[1] ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ.
[2] ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲುತನವು ಯೋಸೇಫನದಾಗಿತ್ತು.
[3] ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.
[4] ಯೋಯೇಲನ ವಂಶಜರು: ಅವನ ಮಗ ಶೆಮಾಯನು; ಅವನ ಮಗ ಗೋಗನು; ಅವನ ಮಗ ಶಿಮ್ಮೀಯಿ.
[5] ಅವನ ಮಗ ಮೀಕಾಯನು; ಅವನ ಮಗ ರೆವಾಯನು, ಅವನ ಮಗ ಬಾಳನು.
[6] ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರಿನಿಂದ ಸೆರೆಯಾಗಿ ಒಯ್ದ ಅವನ ಮಗ ಬೇರನು; ಅವನೇ ರೂಬೇನ್ಯರಲ್ಲಿ ನಾಯಕನಾಗಿದ್ದನು.
[7] ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾವಳಿಯನ್ನು ಲೆಕ್ಕಿಸಿದ ಅವನ ಮುಖ್ಯಸ್ಥರು ಯಾರೆಂದರೆ, ಯೆಹಿಯೇಲ್, ಜೆಕರ್ಯ,
[8] ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ. ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು.
[9] ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.
[10] ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು.
[11] ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದವರೆಗೂ ವಾಸವಾಗಿದ್ದರು.
[12] ಬಾಷಾನಿನಲ್ಲಿ ಮುಖ್ಯನಾದವನು ಯೋಯೇಲನು, ಎರಡನೆಯವನು ಶಾಫಾಮನು, ಅನಂತರ ಯನ್ನೈ, ಶಾಫಾಟನು.
[13] ಕುಟುಂಬಗಳಾಗಿ ಅವರ ಬಂಧುಗಳು: ಮೀಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈನು, ಯಕ್ಕಾನನು, ಜೀಯನು, ಏಬೆರನು; ಒಟ್ಟು ಏಳುಮಂದಿ.
[14] ಇವರು ಹೂರಿಯ ಮಗ ಅಬೀಹೈಲನ ಪುತ್ರರು: ಈ ಹೂರೀಯು ಯಾರೋಹನ ಮಗನು, ಅವನು ಗಿಲ್ಯಾದನ ಮಗನು, ಅವನು ಮೀಕಾಯೇಲನ ಮಗನು, ಅವನು ಯೆಷೀಷೈಯನ ಮಗನು, ಅವನು ಯಹ್ದೋವಿನ ಮಗನು, ಅವನು ಬೂಜನ ಮಗನು.
[15] ಅಬ್ದಿಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರದ ಮುಖ್ಯಸ್ಥನು.
[16] ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
[17] ಇವರೆಲ್ಲರು ಯೆಹೂದದ ಅರಸನಾದ ಯೋತಾಮನ ದಿವಸಗಳಲ್ಲಿಯೂ, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು.
[18] ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು.
[19] ಇವರು ಹಗ್ರೀಯರಾದ ಯೆಟೂರನು, ನಾಫೀಷನು, ನೊದಾಬನು ಎಂಬವರ ವಿರುದ್ಧ ಯುದ್ಧಮಾಡಿದರು.
[20] ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.
[21] ಅವರು ವೈರಿಗಳಿಂದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಐವತ್ತು ಸಾವಿರ ಒಂಟೆಗಳನ್ನು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳನ್ನು, ಎರಡು ಸಾವಿರ ಕತ್ತೆಗಳನ್ನು ಅಲ್ಲದೆ, ಒಂದು ಲಕ್ಷ ಜನರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದರು.
[22] ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
[23] ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.
[24] ಅವರ ಪಿತೃಗಳ ಮನೆಯಲ್ಲಿರುವ ಯಜಮಾನರು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್. ಇವರು ಪರಾಕ್ರಮಶಾಲಿಗಳಾಗಿಯೂ, ಹೆಸರುಗೊಂಡವರಾಗಿಯೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರಾಗಿಯೂ ಇದ್ದರು.
[25] ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.
[26] ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.