Skip to content
Opens in a new window
Listen to this chapter • 7:13

[1] ಸೌಲನಿಗೆ ಅವನ ಕೊಲೆಗೆ ಸಮ್ಮತಿಸಿದನು. ಆ ದಿನದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರೂ ಯೂದಾಯ, ಸಮಾರ್ಯ ಸೀಮೆಗಳಿಗೆ ಚದರಿಹೋದರು.

[2] ಭಕ್ತರಾದ ಜನರು ಸ್ತೆಫನನ ದೇಹವನ್ನು ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.

[3] ಆದರೆ ಸೌಲನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದುಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ನಾಶಮಾಡುತ್ತಿದ್ದನು.

[4] ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತೆಯನ್ನು ಸಾರುತ್ತಿದ್ದರು.

[5] ಫಿಲಿಪ್ಪನು ಸಮಾರ್ಯವೆಂಬ ಪಟ್ಟಣಕ್ಕೆ ಹೋಗಿ ಕ್ರಿಸ್ತನ ವಿಷಯವಾಗಿ ಅಲ್ಲಿರುವವರಿಗೆ ಪ್ರಚುರಪಡಿಸಿದನು.

[6] ಗುಂಪಾಗಿ ಕೂಡಿದ ಜನಗಳು ಫಿಲಿಪ್ಪನ ಮಾತುಗಳನ್ನು ಕೇಳಿ ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅವನು ಹೇಳಿದ ಸಂಗತಿಗಳಿಗೆ ಒಮ್ಮನಸ್ಸಿನಿಂದ ಗಮನಕೊಟ್ಟರು.

[7] ಏಕೆಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ವಿಕಲಾಂಗರು ಸ್ವಸ್ಥರಾದರು.

[8] ಆ ಪಟ್ಟಣದಲ್ಲಿ ಬಹು ಸಂತೋಷವುಂಟಾಯಿತು.

[9] ಆದರೆ ಕೆಲವು ಕಾಲದಿಂದ ಆ ಪಟ್ಟಣದಲ್ಲಿದ್ದ ಸೀಮೋನನೆಂಬ ಒಬ್ಬ ಮನುಷ್ಯನು ತಾನು ಏನೋ ಒಬ್ಬ ಮಹಾತ್ಮನೆಂದು ಹೇಳಿಕೊಂಡು ಮಂತ್ರತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದನು.

[10] ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೂ ಎಲ್ಲರೂ, “ಇವನು ಮಹಾಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ” ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು.

[11] ಬಹುಕಾಲದಿಂದಲೂ ಅವನ ಮಂತ್ರತಂತ್ರಗಳಿಗೆ ಮಾರುಹೋಗಿದ್ದ ಜನರು ಇವನ ಮಾತಿಗೆ ಕಿವಿಗೊಡುತ್ತಿದ್ದರು.

[12] ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.

[13] ಆಗ ಸೀಮೋನನೂ ಕೂಡ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಆಗುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದನು.

[14] ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ, ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು.

[15] ಇವರು ಅಲ್ಲಿಗೆ ಬಂದು ಆ ಜನರಿಗೆ ಪವಿತ್ರಾತ್ಮವರವು ದೊರೆಯಬೇಕೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು.

[16] ಏಕೆಂದರೆ ಪವಿತ್ರಾತ್ಮವರವು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಮಾತ್ರ ಮಾಡಿಸಿಕೊಂಡಿದ್ದರು

[17] ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮವರವನ್ನು ಹೊಂದಿದರು.

[18] ಅಪೊಸ್ತಲರು ಕೈಗಳನ್ನಿಡುವುದರ ಮೂಲಕವಾಗಿ ಪವಿತ್ರಾತ್ಮದಾನವಾಗುವುದನ್ನು ಸೀಮೋನನು ಕಂಡು ಹಣವನ್ನು ತಂದು ಅವರ ಮುಂದಿಟ್ಟು,

[19] “ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮವರವನ್ನು ಹೊಂದುವಂತೆ ಈ ಅಧಿಕಾರವನ್ನು ನನಗೂ ಕೊಡಿರಿ” ಅಂದನು.

[20] ಆದರೆ ಪೇತ್ರನು ಅವನಿಗೆ, “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ?

[21] ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಯಾವ ಪಾಲೂ ಇಲ್ಲ; ಏಕೆಂದರೆ ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ.

[22] ಆದುದರಿಂದ ಈ ನಿನ್ನ ಕೆಟ್ಟತನವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೋ ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ.

[23] ನೀನು ಕಡು ಕಹಿಯಾದ ದ್ವೇಷದಿಂದಲೂ ಮತ್ತು ವಿಷಕಾರಕವಾದ ಅನೀತಿಯಿಂದಲೂ ತುಂಬಿದವನಾಗಿರುವುದನ್ನು ನಾನು ಕಾಣುತ್ತಿದ್ದೇನೆ” ಅಂದನು

[24] ಅದಕ್ಕೆ ಸೀಮೋನನು, “ನೀವು ಹೇಳಿರುವ ಸಂಗತಿಗಳಲ್ಲಿ ಯಾವುದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ಕರ್ತನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು.

[25] ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು.

[26] ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು.

[27] ಅವನು ಎದ್ದು ಹೊರಟು ಹೋಗುತ್ತಿರುವಾಗ ಇಥಿಯೋಪ್ಯ ದೇಶದ ಒಬ್ಬ ಮನುಷ್ಯನನ್ನು ಕಂಡನು. ಅವನು ಕಂಚುಕಿಯೂ ಇಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಹಾಗೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದನು.

[28] ಅವನು ದೇವಾರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.

[29] ದೇವರಾತ್ಮನು ಫಿಲಿಪ್ಪನಿಗೆ, “ನೀನು ಆ ರಥದ ಹತ್ತಿರ ಹೋಗಿ ಅದರೊಂದಿಗೆ ಸೇರಿ ನಡೆ” ಎಂದು ಹೇಳಿದನು.

[30] ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ, “ಎಲೈ, ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.

[31] ಅದಕ್ಕೆ ಅವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು.

[32] ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು.

[33] ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ.

[34] ಕಂಚುಕಿಯು ಈ ವಚನವನ್ನು ಕುರಿತು, “ಪ್ರವಾದಿಯು ಇದನ್ನು ಯಾರ ಬಗ್ಗೆ ಹೇಳಿದ್ದಾನೆ? ತನ್ನನ್ನು ಕುರಿತೋ ಅಥವಾ ಮತ್ತೊಬ್ಬನ ವಿಷಯದಲ್ಲಿಯೋ?” ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು

[35] ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು.

[36] ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು.

[37] ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು;

[38] ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.

[39] ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು.

[40] ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.

ಅಪೊಸ್ತಲರ ಕೃತ್ಯಗಳು — Chapters