[1] ದಾವೀದನ ಪಟ್ಟಣಗಳಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿಕೊಂಡು, ದೇವರ ಮಂಜೂಷಕ್ಕೋಸ್ಕರ ಸ್ಥಳಗಳನ್ನು ಸಿದ್ಧಮಾಡಿ, ಅದರ ನಿಮಿತ್ತ ಗುಡಾರ ಹಾಕಿದನು.
[2] ಆಗ ದಾವೀದನು, “ಲೇವಿಯರ ಹೊರತಾಗಿ ಮತ್ತ್ಯಾರೂ ದೇವರ ಮಂಜೂಷವನ್ನು ಹೊರಬಾರದು. ಯೆಹೋವ ದೇವರು ದೇವರ ಮಂಜೂಷವನ್ನು ಹೊರಲೂ, ಯುಗಯುಗಕ್ಕೆ ಅವರಿಗೆ ಸೇವೆಮಾಡಲೂ ಅವರನ್ನು ಆಯ್ದುಕೊಂಡಿದ್ದಾರೆ,” ಎಂದನು.
[3] ದಾವೀದನು ಯೆಹೋವ ದೇವರ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತೆಗೆದುಕೊಂಡು ಬರುವ ನಿಮಿತ್ತ, ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲರನ್ನು ಕೂಡಿಸಿ ಬರಮಾಡಿದನು.
[4] ದಾವೀದನು ಆರೋನನ ಮಕ್ಕಳನ್ನೂ, ಲೇವಿಯರನ್ನೂ ಬರಮಾಡಿದನು.
[5] ಕೊಹಾತನ ಪುತ್ರರಲ್ಲಿ ಮುಖ್ಯಸ್ಥನಾದ ಉರೀಯೇಲನೂ, ಅವನ ಸಹೋದರರಾದ 120 ಮಂದಿಯೂ;
[6] ಮೆರಾರೀಯ ಪುತ್ರರಲ್ಲಿ ಮುಖ್ಯಸ್ಥನಾದ ಅಸಾಯನೂ, ಅವನ ಸಹೋದರರಾದ 220 ಮಂದಿಯೂ;
[7] ಗೇರ್ಷೋಮನ ಪುತ್ರರಲ್ಲಿ ಮುಖ್ಯಸ್ಥನಾದ ಯೋಯೇಲನೂ ಅವನ ಸಹೋದರರಾದ 130 ಮಂದಿಯೂ;
[8] ಎಲೀಚಾಫಾನನ ಪುತ್ರರಲ್ಲಿ ಮುಖ್ಯಸ್ಥನಾದ ಶೆಮಾಯನೂ, ಅವನ ಸಹೋದರರಾದ 200 ಮಂದಿಯೂ;
[9] ಹೆಬ್ರೋನನ ಪುತ್ರರಲ್ಲಿ ಮುಖ್ಯಸ್ಥನಾದ ಎಲೀಯೇಲನೂ, ಅವನ ಸಹೋದರರಾದ 80 ಮಂದಿಯೂ;
[10] ಉಜ್ಜೀಯೇಲನ ಪುತ್ರರಲ್ಲಿ ಮುಖ್ಯಸ್ಥನಾದ ಅಮ್ಮೀನಾದಾಬನೂ, ಅವನ ಸಹೋದರರಾದ 112 ಮಂದಿಯು.
[11] ಆಗ ದಾವೀದನು ಚಾದೋಕನು, ಅಬಿಯಾತರನು ಎಂಬ ಯಾಜಕರನ್ನೂ; ಉರೀಯೇಲನು, ಅಸಾಯನು, ಯೋಯೇಲನು, ಶೆಮಾಯನು, ಎಲೀಯೇಲನು, ಅಮ್ಮೀನಾದಾಬನು ಎಂಬ ಲೇವಿಯರನ್ನೂ ಕರೆಕಳುಹಿಸಿ ಅವರಿಗೆ,
[12] “ನೀವು ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ್ದರಿಂದ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ನಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ, ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ.
[13] ಏಕೆಂದರೆ ನೀವು ಮೊದಲು ಹಾಗೆ ಮಾಡದೆ ಇದ್ದುದರಿಂದ, ಕೋಪದಿಂದ ಯೆಹೋವ ದೇವರಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದರು. ಏಕೆಂದರೆ ನ್ಯಾಯದ ಪ್ರಕಾರ ನಾವು ಅವರನ್ನು ಹುಡುಕಲಿಲ್ಲ,” ಎಂದು ಹೇಳಿದನು.
[14] ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ತರುವುದಕ್ಕೆ ಯಾಜಕರೂ, ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು.
[15] ಮೋಶೆಯು ಆಜ್ಞಾಪಿಸಿದ ಯೆಹೋವ ದೇವರ ವಾಕ್ಯದ ಪ್ರಕಾರ ಲೇವಿಯರು ಕೋಲುಗಳನ್ನು ಹಾಕಿ, ದೇವರ ಮಂಜೂಷವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.
[16] ಇದಲ್ಲದೆ ದಾವೀದನು ವಾದ್ಯಗಳನ್ನೂ ವಿಶೇಷವಾದ ವೀಣೆಗಳನ್ನೂ, ಕಿನ್ನರಿಗಳನ್ನೂ, ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನೂ ಎತ್ತುವ ಹಾಗೆ, ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವುದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.
[17] ಹಾಗೆಯೇ ಲೇವಿಯರು ಯೋಯೇಲನ ಮಗನಾದ ಹೇಮಾನನನ್ನೂ, ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ, ಮೆರಾರೀಯ ಪುತ್ರರ ಸಂಬಂಧಿಕರಲ್ಲಿ ಕೂಷಾಯನ ಮಗ ಏತಾನನನ್ನೂ ನೇಮಿಸಿದರು.
[18] ಅವರ ಸಂಗಡ ಎರಡನೆಯ ದರ್ಜೆಯವರಾದ ತಮ್ಮ ಸಹೋದರರಾಗಿರುವ ಜೆಕರ್ಯನನ್ನೂ ಬೇನನನ್ನೂ ಯಾಜೀಯೇಲನನ್ನೂ, ಶೆಮೀರಾಮೋತನನ್ನೂ ಯೆಹೀಯೇಲನನ್ನೂ, ಉನ್ನೀಯನ್ನೂ, ಎಲೀಯಾಬನನ್ನೂ, ಬೆನಾಯನನ್ನೂ, ಮಾಸೇಯನನ್ನೂ, ಮತ್ತಿತ್ಯನನ್ನೂ, ಎಲೀಫೆಲೇಹುನನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಓಬೇದ್ ಏದೋಮನನ್ನೂ ಯೆಹೀಯೇಲನನ್ನೂ ನೇಮಿಸಿದರು.
[19] ಸಂಗೀತಗಾರರಾದ ಹೇಮಾನನೂ, ಆಸಾಫನೂ, ಏತಾನನೂ ಕಂಚಿನ ತಾಳಗಳನ್ನು ಬಾರಿಸುವವರು.
[20] ಜೆಕರ್ಯ, ಅಜಿಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರನ್ನು ಅಲಮೋತ್ ಎಂಬ ತಾರಸ್ಥಾಯಿಯ ವೀಣೆಗಳನ್ನು ಬಾರಿಸುವುದಕ್ಕೆ ಆರಿಸಿಕೊಂಡರು.
[21] ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದ್ ಏದೋಮ್, ಯೆಹೀಯೇಲ್, ಅಜಜ್ಯ ಎಂಬವರನ್ನು ಶೆಮಿನಿಥ್ ಎಂಬ ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವುದಕ್ಕೂ ನೇಮಿಸಿಕೊಂಡರು.
[22] ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡುವುದಕ್ಕೆ ನೇಮಕವಾದನು. ಅವನು ಸಂಗೀತದಲ್ಲಿ ನಿಪುಣನಾದ್ದರಿಂದ ಅವನು ಮುಖ್ಯಸ್ಥನಾಗಿದ್ದನು.
[23] ಬೆರೆಕ್ಯ, ಎಲ್ಕಾನಾ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.
[24] ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೆಯೇಲ್, ಅಮಾಸೈಯೂ, ಜೆಕರ್ಯನೂ, ಬೆನಾಯನೂ, ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು. ಓಬೇದ್ ಏದೋಮನೂ, ಯೆಹೀಯನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.
[25] ಹೀಗೆಯೇ ದಾವೀದನೂ, ಇಸ್ರಾಯೇಲಿನ ಹಿರಿಯರೂ, ಸಹಸ್ರಾಧಿಪತಿಗಳೂ ಸಂತೋಷವಾಗಿ ಓಬೇದ್ ಏದೋಮನ ಮನೆಯೊಳಗಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.
[26] ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದ್ದರಿಂದ, ಅವರು ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು.
[27] ದಾವೀದನೂ, ಮಂಜೂಷವನ್ನು ಹೊರುವ ಲೇವಿಯರೂ, ಹಾಡುಗಾರರೂ, ಸಂಗೀತಗಾರರ ನಾಯಕನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡಿದ್ದನು.
[28] ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.
[29] ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಕುಣಿಯುತ್ತಾ, ಹಾಡುತ್ತಾ ಇರುವ ಅರಸನಾದ ದಾವೀದನನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.