ಕಂಡೆವು.’

[6] ಇದಲ್ಲದೆ ಇವನು, ದೇವಾಲಯವನ್ನು ಹೊಲೆಮಾಡುವುದಕ್ಕೆ ಪ್ರಯತ್ನಮಾಡಿದನು; ಆದಕಾರಣ ಇವನನ್ನು ನಾವು ಹಿಡಿದೆವು.

[7] (ಆದರೆ ಸಹಸ್ರಾಧಿಪತಿಯಾದ ಲೂಸ್ಯನು ಮಧ್ಯೆ ಬಂದು ಬಲವಂತಮಾಡಿ, ಅವನನ್ನು ನಮ್ಮ ಕೈಯಿಂದ ಬಿಡಿಸಿಕೊಂಡು ಹೋದನು.)

[8] ಇವನನ್ನು ನೀನೇ ವಿಚಾರಿಸಿದರೆ, ನಾವು ಇವನ ಮೇಲೆ ಹೊರಿಸುವ ಈ ತಪ್ಪುಗಳೆಲ್ಲಾ ನಿಜವೋ, ಸುಳ್ಳೋ ಎಂದು ಇವನಿಂದಲೇ ತಿಳಿದುಕೊಳ್ಳಬಹುದು” ಎಂದು ಹೇಳಿದನು.

[9] ಆಗ ಯೆಹೂದ್ಯರು ಈ ಸಂಗತಿಗಳು ನಿಜವಾಗಿವೆ ಎಂದು ಹೇಳಿ ತಾವೂ ಆ ದೋಷಾರೋಪಣೆ ಮಾಡುವವರೊಂದಿಗೆ ಸೇರಿಕೊಂಡರು.

[10] ದೇಶಾಧಿಪತಿಯು ಪೌಲನಿಗೆ; ನೀನು ಮಾತನಾಡಬಹುದೆಂದು ಸನ್ನೆಮಾಡಲು, ಅವನು ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ; “ನೀನು ಅನೇಕ ವರ್ಷಗಳಿಂದ ಈ ದೇಶದ ಜನರಿಗೆ ನ್ಯಾಯಾಧಿಪತಿಯಾಗಿರುತ್ತೀ, ಎಂದು ತಿಳಿದು ನಾನು ಧೈರ್ಯವಾಗಿ ಪ್ರತಿವಾದ ಮಾಡುತ್ತಿದ್ದೇನೆ.

[11] ನಾನು ದೇವಾರಾಧನೆಮಾಡುವುದಕ್ಕೆ, ಯೆರೂಸಲೇಮಿಗೆ ಹೋಗಿ, ಹನ್ನೆರಡು ದಿನಗಳು ಮಾತ್ರವಾಗಿದೆಯೆಂದು ನೀನು ತಿಳಿದುಕೊಳ್ಳಬಹುದು.

[12] ಅಲ್ಲಿ ದೇವಾಲಯದಲ್ಲಾಗಲಿ, ಸಭಾಮಂದಿರಗಳಲ್ಲಾಗಲಿ, ಪಟ್ಟಣದಲ್ಲಾಗಲಿ ನಾನು ಯಾರ ಸಂಗಡಲಾದರೂ ವಾದಿಸುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಲಿಲ್ಲ.

[13] ಇದಲ್ಲದೆ ಇವರು ಈಗ ನನ್ನ ಮೇಲೆಹೊರಿಸುವ ತಪ್ಪುಗಳನ್ನು ನಿಜವೆಂದು ನಿನಗೆ ತೋರಿಸಲಾರರು.

[14] ಒಂದನ್ನು ಮಾತ್ರ ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ, ಅದೇನೆಂದರೆ; ಇವರು ನನ್ನನ್ನು ಧರ್ಮವಿರೋಧಿ ಎಂದೂ ಹೇಳುವ, ಮಾರ್ಗಕ್ಕನುಸಾರವಾಗಿ ನಾನು ನಮ್ಮ ಪೂರ್ವಿಕರ ದೇವರನ್ನು ಆರಾಧಿಸುವವನಾಗಿದ್ದೇನೆ. ಧರ್ಮಶಾಸ್ತ್ರಕ್ಕನುಗುಣವಾಗಿರುವ ಮತ್ತು ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳನ್ನು ನಂಬುತ್ತೇನೆ.

[15] ಇದಲ್ಲದೆ ನೀತಿವಂತರಿಗೂ ಮತ್ತು ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.

[16] ಇದರ ದೆಸೆಯಿಂದ ದೇವರ ಮುಂದೆಯೂ, ಮನುಷ್ಯರ ಮುಂದೆಯೂ ನಿರ್ದೋಷವಾದ ಮನಸ್ಸಾಕ್ಷಿಯುಳ್ಳವನಾಗಿರಬೇಕೆಂದು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.

[17] “ಕೆಲವು ವರ್ಷಗಳಾದ ಮೇಲೆ ನಾನು, ನನ್ನ ಸ್ವದೇಶದವರಿಗೆ ಧರ್ಮದ್ರವ್ಯಗಳನ್ನು, ತರುವುದಕ್ಕೂ, ಕಾಣಿಕೆಗಳನ್ನು ಒಪ್ಪಿಸುವುದಕ್ಕೂ ಬಂದೆನು.

[18] ನಾನು ಶುದ್ಧಮಾಡಿಕೊಂಡವನಾಗಿ, ಅವುಗಳನ್ನು ಒಪ್ಪಿಸುತ್ತಿರುವಲ್ಲಿ, ಇವರು ನನ್ನನ್ನು ದೇವಾಲಯದಲ್ಲಿ ಕಂಡರು; ಆಗ ನನ್ನೊಂದಿಗೆ ಜನರ ಗುಂಪೇನೂ ಇರಲಿಲ್ಲ; ಗದ್ದಲವೂ ಇರಲಿಲ್ಲ. ನನ್ನನ್ನು ಕಂಡವರು ಆಸ್ಯಸೀಮೆಯಿಂದ ಬಂದ ಕೆಲವು ಯೆಹೂದ್ಯರೇ.

[19] ನನ್ನ ವಿರುದ್ಧ ಅವರಿಗೆ ಏನಾದರೂ ಇದ್ದರೆ, ತಾವೇ ನಿನ್ನ ಮುಂದೆ ತಪ್ಪುಹೊರಿಸುವುದಕ್ಕೆ ಇಲ್ಲಿಗೆ ಬರಬೇಕಾಗಿತ್ತು.

[20] ಇಲ್ಲವಾದ್ದರಿಂದ ನಾನು ಹಿರೀಸಭೆಯ ಎದುರಿನಲ್ಲಿ ನಿಂತಿದ್ದಾಗ, ನನ್ನಲ್ಲಿ ತಪ್ಪುಗಳೇನಾದರೂ ಕಂಡಿದ್ದರೆ ಇವರೇ ಹೇಳಲಿ.

[21] ನಾನು ಇವರ ನಡುವೆ ನಿಂತು; ‘ಪುನರುತ್ಥಾನದ ವಿಷಯದಲ್ಲಿ, ಈಹೊತ್ತು ನಿಮ್ಮಿಂದ ನನಗೆ ವಿಚಾರಣೆಯಾಗುತ್ತದೆ’ ಎಂದು ಕೂಗಿ ಹೇಳಿದರ ಬಗ್ಗೆ ಹೇಳಬಹುದೇ ಹೊರತು ಬೇರೆ ಏನನ್ನೂ ಹೇಳಲಾರರು” ಅಂದನು.

[22] ಫೇಲಿಕ್ಸನು ಈ ಮಾರ್ಗವನ್ನು, ತಕ್ಕ ಮಟ್ಟಿಗೆ ತಿಳಿದವನಾಗಿದ್ದರೂ ಅವರಿಗೆ; “ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿನ್ನ ಪ್ರಕರಣವನ್ನು ತೀರ್ಮಾನಿಸುತ್ತೇನೆಂದು” ಹೇಳಿ, ವಿಚಾರಣೆಯನ್ನು ತಡೆಮಾಡಿದನು.

[23] ಅನಂತರ ಪೌಲನನ್ನು ಕಾವಲ್ಲಿನಲ್ಲಿ ಇಡಬೇಕೆಂದೂ, ಆದರೆ ಕಟ್ಟು ನಿಟ್ಟು ಬೇಕಿಲ್ಲವೆಂದೂ, ಅವನಿಗೆ ಸಂಬಂಧಪಟ್ಟವರು ಅವನಿಗೆ ಉಪಚಾರ ಮಾಡುವುದನ್ನು, ಅಡ್ಡಿಮಾಡಬಾರದೆಂದು ಶತಾಧಿಪತಿಗೆ ಅಪ್ಪಣೆಮಾಡಿದನು.

[24] ಕೆಲವು ದಿನಗಳಾದ ಮೇಲೆ ಫೇಲಿಕ್ಸನು, ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಬಂದು, ಪೌಲನನ್ನು ಕರೆಯಿಸಿಕೊಂಡು ಕ್ರಿಸ್ತ ಯೇಸುವಿನಲ್ಲಿಡತಕ್ಕ ನಂಬಿಕೆಯ ವಿಷಯವಾಗಿ ಅವನು ಹೇಳಿದ ಮಾತುಗಳನ್ನು ಕೇಳಿದನು.

[25] ಪೌಲನು ನೀತಿ, ಶಮೆದಮೆ, ಹಾಗೂ ಮುಂದಣ ನ್ಯಾಯವಿಚಾರಣೆ ಇವುಗಳ ವಿಷಯವಾಗಿ ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ಭಯಗ್ರಸ್ತನಾಗಿ ಅವನಿಗೆ; “ಸದ್ಯಕ್ಕೆ ಹೋಗು; ಸಮಯ ದೊರಕಿದಾಗ ನಿನ್ನನ್ನು ಕರೆಯಿಸುವೆನು” ಎಂದು ಹೇಳಿದನು.

[26] ಅದೇ ಸಮಯದಲ್ಲಿ ಅವನು ಪೌಲನು ತನಗೇನಾದರೂ ಹಣಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ, ಅವನೊಂದಿಗೆ ಸಲ್ಲಾಪಮಾಡುತ್ತಿದ್ದನು.

[27] ಎರಡು ವರ್ಷಗಳು ತುಂಬಿದ ಮೇಲೆ ಫೇಲಿಕ್ಸನ ಸ್ಥಾನಕ್ಕೆ ಪೋರ್ಕಿಯ ಫೆಸ್ತನು ಎಂಬವನು ಬಂದನು. ಫೇಲಿಕ್ಸನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಬೇಕೆಂದು ಪೌಲನನ್ನು ಹಾಗೆಯೇ ಸೆರೆಯಲ್ಲಿ ಬಿಟ್ಟು ಹೋದನು.

ಅಪೊಸ್ತಲರ ಕೃತ್ಯಗಳು — Chapters