Skip to content
Opens in a new window
Listen to this chapter • 7:26

[1] ಬಳಿಕ ಕೆಲವರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು; “ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿರುವ ನಿಯಮದ ಪ್ರಕಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು” ಎಂಬುದಾಗಿ ಸಹೋದರರಿಗೆ ಉಪದೇಶಮಾಡುತ್ತಿದ್ದರು.

[2] ಅವರೊಂದಿಗೆ ಪೌಲ ಮತ್ತು ಬಾರ್ನಬರಿಗೆ ಚರ್ಚೆಯೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಪೌಲ, ಬಾರ್ನಬರು ಮತ್ತು ತಮ್ಮಲ್ಲಿ ಬೇರೆ ಕೆಲವರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು ಸಹೋದರರು ತೀರ್ಮಾನಿಸಿದರು.

[3] ಆದುದರಿಂದ ಸಭೆಯವರು ಅವರನ್ನು ಸಾಗ ಕಳುಹಿಸಲು, ಅವರು ಫೊಯಿನಿಕೆ ಮತ್ತು ಸಮಾರ್ಯ ಸೀಮೆಗಳನ್ನು ಹಾದು ಹೋಗುತ್ತಿರುವಾಗ ಅನ್ಯಜನರು ಕರ್ತನ ಕಡೆಗೆ ತಿರುಗಿಕೊಂಡ ಸಂಗತಿಯನ್ನು ಅಲ್ಲಿದ್ದ ಸಹೋದರರಿಗೆ ವಿವರವಾಗಿ ಹೇಳಿ ಅವರೆಲ್ಲರನ್ನು ಬಹಳವಾಗಿ ಸಂತೋಷಪಡಿಸಿದರು.

[4] ಅವರು ಯೆರೂಸಲೇಮಿಗೆ ಬಂದ ಮೇಲೆ ಸಭೆಯವರೂ ಅಪೊಸ್ತಲರೂ ಸಭೆಯ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.

[5] ಆದರೆ ಫರಿಸಾಯ ಮತದವರಲ್ಲಿ ಯೇಸುವನ್ನು ನಂಬಿದ್ದ ಕೆಲವರು ಎದ್ದು; “ದೇವರ ಕಡೆಗೆ ತಿರುಗಿಕೊಂಡಿರುವ ಅನ್ಯಜನರಿಗೆ ಸುನ್ನತಿಮಾಡಿಸಬೇಕು, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಕ್ಕೆ ಅವರಿಗೆ ಅಪ್ಪಣೆಕೊಡಬೇಕು” ಎಂದು ಹೇಳಿದರು.

[6] ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ, ಅವರಲ್ಲಿ ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವರಿಗೆ;

[7] “ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ದೇವರು ಬಹಳ ದಿನಗಳ ಹಿಂದೆ ನಿಮ್ಮೊಳಗಿಂದ ನನ್ನನ್ನು ಆರಿಸಿಕೊಂಡದ್ದು ನಿಮಗೇ ತಿಳಿದಿದೆ.

[8] ಮತ್ತು ಹೃದಯವನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮವರವನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಸಾಕ್ಷಿಕೊಟ್ಟನು.

[9] ಇದಲ್ಲದೆ ಆತನು ನಮಗೂ, ಅವರಿಗೂ ಏನೂ ಭೇದಮಾಡದೆ ಅವರ ಹೃದಯಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.

[10] ಹೀಗಿರುವುದರಿಂದ ನಮ್ಮ ಪೂರ್ವಿಕರಾಗಲಿ, ನಾವಾಗಲಿ ಹೊರಲಾಗದ ನೋಗವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಏಕೆ?

[11] ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬುದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು” ಎಂದು ಹೇಳಿದನು.

[12] ಗುಂಪುಸೇರಿದ್ದವರೆಲ್ಲರೂ ಈ ಮಾತುಗಳನ್ನು ಕೇಳಿ ಮೌನವಾಗಿದ್ದು ಬಾರ್ನಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕ ಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ವಿವರಿಸಿದ್ದನ್ನು ಕಿವಿಗೊಟ್ಟು ಕೇಳಿದರು.

[13] ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ;

[14] “ಸಹೋದರರೇ, ನಾನು ಹೇಳುವುದನ್ನು ಕೇಳಿರಿ. ದೇವರು ಮೊದಲು ಅನ್ಯಜನರನ್ನು ಕೃಪಾಕಟಾಕ್ಷದಿಂದ ನೋಡಿ ತನ್ನ ಹೆಸರಿಗಾಗಿ ಅವರೊಳಗಿನಿಂದ ಒಬ್ಬ ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.

[15] ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ. ಹೇಗೆಂದರೆ;

[16] “‘ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಪುನಃ ಕಟ್ಟುವೆನು. ಪಾಳು ಬಿದ್ದದ್ದನ್ನು ಜೀರ್ಣೋದ್ಧಾರಮಾಡಿ ಸುಭದ್ರವಾಗಿ ನಿಲ್ಲಿಸುವೆನು.

[17] ಮನುಷ್ಯರಲ್ಲಿ ಉಳಿದ ಜನರು ಅಂದರೆ ದೇವಜನರೆನಿಸಿಕೊಳ್ಳುವ ಸಕಲ ಜನಾಂಗಗಳೂ ಕರ್ತನನ್ನು ಹುಡುಕುವರು ಎಂದು

[18] ಅನಾದಿಕಾಲದಿಂದ ಈ ಕಾರ್ಯಗಳನ್ನು ತಿಳಿಯಪಡಿಸುವ ಕರ್ತನು ನುಡಿಯುತ್ತಾನೆ’ ಎಂದು ಬರೆದದೆ.

[19] “ಹೀಗಿರಲಾಗಿ ನನ್ನ ಅಭಿಪ್ರಾಯ ಏನೆಂದರೆ; ಅನ್ಯಜನರಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವವರನ್ನು ತೊಂದರೆಪಡಿಸಬಾರದು.

[20] ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ಹಾದರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವಿರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆಯೋಣ ಎಂದು ತೀರ್ಮಾನಿಸಿದರು.

[21] ಏಕೆಂದರೆ ಪುರಾತನಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ” ಎಂದು ಹೇಳಿದನು.

[22] ಆಗ ಅಪೊಸ್ತಲರೂ, ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಮತ್ತು ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು,

[23] ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ; “ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ, ಅಂತಿಯೋಕ್ಯ, ಸಿರಿಯ, ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೂ ಮಾಡುವ ವಂದನೆ;

[24] “ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ,

[25] ನಾವು ಕೆಲವರನ್ನು ಆರಿಸಿಕೊಂಡು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ,

[26] ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು.

[27] ಆದುದರಿಂದ ಯೂದನನ್ನೂ, ಸೀಲನನ್ನೂ ಕಳುಹಿಸಿಕೊಡುತ್ತಿದ್ದೇವೆ. ಅವರು ನಾವು ಬರೆದಿರುವ ಈ ಸಂಗತಿಗಳನ್ನು ಬಾಯಿಮಾತಿನಿಂದಲೂ ನಿಮಗೆ ತಿಳಿಸುವರು.

[28] ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ.

[29] ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.”

[30] ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು.

[31] ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು.

[32] ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು.

[33] ಅಲ್ಲಿ ಕೆಲವು ಕಾಲ ಕಳೆದ ನಂತರ ತಮ್ಮನ್ನು ಕಳುಹಿಸಿದವರ ಬಳಿಗೆ ಪುನಃ ಹೋಗುವುದಕ್ಕೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡರು.

[34] ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.

[35] ಆದರೆ ಪೌಲನೂ ಮತ್ತು ಬಾರ್ನಬನೂ ಅಂತಿಯೋಕ್ಯದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಉಪದೇಶಮಾಡುತ್ತಾ ಕರ್ತನ ವಾಕ್ಯವೆಂಬ ಸುವಾರ್ತೆಯನ್ನು ಸಾರುತ್ತಾ ಇದ್ದರು.

[36] ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ; “ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಊರುಗಳಿಗೆ ಪುನಃ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ” ಎಂದು ಹೇಳಿದನು.

[37] ಅದಕ್ಕೆ ಬಾರ್ನಬನು ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು

[38] ತಮ್ಮ ಸಂಗಡ ಕರೆದುಕೊಂಡುಹೋಗಬೇಕೆಂದಿದ್ದಾಗ ಪೌಲನು; ನಮ್ಮೊಂದಿಗೆ ಸೇವೆಗೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟುಬಿಟ್ಟವನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ನೆನಸಿದನು.

[39] ಈ ವಿಷಯದಲ್ಲಿ ತೀವ್ರವಾದ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸಮುದ್ರ ಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು.

[40] ಪೌಲನು ಸೀಲನನ್ನು ಆರಿಸಿಕೊಂಡು ಸಹೋದರರಿಂದ ಕರ್ತನ ಕೃಪಾಶ್ರಯಕ್ಕೆ ಒಪ್ಪಿಸಲ್ಪಟ್ಟವನಾಗಿ ಅಲ್ಲಿಂದ

[41] ಹೊರಟು ಸಿರಿಯ ಮತ್ತು ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.

ಅಪೊಸ್ತಲರ ಕೃತ್ಯಗಳು — Chapters