Skip to content
Opens in a new window
Listen to this chapter • 5:25

[1] ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,

[2] ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.

[3] ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.

[4] ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,

[5] ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.

[6] ಕೂಡಿಬಂದವರು ಆತನನ್ನು,, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು

[7] ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.

[8] ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.

[9] ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.

[10] ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.

[11] “ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.

[12] ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.

[13] ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.

[14] ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.

[15] ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು,

[16] “ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.

[17] ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.”

[18] (ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.

[19] ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ‘ಅಕೆಲ್ದಾಮಾ,’ ಅಂದರೆ ರಕ್ತದ ಹೊಲ ಎಂಬ ಹೆಸರು ಬಂದಿತು.)

[20] ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.

[21] ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು

[23] ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ,

[24] “ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.

[26] ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.

ಅಪೊಸ್ತಲರ ಕೃತ್ಯಗಳು — Chapters