Skip to content
Opens in a new window
Listen to this chapter • 5:41

[1] ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.

[2] ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿನಗಳ ಮೊದಲೇ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.

[3] ಪೌಲನು ಅವರ ಮನೆಗೆ ಹೋಗಿ ತಾನೂ, ಅವರೂ ಒಂದೇ ಕಸುಬಿನವರಾಗಿದ್ದುದರಿಂದ ಅವರ ಸಂಗಡವಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರಮಾಡುವುದು ಅವರ ಕಸುಬಾಗಿತ್ತು.

[4] ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.

[5] ಸೀಲನೂ ಮತ್ತು ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಹೇಳಿದನು.

[6] ಅವರು ಎದುರಿಸಿ, ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ; “ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಶುದ್ಧನು. ನಾನು ಇಂದಿನಿಂದ ಅನ್ಯಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿ,

[7] ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತ ಯುಸ್ತನೆಂಬುವನ ಮನೆಗೆ ಹೋದನು. ಅವನ ಮನೆಯು ಸಭಾಮಂದಿರದ ಬದಿಯಲ್ಲಿ ಇತ್ತು.

[8] ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡರು.

[9] ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,

[10] ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.

[11] ಅವನು ಒಂದು ವರ್ಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.

[12] ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು;

[13] “ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು” ದೂರುಹೇಳಿದರು.

[14] ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; “ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ.

[15] ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ” ಎಂದು ಹೇಳಿ,

[16] ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು.

[17] ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.

[18] ಪೌಲನು ಇನ್ನು ಅನೇಕ ದಿನಗಳ ಕಾಲ ಅಲ್ಲಿದ್ದ ಅನಂತರ ಸಹೋದರರಿಂದ ಅಪ್ಪಣೆತೆಗೆದುಕೊಂಡು ತನಗೆ ದೀಕ್ಷೆ ಇದ್ದುದರಿಂದ ಕೆಂಖ್ರೆಯ ಪಟ್ಟಣದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಅವನ ಸಂಗಡ ಹೊರಟರು.

[19] ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟು, ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.

[20] ಅವರು ಅವನನ್ನು ಇನ್ನು ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ,

[21] “ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,

[22] ಯೆರೂಸಲೇಮಿಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.

[23] ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ಪುನಃ ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ, ಫ್ರುಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.

[24] ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು.

[25] ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.

[26] ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.

[27] ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.

[28] ಅವನು ಹೋಗಿ ಯೇಸುವೇ ಕ್ರಿಸ್ತನೆಂದು ದೇವರ ವಾಕ್ಯದಿಂದ ಯೆಹೂದ್ಯರಿಗೆ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಈ ವಿಷಯವನ್ನು ರುಜುವಾತುಪಡಿಸುತ್ತಾ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದವರಿಗೆ ಬಹಳ ಸಹಾಯಮಾಡಿದನು.

ಅಪೊಸ್ತಲರ ಕೃತ್ಯಗಳು — Chapters