[1] ಆಗ ಪೌಲನು ಹಿರೀಸಭೆಯನ್ನು ದೃಷ್ಟಿಸಿ ನೋಡಿ; “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಅಂದನು.
[2] ಅದಕ್ಕೆ ಮಹಾಯಾಜಕನಾದ ಅನನೀಯನು; ಅವನ ಬಾಯಿಯ ಮೇಲೆ ಹೊಡೆಯಿರಿ ಎಂದು ಹತ್ತಿರದಲ್ಲಿ ನಿಂತಿದ್ದವರಿಗೆ ಅಪ್ಪಣೆ ಕೊಡಲು ಪೌಲನು ಅವನಿಗೆ;
[3] “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರನುಸಾರವಾಗಿ, ನನ್ನನ್ನು ವಿಚಾರಣೆಮಾಡುವುದಕ್ಕೆ ಕುಳಿತುಕೊಂಡು ಧರ್ಮಶಾಸ್ತ್ರದ ವಿರುದ್ಧವಾಗಿ ನನ್ನನ್ನು ಹೊಡೆಯುವುದಕ್ಕೆ ಅಪ್ಪಣೆಕೊಡುತ್ತೀಯೋ?” ಅಂದನು.
[4] ಹತ್ತಿರ ನಿಂತಿದ್ದವರು; “ದೇವರು ನೇಮಿಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ?” ಅನ್ನಲು,
[5] ಪೌಲನು; “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿದಿರಲಿಲ್ಲ. ನಿನ್ನ ಜನರಲ್ಲಿ ಅಧಿಪತಿಯಾಗಿರುವವನ ವಿಷಯವಾಗಿ ಕೆಟ್ಟದ್ದೇನೂ ಆಡಬಾರದೆಂದು ಬರೆದದೆಯಷ್ಟೆ” ಅಂದನು.
[6] ಸಭೆಯವರಲ್ಲಿ ಒಂದು ಪಾಲು ಸದ್ದುಕಾಯರೂ, ಒಂದು ಪಾಲು ಫರಿಸಾಯರೂ, ಇರುವುದನ್ನು ಪೌಲನು ಕಂಡು; “ಸಹೋದರರೇ, ನಾನು ಫರಿಸಾಯನು, ಫರಿಸಾಯನ ಮಗನು; ಸತ್ತವರು ಪುನರುತ್ಥಾನಹೊಂದುವರು ಎಂಬ ನಿರೀಕ್ಷೆಯ ನಿಮಿತ್ತವಾಗಿ ನಾನು ವಿಚಾರಣೆಮಾಡಲ್ಪಡುತ್ತಿದ್ದಾನೆ” ಎಂದು ಕೂಗಿದನು.
[7] ಇದನ್ನು ಅವನು ಹೇಳಿದಾಗ ಫರಿಸಾಯರಿಗೂ, ಸದ್ದುಕಾಯರಿಗೂ ಜಗಳ ಹುಟ್ಟಿತು; ಸಭೆಯಲ್ಲಿ ಒಡಕುಂಟಾಯಿತು.
[8] ಏಕೆಂದರೆ, ಪುನರುತ್ಥಾನವಾಗಲಿ, ದೇವದೂತನಾಗಲಿ, ದೇಹವಿಲ್ಲದ ಆತ್ಮವಾಗಲಿ ಇಲ್ಲವೆಂದು ಸದ್ದುಕಾಯರು ಹೇಳುವರು. ಆದರೆ ಇವೆರಡೂ ಉಂಟೆಂದು ಫರಿಸಾಯರು ಒಪ್ಪಿಕೊಳ್ಳುವರು.
[9] ಆಗ ದೊಡ್ಡ ಕೂಗಾಟವಾಯಿತು. ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳಲ್ಲಿ ಕೆಲವರು ಎದ್ದು; “ಈ ಮನುಷ್ಯನಲ್ಲಿ ನಮಗೆ ಕೆಟ್ಟದ್ದೇನೂ ಕಂಡುಬರುವುದಿಲ್ಲ; ಆತ್ಮವಾಗಲಿ, ದೇವದೂತನಾಗಲಿ, ಅವನ ಸಂಗಡ ಮಾತನಾಡಿದ್ದರೂ, ಮಾತನಾಡಿರಬಹುದು” ಎಂದು ವಾದಿಸಿದರು.
[10] ಜಗಳವು ಅಧಿಕವಾದಾಗ ಅವರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಾರೆಂದು ಸಹಸ್ರಾಧಿಪತಿಯು ಭಯಪಟ್ಟು ಸಿಪಾಯಿಗಳಿಗೆ; ನೀವು ಹೋಗಿ ಅವರ ಮಧ್ಯದಿಂದ ಅವನನ್ನು ಬಲವಂತವಾಗಿ ಹಿಡಿದು ಕೋಟೆಯೊಳಗೆ ತರಬೇಕೆಂದು ಅಪ್ಪಣೆ ಮಾಡಿದನು.
[11] ಅಂದು ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು; “ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವುದು” ಅಂದನು.
[12] ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ; ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿಕೊಂಡರು.
[13] ಹೀಗೆ ಮಾಡಿದವರು ನಲವತ್ತು ಮಂದಿಗಿಂತ ಹೆಚ್ಚಾಗಿದ್ದರು.
[14] ಇವರು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಹೋಗಿ; “ನಾವು ಪೌಲನನ್ನು ಕೊಲ್ಲುವ ತನಕ ಬಾಯಲ್ಲಿ ಏನೂ ಹಾಕುವುದಿಲ್ಲವೆಂದು ಕಠಿಣ ಶಪಥವನ್ನು ಮಾಡಿಕೊಂಡಿದ್ದೇವೆ.
[15] ಆದುದರಿಂದ ನೀವು ಸಭೆಯವರ ಸಹಿತ ಸಹಸ್ರಾಧಿಪತಿಯ ಬಳಿಗೆ ಹೋಗಿ, ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದು ನೆವಹೇಳಿ ಅವನನ್ನು ಕೋಟೆಯೊಳಗೆ ನಿಮ್ಮ ಬಳಿಗೆ ಕರೆದುಕೊಂಡು ಬರುವ ಹಾಗೆ ಕೇಳಿಕೊಳ್ಳಬೇಕು. ನಾವಾದರೋ, ಅವನು ಹತ್ತಿರ ಬರುವುದಕ್ಕಿಂತ ಮೊದಲೇ ಅವನನ್ನು ಕೊಲ್ಲುವುದಕ್ಕೆ ಸಿದ್ಧವಾಗಿದ್ದೇವೆ” ಅಂದರು.
[16] ಅವರು ಹೊಂಚು ಹಾಕಿಕೊಂಡಿರುವುದನ್ನು, ಪೌಲನ ಸೋದರಳಿಯನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ಆ ವಾರ್ತೆಯನ್ನು ತಿಳಿಸಿದನು.
[17] ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆಯಿಸಿ; “ಈ ಯೌವನಸ್ಥನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ಮಾತು ಇದೆ” ಎಂದು ಹೇಳಿದನು.
[18] ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ; “ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ತಮ್ಮ ಬಳಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು; ತಮಗೆ ತಿಳಿಸಬೇಕಾದ ಏನೋ ಒಂದು ಮಾತು ಇದೆಯಂತೆ” ಎಂದು ಹೇಳಲು,
[19] ಸಹಸ್ರಾಧಿಪತಿಯು ಅವನನ್ನು ಕೈಹಿಡಿದು ಒಂದು ಕಡೆಗೆ ಏಕಾಂತವಾಗಿ ಕರೆದುಕೊಂಡು ಹೋಗಿ; “ನೀನು ನನಗೆ ಹೇಳಬೇಕಾದದ್ದು ಏನು?” ಎಂದು ಕೇಳಿದನು.
[20] ಅವನು; “ಯೆಹೂದ್ಯರು ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ವಿಚಾರಣೆಮಾಡಬೇಕೆಂಬ ನೆವ ಹೇಳಿ ನೀವು ನಾಳೆ ಅವನನ್ನು ಹಿರೀಸಭೆಯ ಮುಂದೆ ಕರೆದು ತರಬೇಕೆಂದು ಕೇಳಿಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
[21] ನೀವು ಅವರ ಮಾತಿಗೆ ಬದ್ಧರಾಗಬೇಡಿ; ಏಕೆಂದರೆ ನಲವತ್ತಕ್ಕಿಂತ ಹೆಚ್ಚು ಮಂದಿ ಯೆಹೊದ್ಯರು ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥವನ್ನು ಮಾಡಿಕೊಂಡು, ಅವನಿಗೋಸ್ಕರ ಹೊಂಚುಹಾಕುತ್ತಾ ಇದ್ದಾರೆ. ಈಗ ಅವರು ನಿಮ್ಮ ಒಪ್ಪಿಗೆಯನ್ನೇ ಎದುರುನೋಡುತ್ತಾ ಸಿದ್ಧವಾಗಿದ್ದಾರೆ” ಅಂದನು.
[22] ಆಗ ಸಹಸ್ರಾಧಿಪತಿಯು ಆ ಯೌವನಸ್ಥನಿಗೆ; “ಈ ಸಂಗತಿಗಳನ್ನು ನನಗೆ ಸೂಚಿಸಿದ್ದನ್ನು ನೀನು ಯಾರಿಗೂ ಹೇಳಬೇಡ” ಎಂದು ಖಂಡಿತವಾಗಿ ಅಪ್ಪಣೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟನು.
[23] ಆ ಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ; “ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ, ಎಪ್ಪತ್ತುಮಂದಿ ಕುದುರೆ ಸವಾರರನ್ನೂ, ಇನ್ನೂರು ಮಂದಿ ಈಟಿ ಹಿಡಿದ ಸೈನಿಕರನ್ನು ಸಿದ್ಧಮಾಡಿರಿ.”
[24] ಮತ್ತು ಕುದುರೆಗಳನ್ನು ಸಿದ್ಧಮಾಡಿ, ಪೌಲನನ್ನು ಹತ್ತಿಸಿ, ದೇಶಾಧಿಪತಿಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಅಪ್ಪಣೆ ಕೊಟ್ಟನು.
[25] ಇದಲ್ಲದೆ ಈ ಕೆಳಗಣ ಅಭಿಪ್ರಾಯದ ಒಂದು ಪತ್ರವನ್ನು ಬರೆದನು, ಅದೇನೆಂದರೆ;
[26] “ಮಹಾರಾಜರಾಜಶ್ರೀ ದೇಶಾಧಿಪತಿಯಾದ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆ.
[27] ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ, ನಾನು ಸಿಪಾಯಿಗಳೊಂದಿಗೆ ಹೋಗಿ ಅವನನ್ನು ರೋಮಾಪುರದ ಹಕ್ಕುದಾರನೆಂದು ತಿಳಿದು ಅವನನ್ನು ತಪ್ಪಿಸಿದೆನು.
[28] ಇದಲ್ಲದೆ ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿಯಲಪೇಕ್ಷಿಸಿ, ಅವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆನು.
[29] ಅಲ್ಲಿ ಅವರು ತಮ್ಮ ಧರ್ಮಶಾಸ್ತ್ರ ವಿಷಯಗಳನ್ನು ಹಿಡಿದು ಅವನ ವಿರುದ್ಧ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದ ಯಾವ ಅಪರಾಧವನ್ನೂ ಹೊರಿಸಲಿಲ್ಲವೆಂದು ನನಗೆ ಕಂಡುಬಂತು.
[30] ಈ ಮನುಷ್ಯನಿಗೆ ವಿರುದ್ಧವಾಗಿ ಒಳಸಂಚು ನಡೆಯುತ್ತಿದೆ ಎಂದು ನನಗೆ ತಿಳಿದುಬಂದ್ದುದರಿಂದ ಕೂಡಲೆ, ನಾನು ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ, ಅವನ ವಿರುದ್ಧ ತಪ್ಪುಹೊರಿಸುವವರಿಗೆ ನಿನ್ನ ಮುಂದೆಯೇ ಅವನಿಗೆ ವಿರುದ್ಧವಾಗಿ ವಾದ ಮಂಡಿಸುವ ಹಾಗೆ ಅಪ್ಪಣೆ ಕೊಟ್ಟೆನು” ಎಂಬುದೇ.
[31] ಸಿಪಾಯಿಗಳು ತಮಗೆ ಅಪ್ಪಣೆಯಾದಂತೆ, ರಾತ್ರಿಕಾಲದಲ್ಲಿ ಪೌಲನನ್ನು ಅಂತಿಪತ್ರಿ ಊರಿಗೆ ಕರೆದುಕೊಂಡು ಹೋದರು.
[32] ಮರುದಿನ ಅವರು ಸವಾರರನ್ನು ಅವನ ಜೊತೆಯಲ್ಲಿ ಹೋಗುವಂತೆ ಮಾಡಿ, ತಾವು ಕೋಟೆಗೆ ಹಿಂತಿರುಗಿ ಬಂದರು.
[33] ಸವಾರರು ಕೈಸರೈಯಕ್ಕೆ ಸೇರಿ, ದೇಶಾಧಿಪತಿಗೆ ಪತ್ರವನ್ನು ಒಪ್ಪಿಸಿ, ಪೌಲನನ್ನು ಅವನ ಮುಂದೆ ನಿಲ್ಲಿಸಿದರು.
[34] ದೇಶಾಧಿಪತಿಯು ಆ ಕಾಗದವನ್ನು ಓದಿ, ಪೌಲನು ಯಾವ ಸೀಮೆಯವನು? ಎಂದು ಕೇಳಿ ಅವನು ಕಿಲಿಕ್ಯದವನೆಂದು ತಿಳಿದು;
[35] “ನಿನ್ನ ಮೇಲೆ ತಪ್ಪು ಹೊರಿಸುವವರು ಬಂದ ನಂತರ, ನಿನ್ನ ಕಾರ್ಯವನ್ನು ಪೂರ್ಣವಾಗಿ ವಿಚಾರಿಸುತ್ತೇನೆ” ಎಂದು ಹೇಳಿ, ಅವನನ್ನು ಹೆರೋದನ ಅರಮನೆಯಲ್ಲಿ ಇಟ್ಟು ಕಾಯಬೇಕೆಂಬುದಾಗಿ ಅಪ್ಪಣೆಮಾಡಿದನು.