Skip to content
Opens in a new window
Listen to this chapter • 5:17

[1] ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.

[2] ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಮಾಡಿಸಿಕೊಂಡಿದ್ದ ಯೆಹೂದ್ಯರು;

[3] “ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ” ಎಂದು ಅವನ ಕೂಡ ವಾದಿಸಿದರು.

[4] ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ,

[5] ಹೇಳಿದ್ದೇನಂದರೆ; “ನಾನು ಯೊಪ್ಪ ಎಂಬ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಾ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು” ಅದೇನೆಂದರೆ, ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದು ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ನಾನಿದ್ದಲ್ಲಿಗೆ ಇಳಿದು ಬಂದಿತು.

[6] ಅದೇನೆಂದು ತಿಳಿದುಕೊಳ್ಳುವುದಕ್ಕೆ ನಾನು ಅದನ್ನು ಚೆನ್ನಾಗಿ ನೋಡಿದಾಗ, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳು, ಕಾಡುಮೃಗಳು, ಹರಿದಾಡುವ ಕ್ರಿಮಿಕೀಟಗಳನ್ನೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳನ್ನೂ ಕಂಡೆನು.

[7] ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

[8] ಅದಕ್ಕೆ ನಾನು; “ಬೇಡವೇ ಬೇಡ, ಕರ್ತನೇ, ಹೊಲೆಯಾದ ಪದಾರ್ಥವಾಗಲಿ, ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ” ಅಂದೆನು.

[9] ಅದಕ್ಕೆ; “ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆ ಎನ್ನಬಾರದು” ಎಂಬುದಾಗಿ ಎರಡನೆಯ ಸಾರಿಯೂ ಆಕಾಶದಿಂದ ವಾಣಿಯಾಯಿತು.

[10] ಹೀಗೆ ಮೂರು ಸಾರಿ ಆಯಿತು. ಅನಂತರ ಎಲ್ಲವೂ ತಿರುಗಿ ಆಕಾಶಕ್ಕೆ ಎತ್ತಲ್ಪಟ್ಟಿತು.

[11] ಆ ಕ್ಷಣದಲ್ಲೇ ಮೂವರು ಪುರುಷರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.

[12] ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.

[13] ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು.

[14] ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.

[15] ನಾನು ಮಾತನಾಡುವುದಕ್ಕೆ ಪ್ರಾರಂಭಿಸಿದಾಗ, ಪವಿತ್ರಾತ್ಮವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು.

[16] ಆಗ; “ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಕರ್ತನು ಹೇಳಿದ ಮಾತುಗಳು ನನ್ನ ನೆನಪಿಗೆ ಬಂದಿತು.

[17] ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.

[18] ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.

[19] ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನಿಕೆ, ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು.

[20] ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು.

[21] ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.

[22] ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.

[23] ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.

[24] ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು, ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು.

[25] ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು.

[26] ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.

[27] ಅ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.

[28] ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.

[29] ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.

[30] ಹಾಗೆಯೇ ಮಾಡಿ, ಅದನ್ನು ಬಾರ್ನಬನ ಮತ್ತು ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿಕೊಟ್ಟರು.

ಅಪೊಸ್ತಲರ ಕೃತ್ಯಗಳು — Chapters