[1] ಇಸ್ರಾಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು.
[2] ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.
[3] ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ, ಬೆನ್ಯಾಮೀನನ ಮಕ್ಕಳೂ, ಎಫ್ರಾಯೀಮ್, ಮನಸ್ಸೆ ಎಂಬವರ ಮಕ್ಕಳು ಯಾರೆಂದರೆ:
[4] ಯೆಹೂದನ ಮಗನಾದ ಪೆರೆಚನ ಮಕ್ಕಳಲ್ಲಿ ಒಬ್ಬನಾದ ಬಾನೀಯ ಮಗನಾದ ಇಮ್ರಿಯು, ಇವನ ಮಗನಾದ ಒಮ್ರಿ, ಇವನ ಮಗನು ಅಮ್ಮೀಹೂದನು, ಇವನ ಮಗನು ಉತೈ.
[5] ಶೇಲಾಹನರಲ್ಲಿ ಚೊಚ್ಚಲಮಗನಾದ ಅಸಾಯನು, ಅವನ ಪುತ್ರರು.
[6] ಜೆರಹನ ಪುತ್ರರಲ್ಲಿ ಯೆಯೂವೇಲನೂ, ಅವನ ಸಹೋದರರೂ 690 ಮಂದಿ.
[7] ಬೆನ್ಯಾಮೀನ್ಯರಲ್ಲಿ ಹಸ್ಸೆನುವಾಹನ ಮಗನು ಹೋದವ್ಯನ ಮಗನು ಮೆಷುಲ್ಲಾಮನ ಮಗ ಸಲ್ಲು,
[8] ಯೆರೋಹಾಮನ ಮಗ ಇಬ್ನೇಯಾಹನೂ; ಮಿಕ್ರಿಯ ಮಗ ಉಜ್ಜೀಯ ಮಗ ಏಲಾನೂ; ಇಬ್ನಿಯನ ಮಗ ರೆಯೂವೇಲನ ಮಗ, ಶೆಫಟ್ಯನ ಮಗ ಮೆಷುಲ್ಲಾಮನೂ,
[9] ಅವರ ಸಹೋದರರೂ ತಮ್ಮ ವಂಶಗಳ ಪ್ರಕಾರ 956 ಮಂದಿ. ಇವರೆಲ್ಲರು ತಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದರು.
[10] ಯಾಜಕರಲ್ಲಿ ಯಾರೆಂದರೆ ಯೆದಾಯನೂ, ಯೆಹೋಯಾರೀಬನೂ, ಯಾಕೀನನೂ;
[11] ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;
[12] ಮಲ್ಕೀಯನ ಮಗ ಪಷ್ಹೂರನ ಮಗ ಯೆರೋಹಾಮನ ಮಗ ಅದಾಯನು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ ಮೆಷುಲ್ಲಾಮನ ಮಗ ಯಹ್ಜೇರನ ಮಗ ಅದೀಯೇಲನ ಮಗ ಮಾಸೈಯನೂ;
[13] ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.
[14] ಲೇವಿಯರಲ್ಲಿ ಯಾರೆಂದರೆ: ಮೆರಾರೀಯ ಪುತ್ರರಲ್ಲಿ ಒಬ್ಬನಾದ ಹಷ್ಷೂಬನ ಮಗ ಅಜ್ರೀಕಾಮನ ಮಗ ಹಷಬ್ಯನ ಮಗ ಶೆಮಾಯನೂ;
[15] ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;
[16] ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.
[17] ದ್ವಾರಪಾಲಕರು ಯಾರೆಂದರೆ: ಶಲ್ಲೂಮನೂ, ಅಕ್ಕೂಬನೂ, ಟಲ್ಮೋನನೂ, ಅಹೀಮನ್‌ನೂ, ಅವರ ಸಹೋದರರೂ. ಅವರಲ್ಲಿ ಶಲ್ಲೂಮನು ಮುಖ್ಯಸ್ಥನಾಗಿದ್ದನು.
[18] ಇವರು ಈವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲಲ್ಲಿ ಕಾದುಕೊಂಡಿದ್ದರು. ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು.
[19] ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮೊಮ್ಮಗನೂ ಕೋರೇಯನ ಮರಿಮಗನಾದ ಶಲ್ಲೂಮನೂ, ಅವನ ತಂದೆಯ ಮನೆಯವರಾಗಿರುವ ತನ್ನ ಸಹೋದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲಿದ್ದು, ದೇವದರ್ಶನ ಗುಡಾರದ ಬಾಗಿಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಯೆಹೋವ ದೇವರ ಗುಡಾರದ ದ್ವಾರಗಳ ಕಾವಲಿನವರಾಗಿದ್ದರು.
[20] ಎಲಿಯಾಜರನ ಮಗನಾದ ಫೀನೆಹಾಸನು ಮುಂಚೆ ಅವರ ಮೇಲೆ ಅಧಿಕಾರಿಯಾಗಿದ್ದನು. ಯೆಹೋವ ದೇವರು ಅವರ ಸಂಗಡ ಇದ್ದರು.
[21] ಮೆಷೆಲೆಮ್ಯನ ಮಗನಾದ ಜೆಕರ್ಯನು ದೇವದರ್ಶನ ಗುಡಾರದ ದ್ವಾರಪಾಲಕನಾಗಿದ್ದನು.
[22] ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.
[23] ಹೀಗೆಯೇ ಅವರಿಗೂ, ಅವರ ಮಕ್ಕಳಿಗೂ ಯೆಹೋವ ದೇವರ ಮನೆಯ ಬಾಗಿಲು ಕಾವಲಿತ್ತು. ಅದು ದೇವದರ್ಶನ ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರರಿಂದ ಕಾಯಬೇಕಾಗಿತ್ತು.
[24] ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.
[25] ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು.
[26] ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.
[27] ಅವರು ದೇವರ ಆಲಯದ ಸುತ್ತಲೂ ರಾತ್ರಿಯನ್ನು ಕಳೆಯುತ್ತಿದ್ದರು, ಏಕೆಂದರೆ ಅವರು ಅದನ್ನು ಕಾವಲು ಕಾಯಬೇಕಾಗಿತ್ತು. ಮತ್ತು ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುತ್ತಿದ್ದರು.
[28] ಸೇವೆಯ ಸಲಕರಣೆಗಳನ್ನು ಒಳಗೆ ಲೆಕ್ಕದ ಪ್ರಕಾರ ತರುವುದಕ್ಕೂ, ಹೊರಗೆ ಲೆಕ್ಕದ ಪ್ರಕಾರ ತರುವುದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
[29] ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.
[30] ಯಾಜಕರ ಪುತ್ರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು.
[31] ಕೋರಹಿಯನಾದ ಶಲ್ಲೂಮನ ಚೊಚ್ಚಲಮಗನಾದ ಮತ್ತಿತ್ಯನು ಲೇವಿಯರಲ್ಲಿ ಒಬ್ಬನಾಗಿದ್ದು, ತಟ್ಟೆಗಳ ಮೇಲೆ ಮಾಡುವ ಭಕ್ಷ್ಯಗಳ ಕೆಲಸದ ಮೇಲ್ವಿಚಾರಕನಾಗಿದ್ದನು.
[32] ಕೊಹಾತ್ಯರ ಪುತ್ರರಾದ ಅವರ ಸಹೋದರರಲ್ಲಿ ಇನ್ನೂ ಕೆಲವರು ಸಮ್ಮುಖದ ರೊಟ್ಟಿಯನ್ನು ಪ್ರತಿ ಸಬ್ಬತ್ ದಿನದಲ್ಲಿ ಸಿದ್ಧಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
[33] ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
[34] ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
[35] ಇದಲ್ಲದೆ ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
[36] ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು.
[37] ಗೆದೋರನು, ಅಹಿಯೋನು, ಜೆಕರೀಯನು, ಮಿಕ್ಲೋತನು.
[38] ಮಿಕ್ಲೋತನು ಶಿಮಾಮನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
[39] ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
[40] ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
[41] ಮೀಕನ ಪುತ್ರರು: ಪಿತೋನನು, ಮೇಲಕನು, ತಹ್ರೀಯನು ಮತ್ತು ಆಹಾಜನು.
[42] ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು; ಜಿಮ್ರಿಯು ಮೋಚನನ್ನು ಪಡೆದನು;
[43] ಮೋಚನು ಬಿನ್ನನನ್ನು ಪಡೆದನು; ಅವನ ಮಗನು ರೆಫಾಯನು; ಅವನ ಮಗನು ಎಲ್ಲಾಸನು; ಅವನ ಮಗನು ಆಚೇಲನು.
[44] ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು: ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು; ಇವರೆಲ್ಲರು ಆಚೇಲನ ಪುತ್ರರು.