Skip to content
Opens in a new window
Listen to this chapter • 3:20

[1] ಟೈರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು.

[2] ಆಗ ದಾವೀದನು, ತನ್ನನ್ನು ಯೆಹೋವ ದೇವರು ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದರೆಂದೂ, ತಮ್ಮ ಜನರಾದ ಇಸ್ರಾಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದರೆಂದೂ ತಿಳಿದುಕೊಂಡನು.

[3] ದಾವೀದನು ಯೆರೂಸಲೇಮಿನಲ್ಲಿ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡನು. ಇನ್ನೂ ಹೆಚ್ಚು ಪುತ್ರ, ಪುತ್ರಿಯರನ್ನೂ ಪಡೆದನು.

[4] ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,

[5] ಇಬ್ಹಾರ್, ಎಲೀಷೂವ, ಎಲ್ಪೆಲೆಟ,

[6] ನೋಗಹ, ನೆಫೆಗ್, ಯಾಫೀಯ,

[7] ಎಲೀಷಾಮ, ಎಲ್ಯಾದ, ಎಲೀಫೆಲೆಟ್.

[8] ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಹೊಂದಿದ್ದಾನೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರೆಲ್ಲರೂ ದಾವೀದನನ್ನು ಸೆರೆಹಿಡಿಯಲು ಹೋದರು. ದಾವೀದನು ಅದನ್ನು ಕೇಳಿ ಅವರಿಗೆದುರಾಗಿ ಹೊರಟನು.

[9] ಆಗ ಫಿಲಿಷ್ಟಿಯರು ಬಂದು ರೆಫಾಯಿಮ್ ತಗ್ಗಿನಲ್ಲಿ ಇಳಿದುಕೊಂಡರು.

[10] ಅದಕ್ಕೆ ದಾವೀದನು, “ನಾನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಬಹುದೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವಿರೋ?” ಎಂದು ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು ಅವನಿಗೆ, “ಹೋಗು, ನಾನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದು ಹೇಳಿದರು.

[11] ಹಾಗೆಯೇ ದಾವೀದನು ಮತ್ತು ಅವನ ಸಂಗಡಿಗರೂ ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾರೆ,” ಎಂದನು. ಆದಕಾರಣ ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.

[12] ಅಲ್ಲಿ ಫಿಲಿಷ್ಟಿಯರು ತಮ್ಮ ದೇವರುಗಳನ್ನು ಬಿಟ್ಟು ಹೋದುದರಿಂದ, ದಾವೀದನು ಅವುಗಳನ್ನು ಸುಟ್ಟುಹಾಕಬೇಕೆಂದು ಅಪ್ಪಣೆಮಾಡಿದನು.

[13] ಫಿಲಿಷ್ಟಿಯರು ಮತ್ತೆ ತಿರುಗಿಬಂದು ತಗ್ಗಿನಲ್ಲಿ ಸುಲಿಗೆಮಾಡಲು ಪ್ರಾರಂಭಿಸಿದರು.

[14] ಆದ್ದರಿಂದ ದಾವೀದನು ತಿರುಗಿ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ, “ನೀನು ಅವರ ಹಿಂದೆ ಹೋಗದೆ, ಅವರನ್ನು ಬಿಟ್ಟು ತಿರುಗಿಕೊಂಡು ಹೋಗಿ, ಬಾಕಾಮರಗಳಿಗೆ ಎದುರಾಗಿ ಅವರ ಮೇಲೆ ದಾಳಿಮಾಡು.

[15] ಬಾಕಾಮರಗಳ ತುದಿಗಳಲ್ಲಿ ನಡೆದುಬರುವ ಶಬ್ದವನ್ನು ನೀನು ಕೇಳಿದಾಗಲೇ, ದೇವರು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು,” ಎಂದರು.

[16] ಆಗ ದಾವೀದನು, ದೇವರು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ, ಅವನು ಗಿಬ್ಯೋನಿನಿಂದ ಗೆಜೆರಿನವರೆಗೆ ಫಿಲಿಷ್ಟಿಯರ ದಂಡನ್ನು ಸಂಹರಿಸಿದರು.

[17] ದಾವೀದನ ಕೀರ್ತಿಯು ಸಮಸ್ತ ದೇಶಗಳಿಗೆ ಹರಡಿತು. ಯೆಹೋವ ದೇವರು ಅವನ ಭಯವನ್ನು ಸಮಸ್ತ ಜನಾಂಗಗಳ ಮೇಲೆ ಬರಮಾಡಿದರು.

1 ಪೂರ್ವಕಾಲ ವೃತ್ತಾಂತ — Chapters