[1] ಅಪೊಸ್ತಲರು ಜನರಿಗೆ ಉಪದೇಶಮಾಡುತ್ತಿರುವಾಗಲೇ ಯಾಜಕರೂ, ದೇವಾಲಯದ ಅಧಿಪತಿಯೂ, ಸದ್ದುಕಾಯರೂ ಅವರಿಗೆ ವಿರೋಧವಾಗಿ ಬಂದರು.
[2] ಯೇಸುವಿನ ದೃಷ್ಟಾಂತದಿಂದ ಸತ್ತವರಿಗೆ ಪುನರುತ್ಥಾನವಾಗುವುದೆಂದು ಅಪೊಸ್ತಲರು ಜನರಿಗೆ ಬೋಧಿಸುತ್ತಿರುವುದನ್ನು ನೋಡಿದಾಗ ಅವರಿಗೆ ಕೋಪ ಬಂತು.
[3] ಅವರನ್ನು ಹಿಡಿದು ಆಗಲೇ ಸಾಯಂಕಾಲವಾದ್ದದರಿಂದ ಮರುದಿನದವರೆಗೆ ಕಾವಲಲ್ಲಿಟ್ಟರು.
[4] ಆದರೆ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು.
[5] ಮರುದಿನ ಯೆಹೂದ್ಯರ ಅಧಿಕಾರಿಗಳೂ, ಹಿರಿಯರೂ, ಶಾಸ್ತ್ರಿಗಳೂ ಯೆರೂಸಲೇಮಿನಲ್ಲಿ ಕೂಡಿಬಂದರು.
[6] ಅವರೊಂದಿಗೆ ಅನ್ನನೆಂಬ ಮಹಾಯಾಜಕನೂ, ಕಾಯಫನೂ, ಯೋಹಾನನೂ, ಅಲೆಕ್ಸಾಂದ್ರನೂ, ಮಹಾಯಾಜಕನ ಸಂಬಂಧಿಕರೆಲ್ಲರೂ ಇದ್ದರು.
[7] ಇವರು ಪೇತ್ರ ಮತ್ತು ಯೋಹಾನನ್ನು ನಡುವೆ ನಿಲ್ಲಿಸಿ “ನೀವು ಯಾವ ಶಕ್ತಿಯಿಂದ ಮತ್ತು ಯಾರ ಹೆಸರಿನಿಂದ ಇದನ್ನು ಮಾಡುತ್ತಿದ್ದೀರಿ” ಎಂದು ಕೇಳಲು,
[8] ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ; “ಅಧಿಕಾರಿಗಳೇ, ಹಿರಿಯರೇ,
[9] ಒಬ್ಬ ಅಂಗಹೀನನಿಗೆ ಆದ ಉಪಕಾರದ ವಿಷಯದಲ್ಲಿ ಅವನಿಗೆ ಹೇಗೆ ಸ್ವಸ್ಥವಾಯಿತು ಎಂಬುದಾಗಿ ನೀವು ನಮ್ಮನ್ನು ಈ ಹೊತ್ತು ವಿಚಾರಿಸುತ್ತಿದ್ದೀರಿ.
[10] ನೀವು ಶಿಲುಬೆಗೆ ಹಾಕಿಸಿದಂತಹ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂತಹ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ಸೌಖ್ಯಹೊಂದಿದದವನಾಗಿ ನಿಮ್ಮೆದುರಿನಲ್ಲಿ ನಿಂತಿದ್ದಾನೆ ಎಂಬುದನ್ನು ನೀವು ಮತ್ತು ಇಸ್ರಾಯೇಲ್ ಜನರೆಲ್ಲರಿಗೂ ಈ ಸಂಗತಿ ತಿಳಿದಿರಲಿ.
[11] “ಮನೆಕಟ್ಟುವವರಾದ ನೀವು ಬೇಡವೆಂದು ಬಿಟ್ಟಕಲ್ಲೇ ಆತನು; ಆತನೇ ಬಹು ಮುಖ್ಯವಾದ ಮೂಲೆಗಲ್ಲಾದನು.
[12] ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಗುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರುವ ಮತ್ತ್ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
[13] ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು.
[14] ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು. ಮತ್ತು ಕ್ಷೇಮ ಹೊಂದಿದ ಆ ಮನುಷ್ಯನು ಅವರ ಸಂಗಡ ನಿಂತಿರುವುದನ್ನು ನೋಡಿ ಪ್ರತಿಯಾಗಿ ಏನೂ ಮಾತನಾಡಲಾರದೆ ಇದ್ದರು.
[15] ಆ ಮೇಲೆ ಸಭೆಯಿಂದ ಸ್ವಲ್ಪ ಹೊರಗೆ ಹೋಗಿರೆಂದು ಅವರಿಗೆ ಅಪ್ಪಣೆ ಕೊಟ್ಟು,,
[16] “ಇವರನ್ನು ನಾವೇನು ಮಾಡೋಣ? ಬಹು ಅಪರೂಪವಾದ ಒಂದು ಸೂಚಕಕಾರ್ಯವು ಇವರ ಮೂಲಕವಾಗಿ ನಡೆಯಿತೆಂಬುದು ಯೆರೂಸಲೇಮಿನ ಜನರೆಲ್ಲರಿಗೂ ಗೊತ್ತಾಗಿದೆ, ಅದನ್ನು ಅಲ್ಲಗಳೆಯುವಂತಿಲ್ಲ.
[17] ಆದರೆ ಇದು ಜನರಲ್ಲಿ ಇನ್ನೂ ಹರಡದಂತೆ ಮುಂದೆ ಆ ಯೇಸುವಿನ ಹೆಸರನ್ನು ಎತ್ತಿ ಇನ್ನು ಮೇಲೆ ಯಾರ ಸಂಗಡಲೂ ಮಾತನಾಡಬಾರದೆಂದು ಅವರನ್ನು ಬೆದರಿಸೋಣ ಎಂಬುದಾಗಿ ಅವರು ಪರಸ್ಪರ ಆಲೋಚನೆ ಮಾಡಿಕೊಂಡರು.”
[18] ಆಗ ಅವರನ್ನು ಕರೆಯಿಸಿ ಯೇಸುವಿನ ಹೆಸರನ್ನು ಎಲ್ಲೂ ಎತ್ತಬಾರದು ಹಾಗು ಉಪದೇಶ ಮಾಡಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು.
[19] ಅದಕ್ಕೆ ಪೇತ್ರ ಮತ್ತು ಯೋಹಾನನ್ನು; ಅವರಿಗೆ “ದೇವರ ಮಾತನ್ನು ಕೇಳುವುದಕ್ಕಿಂತ ನಿಮ್ಮ ಮಾತನ್ನು ಕೇಳುವುದು ಸರಿಯೇ? ಅದು ದೇವರ ಮುಂದೆ ನ್ಯಾಯವೋ? ನೀವೇ ತೀರ್ಪು ಮಾಡಿಕೊಳ್ಳಿರಿ;
[20] ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಉತ್ತರಕೊಟ್ಟರು.
[21] ನಡೆದಿದ್ದ ಸೂಚಕ ಕಾರ್ಯಕ್ಕೋಸ್ಕರ ಜನರೆಲ್ಲರು ದೇವರನ್ನು ಕೊಂಡಾಡುತ್ತಿದ್ದ ಕಾರಣ ಅವರ ದೆಸೆಯಿಂದ ಸಭೆಯವರು ಅಪೊಸ್ತಲರನ್ನು ದಂಡಿಸತಕ್ಕ ಉಪಾಯವನ್ನು ಕಾಣದೆ ಅವರನ್ನು ಇನ್ನಷ್ಟು ಬೆದರಿಸಿ ಬಿಟ್ಟು ಬಿಟ್ಟರು.
[22] ಈ ಸೂಚಕಕಾರ್ಯದಿಂದ ಸ್ವಸ್ಥತೆ ಹೊಂದಿದ ಆ ಮನುಷ್ಯನಿಗೆ ನಲವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.
[23] ಅವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮುಖ್ಯಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು.
[24] ಅವರು ಕೇಳಿ ಏಕಮನಸ್ಸು ಉಳ್ಳವರಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ ಹೀಗೆ ಪ್ರಾರ್ಥಿಸಿದರು;, “ಕರ್ತನೇ, ಭೂಮ್ಯಾಕಾಶಗಳನ್ನೂ, ಸಮುದ್ರಗಳನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ,
[25] ನೀನು ಪವಿತ್ರಾತ್ಮನ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ, “‘ಅನ್ಯಜನಗಳು ಏಕೆ ಆಕ್ರೋಶಗೊಂಡರು? ಜನಾಂಗಗಳವರು ಏಕೆ ವ್ಯರ್ಥಕಾರ್ಯಗಳನ್ನು ಯೋಚಿಸುವರು?
[26] ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಲೋಕದ ರಾಜರು, ಸನ್ನದ್ಧರಾಗಿ ನಿಂತರು, ಅಧಿಕಾರಿಗಳು ಒಟ್ಟಾಗಿ ಕೂಡಿಕೊಂಡರು’ ಎಂದು ಹೇಳಿಸಿದಿಯಲ್ಲವೇ?
[27] ಆ ಮಾತಿಗೆ ಅನುಸಾರವಾಗಿಯೇ ಈ ಪಟ್ಟಣದಲ್ಲಿ ಹೆರೋದನೂ, ಪೊಂತ್ಯ ಪಿಲಾತನೂ, ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಅನ್ಯಜನರೊಡನೆ ಮತ್ತು ಇಸ್ರಾಯೇಲ್ ಜನರೊಡನೆ ಒಟ್ಟಾಗಿ ಸೇರಿಕೊಂಡು,
[28] ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು.
[29] ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ
[30] ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಅಂದರು.
[31] ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.
[32] ಕ್ರಿಸ್ತನನ್ನು ನಂಬಿದವರ ಹೃದಯವೂ, ಪ್ರಾಣವೂ ಒಂದೇ ಆಗಿತ್ತು. ಯಾರೂ ತಮ್ಮ ಸ್ವತ್ತನ್ನು ತನ್ನದು ಎಂದು ಭಾವಿಸದೆ ಎಲ್ಲರೂ ಅದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು.
[33] ಮತ್ತು ಕರ್ತನಾದ ಯೇಸುವಿನ ಪುನರುತ್ಥಾನಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು; ದೇವರ ದಯವು ಅವರೆಲ್ಲರ ಮೇಲೆ ಪೂರ್ಣವಾಗಿತ್ತು.
[34] ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ, ಏಕೆಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಹಣವನ್ನು ತಂದು
[35] ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯಕತೆಗೆ ತಕ್ಕಂತೆ ಹಂಚಿ ಕೊಡುತ್ತಿದ್ದರು.
[36] ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಎಂದು ಹೆಸರಿಟ್ಟಿದ್ದರು, ಅಂದರೆ ಧೈರ್ಯದಾಯಕ ಎಂದರ್ಥ.
[37] ಅವನು ತನಗಿದ್ದ ಭೂಮಿಯನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಒಪ್ಪಿಸಿದನು.