Skip to content
Opens in a new window
Listen to this chapter • 8:46

[1] ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನೆಂದರೆ, “ದೇವರು ಒಬ್ಬನನ್ನೇ ಆಯ್ದುಕೊಂಡ ನನ್ನ ಮಗ ಸೊಲೊಮೋನನು ಚಿಕ್ಕವನೂ ಎಳೆಯ ಪ್ರಾಯದವನೂ ಆಗಿದ್ದಾನೆ. ಆದರೆ ಕೆಲಸವು ದೊಡ್ಡದು. ಈ ಮಹಾ ಕಟ್ಟಡವು ಮನುಷ್ಯರಿಗೋಸ್ಕರವಲ್ಲ, ದೇವರಾದ ಯೆಹೋವ ದೇವರಿಗೋಸ್ಕರವೇ,

[2] ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.

[3] ಇದಲ್ಲದೆ ನಾನು ನನ್ನ ದೇವರ ಮನೆಯ ಮೇಲೆ ನನಗೆ ಭಕ್ತಿ ಇರುವುದರಿಂದ, ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು, ನನ್ನ ಸ್ವಂತ ಸ್ವತ್ತಿನಿಂದ ಬಂಗಾರವನ್ನೂ, ಬೆಳ್ಳಿಯನ್ನೂ ನನ್ನ ಪವಿತ್ರ ದೇವರ ಮನೆಗೆ ಕೊಟ್ಟಿದ್ದೇನೆ.

[4] ಮನೆಗಳ ಗೋಡೆಗಳನ್ನು ಹೊದಿಸುವುದಕ್ಕೆ ಓಫೀರ್ ಬಂಗಾರದಲ್ಲಿ 100 ಮೆಟ್ರಿಕ್ ಟನ್ ಬಂಗಾರವನ್ನೂ, 240 ಮೆಟ್ರಿಕ್ ಟನ್ ಚೊಕ್ಕ ಬೆಳ್ಳಿಯನ್ನೂ ಕೊಟ್ಟಿದ್ದೇನೆ.

[5] ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ತನ್ನನ್ನೇ ಯೆಹೋವ ದೇವರಿಗೆ ಇಷ್ಟಪೂರ್ವಕವಾಗಿ ಸಮರ್ಪಿಸಿಕೊಳ್ಳುವವರು ಯಾರು?” ಎಂದನು.

[6] ಆಗ ಪಿತೃಗಳ ಪ್ರಧಾನರೂ, ಇಸ್ರಾಯೇಲ್ ಗೋತ್ರಗಳ ಪ್ರಧಾನರೂ, ಸಹಸ್ರಾಧಿಪತಿಗಳೂ ಶತಾಧಿಪತಿಗಳೂ, ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು,

[7] ಯೆಹೋವ ದೇವರ ಮನೆಯ ಸೇವೆಗೋಸ್ಕರ ಬಂಗಾರವನ್ನೂ 17 0 ಮೆಟ್ರಿಕ್ ಟನ್, ಮತ್ತು 10,000 ಬಂಗಾರದ ನಾಣ್ಯಗಳನ್ನೂ 34 5 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 61 0 ಮೆಟ್ರಿಕ್ ಟನ್ ಕಂಚನ್ನೂ, 34 50 ಮೆಟ್ರಿಕ್ ಟನ್ ಕಬ್ಬಿಣವನ್ನೂ ಕೊಟ್ಟರು.

[8] ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ, ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವುಗಳನ್ನು ಯೆಹೋವ ದೇವರ ಆಲಯದ ಬೊಕ್ಕಸಕ್ಕೆ ಕೊಟ್ಟರು.

[9] ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ, ಜನರು ಸಂತೋಷಪಟ್ಟರು. ಏಕೆಂದರೆ ಅವರು ಪೂರ್ಣಮನಸ್ಸಿನಿಂದ ಮನಃಪೂರ್ವಕವಾಗಿ ಯೆಹೋವ ದೇವರಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷಪಟ್ಟನು.

[10] ದಾವೀದನು ಸಮಸ್ತ ಕೂಟದ ಮುಂದೆ ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ನಮ್ಮ ತಂದೆಯಾದ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವು ಯುಗಯುಗಾಂತರಗಳಿಂದ ಯುಗಯುಗಾಂತರಗಳಿಗೂ ಸ್ತುತಿಗೆ ಪಾತ್ರರಾಗಿದ್ದೀರಿ.

[11] ಯೆಹೋವ ದೇವರೇ, ಮಹತ್ವವೂ, ಪರಾಕ್ರಮವೂ, ಮಹಿಮೆಯೂ, ಜಯವೂ, ವೈಭವವೂ ನಿಮ್ಮವೇ. ಆಕಾಶಗಳಲ್ಲಿಯೂ, ಭೂಮಿಯಲ್ಲಿಯೂ ಇರುವುದೆಲ್ಲಾ ನಿಮ್ಮದೇ. ಯೆಹೋವ ದೇವರೇ, ರಾಜ್ಯವು ನಿಮ್ಮದು. ನೀವು ಸಮಸ್ತಕ್ಕೂ ತಲೆಯಾಗಿ ಉನ್ನತರು.

[12] ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ. ನೀವು ಸಮಸ್ತವನ್ನು ಆಳಿಕೆಮಾಡುವವರು. ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ. ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ.

[13] ಆದ್ದರಿಂದ ನಮ್ಮ ದೇವರೇ, ನಾವು ನಿಮ್ಮನ್ನು ಸ್ತುತಿಸಿ, ನಿಮ್ಮ ಮಹಿಮೆಯುಳ್ಳ ನಾಮವನ್ನು ಕೊಂಡಾಡುತ್ತೇವೆ.

[14] “ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ.

[15] ನಿಮ್ಮ ಕೈಯಿಂದಲೇ ನಿಮಗೆ ಅರ್ಪಿಸಿದೆವು. ಏಕೆಂದರೆ ನಾವು ನಿಮ್ಮ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ, ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಇವೆ; ನಿರೀಕ್ಷೆಯು ಇಲ್ಲ.

[16] ನಮ್ಮ ದೇವರಾದ ಯೆಹೋವ ದೇವರೇ, ನಿಮ್ಮ ಪರಿಶುದ್ಧ ನಾಮಕ್ಕೋಸ್ಕರ ನಿಮಗೆ ಆಲಯವನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿಮ್ಮಿಂದ ಬಂದದ್ದು. ಸಮಸ್ತವೂ ನಿಮ್ಮದು.

[17] ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.

[18] ನಮ್ಮ ಪಿತೃಗಳಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾದ ಯೆಹೋವ ದೇವರೇ, ನಿಮ್ಮ ಜನರ ಹೃದಯದ ಮನೋಭಾವನೆಯಲ್ಲಿ ಭಕ್ತಿಯನ್ನು ನಿರಂತರವಾಗಿ ಕಾಪಾಡಿ, ಅವರ ಹೃದಯವನ್ನು ನಿಮಗೆ ಸಿದ್ಧಮಾಡಿ.

[19] ಇದಲ್ಲದೆ ನಿಮ್ಮ ಆಜ್ಞೆಗಳನ್ನೂ, ನಿಮ್ಮ ಸಾಕ್ಷಿಗಳನ್ನೂ, ನಿಮ್ಮ ಕಟ್ಟಳೆಗಳನ್ನೂ ಕೈಗೊಳ್ಳಲೂ, ಸಮಸ್ತವನ್ನು ಮಾಡಲೂ ನಾನು ಯಾವುದಕ್ಕೋಸ್ಕರ ಸಿದ್ಧ ಮಾಡಿದೆನೋ, ಆ ಮಹಾ ಕಟ್ಟಡವನ್ನು ಕಟ್ಟಿಸಲೂ, ನನ್ನ ಮಗನಾದ ಸೊಲೊಮೋನನಿಗೆ ಪೂರ್ಣ ಹೃದಯವನ್ನು ಕೊಡಿರಿ,” ಎಂದನು.

[20] ತರುವಾಯ ದಾವೀದನು ಸಮಸ್ತ ಸಭೆಗೆ, “ಈಗ ನಿಮ್ಮ ದೇವರಾದ ಯೆಹೋವ ದೇವರನ್ನು ಸ್ತುತಿಸಿರಿ,” ಎಂದನು. ಆಗ ಜನರೆಲ್ಲರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ತಮ್ಮ ತಲೆಗಳನ್ನು ಬಾಗಿಸಿ ಯೆಹೋವ ದೇವರನ್ನೂ, ಅರಸನನ್ನೂ ವಂದಿಸಿದರು.

[21] ಮಾರನೆಯ ದಿವಸದಲ್ಲಿ ಅವರು ಯೆಹೋವ ದೇವರಿಗೆ ಬಲಿಗಳನ್ನು ವಧಿಸಿ, ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ, ಅವುಗಳ ಪಾನದ ಅರ್ಪಣೆಗಳನ್ನೂ, ಸಮಸ್ತ ಇಸ್ರಾಯೇಲರಿಗೋಸ್ಕರ ಬಹಳವಾಗಿ ಬಲಿಗಳನ್ನು ಅರ್ಪಿಸಿದರು.

[22] ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು.

[23] ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಯೆಹೋವ ದೇವರ ಸಿಂಹಾಸನದ ಮೇಲೆ ಕುಳಿತುಕೊಂಡು, ಸಮೃದ್ಧಿ ಹೊಂದಿದನು. ಸಮಸ್ತ ಇಸ್ರಾಯೇಲರು ಅವನಿಗೆ ವಿಧೇಯರಾದರು.

[24] ಎಲ್ಲಾ ಪ್ರಧಾನರೂ, ಪರಾಕ್ರಮಶಾಲಿಗಳೂ, ಅರಸನಾದ ದಾವೀದನ ಸಮಸ್ತ ಪುತ್ರರೂ ಅರಸನಾದ ಸೊಲೊಮೋನನಿಗೆ ಅಧೀನರಾದರು.

[25] ಇದಲ್ಲದೆ ಯೆಹೋವ ದೇವರು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ, ಇಸ್ರಾಯೇಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸನಿಗಾದರೂ ಇಲ್ಲದಂಥ ರಾಜ್ಯದ ವೈಭವವನ್ನು ಅವನಿಗೆ ಕೊಟ್ಟರು.

[26] ಇಷಯನ ಮಗ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.

[27] ಅವನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು.

[28] ಅವನು ದೀರ್ಘಾಯುಷ್ಯದಿಂದಲೂ, ಐಶ್ವರ್ಯದಿಂದಲೂ, ಘನದಿಂದಲೂ ಕೂಡಿದವನಾಗಿ, ಒಳ್ಳೆಯ ಪ್ರಾಯದಲ್ಲಿ ಮರಣಹೊಂದಿದನು. ಅವನ ಮಗ ಸೊಲೊಮೋನನು ಅವನಿಗೆ ಬದಲಾಗಿ ಅರಸನಾದನು.

[29] ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯವರೆಗೆ ಅವನ ಸಮಸ್ತ ಆಳಿಕೆಯೂ, ಅವನ ಪರಾಕ್ರಮವೂ, ಅವನ ಮೇಲೆಯೂ, ಇಸ್ರಾಯೇಲಿನ ಮೇಲೆಯೂ, ಬೇರೆ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಸಂಭವಿಸಿದ ಘಟನೆಗಳು,

[30] ದರ್ಶಿಯಾದ ಸಮುಯೇಲನ ಪುಸ್ತಕದಲ್ಲಿ, ಪ್ರವಾದಿಯಾದ ನಾತಾನನ ಪುಸ್ತಕದಲ್ಲಿ ಮತ್ತು ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಲಿಖಿತವಾಗಿವೆ.

1 ಪೂರ್ವಕಾಲ ವೃತ್ತಾಂತ — Chapters