[1] ಅವರು ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ಅವರು ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
[2] ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಅವನು ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
[3] ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು.
[4] ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
[5] ಅವರು ಯಾರೆಂದರೆ: ಮುಖ್ಯಸ್ಥನಾದ ಆಸಾಫನೂ, ಅವನ ತರುವಾಯ ಜೆಕರ್ಯನೂ, ಯೆಜೀಯೇಲನೂ, ಶೆಮೀರಾಮೋತನೂ, ಯೆಹೀಯೇಲನೂ, ಮತ್ತಿತ್ಯನೂ, ಎಲೀಯಾಬನೂ, ಬೆನಾಯನೂ, ಓಬೇದ್ ಏದೋಮನೂ, ಯೆಹಿಯೇಲನೂ ಇವರು ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಿದ್ದರು. ಆದರೆ ಆಸಾಫನು ತಾಳಗಳನ್ನು ಬಾರಿಸುತ್ತಿದ್ದನು.
[6] ಇದಲ್ಲದೆ ಯಾಜಕರಾದ ಬೆನಾಯನೂ, ಯಹಜಿಯೇಲನೂ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
[7] ಆಸಾಫನಿಗೂ, ಅವನ ಜೊತೆ ಲೇವಿಯರಿಗೂ ಯೆಹೋವ ದೇವರ ಸ್ತೋತ್ರಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
[8] ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ, ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
[9] ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ, ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
[10] ದೇವರ ಪರಿಶುದ್ಧ ನಾಮವನ್ನು ಹೊಗಳಿರಿ, ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
[11] ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
[12] ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
[13] ಅವರ ಸೇವಕನಾದ ಇಸ್ರಾಯೇಲಿನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
[14] ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
[15] ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
[16] ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕಮಾಡಿಕೊಳ್ಳಿರಿ.
[17] ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು, ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
[18] “ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
[19] ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
[20] ಅವರು ಜನಾಂಗದಿಂದ ಜನಾಂಗಕ್ಕೂ, ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
[21] ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ:
[22] ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ. ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.
[23] ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ. ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
[24] ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
[25] ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
[26] ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
[27] ಅವರ ಸನ್ನಿಧಿಯಲ್ಲಿ ಘನತೆಯೂ ಪ್ರಭೆಯೂ; ಅವರ ಪರಿಶುದ್ಧ ಸ್ಥಳದಲ್ಲಿ ಬಲವೂ ಸಂತೋಷವೂ ಇವೆ.
[28] ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ, ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
[29] ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ದೇವರ ಸನ್ನಿಧಿಗೆ ಬನ್ನಿರಿ. ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
[30] ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ. ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ.
[31] ಆಕಾಶವು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಯೆಹೋವ ದೇವರು ಆಳುತ್ತಾರೆಂದು ಜನಾಂಗಗಳಲ್ಲಿ ಹೇಳಲಿ.
[32] ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ. ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ.
[33] ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ. ದೇವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ.
[34] ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
[35] ನಮ್ಮ ರಕ್ಷಣೆಯ ದೇವರೇ, “ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸಿರಿ, ಜನಾಂಗಗಳೊಳಗಿಂದ ನಮ್ಮನ್ನು ಬಿಡುಗಡೆ ಮಾಡಿ ಒಂದುಗೂಡಿಸಿರಿ.”
[36] ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ, ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು.
[37] ಪ್ರತಿದಿನದ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯಮಿತವಾಗಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಸೇವೆ ಸಲ್ಲಿಸಲು ದಾವೀದನು ಆಸಾಫ್ ಮತ್ತು ಅವನ ಸಹಚರರನ್ನು ನೇಮಿಸಿದನು.
[38] ಓಬೇದ್ ಏದೋಮ್ ಮತ್ತು ಅವನ ಸಹಚರರಾದ ಅರವತ್ತೆಂಟು ಮಂದಿಯೂ, ದ್ವಾರಪಾಲಕರಾದ ಯೆದುತೂನನ ಮಗ ಓಬೇದ್ ಎದೋಮ್ ಮತ್ತು ಹೋಸ ನೇಮಕವಾಗಿದ್ದರು.
[39] ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಲ್ಲಿ ಯೆಹೋವ ದೇವರ ಗುಡಾರದ ಮುಂದೆ ಸೇವೆಮಾಡುವದಕ್ಕೆ ದಾವೀದನು ಯಾಜಕನಾದ ಚಾದೋಕನನ್ನೂ ಮತ್ತು ಅವನ ಸಹೋದರರನ್ನು ನೇಮಿಸಿದನು.
[40] ಯೆಹೋವ ದೇವರು ಇಸ್ರಾಯೇಲಿಗೆ ಆಜ್ಞಾಪಿಸಿದ ಮೋಶೆಯ ನಿಯಮದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡಲೂ ಅವರು ಪ್ರತಿದಿನವೂ ಉದಯಕಾಲದಲ್ಲಿ ಮತ್ತು ಸಾಯಂಕಾಲದಲ್ಲಿ ದಹನಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದರು.
[41] “ದೇವರ ಪ್ರೀತಿ ನಿತ್ಯವಾಗಿ ನೆಲೆಗೊಂಡಿರುವುದು,” ಎಂದು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಹೇಮಾನನೂ, ಯೆದುತೂನನೂ ಹೆಸರು ಹೆಸರಾಗಿ ಆಯ್ಕೆಗೊಂಡು, ನೇಮಕರಾಗಿದ್ದರು.
[42] ಅದರ ಸಂಗಡ ತುತೂರಿ ಊದಲು, ತಾಳ ಬಾರಿಸಲು, ದೇವರ ಗೀತವಾದ್ಯಗಳೂ ಸಹಿತವಾಗಿ ಹೇಮಾನನೂ, ಯೆದುತೂನನೂ ಮೇಲ್ವಿಚಾರಕರಾಗಿದ್ದರು. ಯೆದುತೂನನ ಪುತ್ರರು ದ್ವಾರಪಾಲಕರಾಗಿದ್ದರು.
[43] ತರುವಾಯ ಜನರೆಲ್ಲರು ತಮ್ಮ ತಮ್ಮ ಮನೆಗೆ ಹೋದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸುವುದಕ್ಕೆ ಹೋದನು.