Skip to content
Opens in a new window
Listen to this chapter • 8:25

[1] ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು.

[2] ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.

[3] ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು.

[4] ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು.

[5] ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.

[6] ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು.

[7] ಎಲ್ಲರೂ ವಿಸ್ಮಯದಿಂದ ಬೆರಗಾಗಿ, “ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ.

[8] ಆದರೆ ನಾವು ಪ್ರತಿಯೊಬ್ಬರು ನಮ್ಮ ನಮ್ಮ ಮಾತೃಭಾಷೆಯಲ್ಲಿ ಇವರು ಮಾತನಾಡುವುದನ್ನು ಕೇಳುತ್ತಿದ್ದೇವಲ್ಲಾ, ಇದು ಹೇಗೆ?

[9] ಪಾರ್ಥ್ಯರೂ, ಮೇದ್ಯರೂ, ಏಲಾಮ್ಯರೂ, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ,

[10] ಫ್ರುಗ್ಯ, ಪಂಫುಲ್ಯ, ಐಗುಪ್ತ ಮತ್ತು ಕುರೇನೆಯ ಮಗ್ಗುಲಲ್ಲಿರುವ ಲಿಬ್ಯ, ಈ ಸೀಮೆಗಳಲ್ಲಿ ವಾಸವಾಗಿರುವವರೂ, ರೋಮಾಪುರದಿಂದ ಬಂದಿರುವ ಯೆಹೂದ್ಯರೂ, ಯೆಹೂದ್ಯ ಮತಾವಲಂಬಿಗಳೂ, ಕ್ರೇತ್ಯರೂ, ಅರಬ್ಬೀದೇಶದವರೂ

[11] ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತಿದ್ದೇವಲ್ಲಾ” ಎಂದು ಅಂದುಕೊಂಡರು.

[12] ಎಲ್ಲರೂ ಬೆರಗಾಗಿ ಕಳವಳಗೊಂಡು, “ಇದೇನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು?”

[13] ಆದರೆ ಬೇರೆ ಕೆಲವರು, “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯ” ಮಾಡಿದರು.

[14] ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಬೋಧನೆಮಾಡಿದನು; “ಯೆಹೂದ್ಯರೇ, ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಜಾತಿ-ಜನಾಂಗದವರೇ, ಈ ಸಂಗತಿಯು ಏನೆಂದು ನೀವು ತಿಳಿದುಕೊಳ್ಳಲು ನನ್ನ ಮಾತಿಗೆ ಕಿವಿಗೊಡಿರಿ.

[15] ನೀವು ಭಾವಿಸಿದಂತೆ ಇವರು ಮದ್ಯಪಾನಮಾಡಿ ಅಮಲೇರಿದವರಲ್ಲ, ಈಗ ಬೆಳಗ್ಗೆ ಒಂಭತ್ತು ಘಂಟೆಯಾಗಿದೆಯಷ್ಟೆ.

[16] ಆದರೆ ಇದು ಪ್ರವಾದಿಯಾದ ಯೋವೇಲನ ಮೂಲಕವಾಗಿ ಹೇಳಿಸಿದ ಸಂಗತಿಯಾಗಿದೆ; ಅದೇನೆಂದರೆ,

[17] “ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು, ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು;

[18] ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು, ಅವರೂ ಪ್ರವಾದಿಸುವರು.

[19] ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.

[21] ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ” ಎಂಬುದೇ.

[22] “ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.

[23] ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ.

[24] ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಏಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು.

[25] ಆತನ ವಿಷಯದಲ್ಲಿ ದಾವೀದನು;, “‘ಕರ್ತನು ಯಾವಾಗಲೂ ನನ್ನೆದುರಿನಲ್ಲಿರುವುದನ್ನು ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ.

[26] ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು, ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು;

[27] ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ, ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ.

[28] ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನನ್ನಾಗಮಾಡುವಿ’ ಎಂದು ಹೇಳಿದ್ದಾನೆ.

[29] “ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ,, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ.

[30] ಆದಕಾರಣ ಅವನು ಪ್ರವಾದಿಯಾಗಿದ್ದು, ನಿನ್ನ ಸಂತತಿಯವರೊಳಗೆ ಒಬ್ಬನನ್ನು ನಾನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ತನಗೆ ದೇವರು ಆಣೆಯಿಟ್ಟು ಹೇಳಿದ್ದನ್ನು ಬಲ್ಲವನಾಗಿದನು.

[31] ಕ್ರಿಸ್ತನ ಪುನರುತ್ಥಾನವನ್ನೇ ಕುರಿತು, ಆತನು ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ, ಆತನ ಶರೀರವು ಕೊಳೆಯುವ ಅವಸ್ಥೆಯನ್ನು ಅನುಭವಿಸುವುದಿಲ್ಲವೆಂತಲೂ ಹೇಳಿದನು.

[32] ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ.

[33] ಆತನು ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟು, ವಾಗ್ದಾನವಾಗಿದ್ದ ಪವಿತ್ರಾತ್ಮವರವನ್ನು ತಂದೆಯಿಂದ ಹೊಂದಿ ನೀವು ನೋಡಿ ಕೇಳುವುದನ್ನು ಸುರಿಸಿದ್ದಾನೆ.

[34] ದಾವೀದನು ಸ್ವರ್ಗಾರೋಹಣ ಮಾಡಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ, “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದ ಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ದೇವರಾದ ಕರ್ತನು ನನ್ನ ಕರ್ತನಿಗೆ ನುಡಿದನು’ ಎಂಬುದೇ.

[36] “ಆದುದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ” ಎಂದು ಹೇಳಿದನು.

[37] ಅವರು ಇದನ್ನು ಕೇಳಿದಾಗ ಅವರ ಹೃದಯಗಳಲ್ಲಿ ಅಲಗು ನೆಟ್ಟಂತಾಯಿತು. ಅಲ್ಲದೆ ಅವರು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ, “ಸಹೋದರರೇ, ನಾವೇನು ಮಾಡಬೇಕು” ಎಂದು ಕೇಳಲು;

[38] ಪೇತ್ರನು ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.

[39] ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು.

[40] ಬೇರೆ ಅನೇಕ ವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು, “ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ” ಎಂದು ಅವರನ್ನು ಎಚ್ಚರಿಸಿದನು.

[41] ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು.

[42] ಅವರು ಅಪೊಸ್ತಲರ ಬೋಧನೆಯಲ್ಲಿಯೂ, ಸಹೋದರರೊಂದಿಗೆ ಅನ್ಯೋನ್ಯತೆಯಲ್ಲಿಯೂ, ರೊಟ್ಟಿಮುರಿಯುವುದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.

[43] ಎಲ್ಲರೂ ಭಯ ಪರವಶರಾದರು. ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ, ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು.

[44] ನಂಬಿದವರೆಲ್ಲರು ಒಗ್ಗಟ್ಟಾಗಿದ್ದು, ತಮ್ಮಲ್ಲಿರುವುದೆಲ್ಲವನ್ನೂ ಸಂತೋಷವಾಗಿ ಹಂಚಿಕೊಂಡು ಅನುಭೋಗಿಸುತ್ತಿದ್ದರು.

[45] ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು.

[46] ಅವರು ಪ್ರತಿದಿನ ಏಕಮನಸ್ಸಿನಿಂದ ದೇವಾಲಯದಲ್ಲಿ ಸೇರಿಬರುತ್ತಾ, ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ, ಸರಳ ಸಹೃದಯದಿಂದಲೂ ಸಹಭೋಜನ ಮಾಡುತ್ತಾ ಇದ್ದರು.

[47] ಅವರೆಲ್ಲರೂ ದೇವರನ್ನು ಕೊಂಡಾಡುವವರಾಗಿಯೂ, ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ಪ್ರತಿದಿನ ಅವರೊಂದಿಗೆ ಸಭೆಗೆ ಸೇರಿಸುತ್ತಿದ್ದನು.

ಅಪೊಸ್ತಲರ ಕೃತ್ಯಗಳು — Chapters