[1] ಹಾಗಾದರೆ, ದೇವರು ತಮ್ಮ ಜನರನ್ನು ತ್ಯಜಿಸಿಬಿಟ್ಟಿದ್ದಾರೋ ಎಂದು ಕೇಳುತ್ತೇನೆ? ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲನೂ ಅಬ್ರಹಾಮನ ವಂಶದವನೂ ಬೆನ್ಯಾಮೀನನ ಕುಲದವನೂ ಆಗಿದ್ದೇನೆ.
[2] ದೇವರು ತಾವು ಮುಂದಾಗಿ ತಿಳಿದುಕೊಂಡ ತಮ್ಮ ಜನರನ್ನು ತ್ಯಜಿಸಲಿಲ್ಲ. ದೇವರ ವಾಕ್ಯವು ಎಲೀಯನನ್ನು ಕುರಿತು ಏನು ಹೇಳುತ್ತದೆಂದು ನಿಮಗೆ ಗೊತ್ತಿಲ್ಲವೋ?
[3] “ಕರ್ತಾ, ಅವರು ನಿಮ್ಮ ಪ್ರವಾದಿಗಳನ್ನು ಕೊಂದಿದ್ದಾರೆ. ನಿಮ್ಮ ಬಲಿಪೀಠವನ್ನು ಒಡೆದುಹಾಕಿದ್ದಾರೆ, ನಾನು ಒಬ್ಬನೇ ಉಳಿದಿದ್ದೇನೆ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ,” ಎಂದು ಇಸ್ರಾಯೇಲರಿಗೆ ವಿರೋಧವಾಗಿ ದೇವರಲ್ಲಿ ವಿಜ್ಞಾಪನೆ ಮಾಡಿಕೊಂಡನು.
[4] ಅದಕ್ಕೆ ದೇವರು ಅವನಿಗೆ ಕೊಟ್ಟ ಉತ್ತರವೇನಾಗಿತ್ತು? “ಬಾಳನಿಗೆ ಅಡ್ಡಬೀಳದ ಏಳು ಸಾವಿರ ಮಂದಿಯನ್ನು ನನಗೋಸ್ಕರ ಉಳಿಸಿದ್ದೇನೆ,” ಎಂದಲ್ಲವೇ?
[5] ಅದೇ ರೀತಿಯಲ್ಲಿ, ಈ ಕಾಲದಲ್ಲಿಯೂ ಕೃಪೆಯಿಂದ ಆಯ್ಕೆಯಾದ ಇಸ್ರಾಯೇಲರಲ್ಲಿ ಕೆಲವರು ಉಳಿದಿದ್ದಾರೆ.
[6] ಆ ಆಯ್ಕೆಯು ಕ್ರಿಯೆಗಳ ಆಧಾರದಿಂದಲ್ಲ, ಕೃಪೆಯಿಂದಲೇ ಆಗಿರುತ್ತದೆ. ಕ್ರಿಯೆಗಳಿಂದ ಅದು ಆಗಿದ್ದರೆ ಇನ್ನೆಂದಿಗೂ ಕೃಪೆಯಾಗಲಾರದು.
[7] ಹಾಗಾದರೆ ಏನು? ಇಸ್ರಾಯೇಲ್ ಹುಡುಕಿದ್ದನ್ನು ಹೊಂದಲಿಲ್ಲ. ಆದರೆ ಅವರಲ್ಲಿ ಆಯ್ಕೆಯಾದವರು ಹೊಂದಿದರು, ಮಿಕ್ಕವರು ಕಠಿಣ ಹೃದಯಿಗಳಾದರು.
[8] ಪವಿತ್ರ ವೇದದಲ್ಲಿ ಬರೆದಿರುವಂತೆ, “ದೇವರು ಅವರಿಗೆ ಜಡಸ್ವಭಾವದ ಆತ್ಮವನ್ನು, ಕಾಣಲಾರದ ಕಣ್ಣನ್ನು ಮತ್ತು ಕೇಳಲಾರದ ಕಿವಿಯನ್ನು ಕೊಟ್ಟರು, ಅದು ಇಂದಿನವರೆಗೂ ಹಾಗೆಯೇ ಇದೆ.”
[9] ದಾವೀದನು, “ಅವರ ಊಟವೇ ಅವರಿಗೆ ಉರುಲೂ ಬೋನೂ ಆಗಲಿ. ಅದು ಅಡೆತಡೆಯೂ ಪ್ರತಿಕಾರವೂ ಆಗಲಿ.
[10] ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ,” ಎಂದು ಹೇಳುತ್ತಾನೆ.
[11] ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು.
[12] ಆದರೆ ಅವರ ಅಪರಾಧವು ಜಗತ್ತಿಗೆ ಐಶ್ವರ್ಯವನ್ನು ಉಂಟುಮಾಡಿತು. ಅವರ ನಷ್ಟವೇ ಯೆಹೂದ್ಯರಲ್ಲದವರಿಗೆ ಐಶ್ವರ್ಯವನ್ನು ಉಂಟುಮಾಡುವುದಾದರೆ, ಅವರ ಪರಿಪೂರ್ಣತೆಯು ಇನ್ನೂ ಎಷ್ಟೋ ಹೆಚ್ಚಾದ ಐಶ್ವರ್ಯವನ್ನು ಉಂಟುಮಾಡಬಹುದಲ್ಲವೇ!
[13] ಯೆಹೂದ್ಯರಲ್ಲದವರಾಗಿರುವ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಾನು ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿರುವಷ್ಟರ ಮಟ್ಟಿಗೆ ನನ್ನ ಸೇವೆಯನ್ನು ಪ್ರಭಾವಗೊಳಿಸುತ್ತೇನೆ.
[14] ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು.
[15] ಏಕೆಂದರೆ ಇಸ್ರಾಯೇಲರನ್ನು ತ್ಯಜಿಸುವುದರಿಂದ ಜಗತ್ತು ದೇವರೊಡನೆ ಸಂಧಾನವಾಗುವುದಾದರೆ, ಅವರನ್ನು ಸ್ವೀಕರಿಸುವುದು, ಸತ್ತವರು ಜೀವಿತರಾಗಿ ಎದ್ದು ಬಂದಂತಾಗಿರುವುದಲ್ಲವೇ?
[16] ಪ್ರಥಮಫಲವಾಗಿ ಹಿಟ್ಟಿನಲ್ಲಿ ದೇವರಿಗೆ ಭಾಗವನ್ನು ಸಮರ್ಪಿಸಿದ್ದು ಪವಿತ್ರವಾಗಿದ್ದರೆ, ಹಿಟ್ಟೆಲ್ಲಾ ಪವಿತ್ರವಾಗಿರುತ್ತದೆ. ಬೇರು ಪವಿತ್ರವಾಗಿದ್ದರೆ, ಕೊಂಬೆಗಳೂ ಪವಿತ್ರವಾಗಿರುತ್ತವೆ?
[17] ಕೆಲವು ಕೊಂಬೆಗಳು ಮುರಿದುಹೋಗಿರುವುದಾದರೆ, ಕಾಡು ಓಲಿವ್ ಮರದಂತಿರುವ ನೀನು ಅವುಗಳ ನಡುವೆ ಕಸಿಮಾಡಿ ಉತ್ತಮ ಓಲಿವ್ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರಲಾಗಿ,
[18] ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ. ಹೆಚ್ಚಿಸಿಕೊಂಡರೆ, ನೀನು ಆ ಬೇರಿನ ಆಧಾರವಲ್ಲ. ಆ ಬೇರೇ ನಿನಗೆ ಆಧಾರವಾಗಿದೆ.
[19] ಹಾಗಾದರೆ ನೀನು, “ನಾನು ಕಸಿಕಟ್ಟಿಸಿಕೊಳ್ಳಬೇಕೆಂದು ಆ ಕೊಂಬೆಗಳನ್ನು ಮುರಿದು ಹಾಕಲಾಯಿತು,” ಎಂದು ನೀನು ಹೇಳಬಹುದು.
[20] ಅದು ನಿಜವೆ, ಆದರೆ ಅವರ ಅವಿಶ್ವಾಸದಿಂದಲೇ ಅವರನ್ನು ಮುರಿದು ಹಾಕಲಾಯಿತು. ನೀನಾದರೋ ವಿಶ್ವಾಸದಿಂದಲೇ ಇನ್ನೂ ನಿಂತಿರುವೆ. ಗರ್ವಪಡದೆ ಭಯದಿಂದಿರು.
[21] ಏಕೆಂದರೆ ದೇವರು ಹುಟ್ಟು ಕೊಂಬೆಗಳನ್ನು ಉಳಿಸದಿದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ.
[22] ಆದ್ದರಿಂದ, ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು. ಬಿದ್ದವರ ಕಡೆಗೆ ಅವರ ಕಾಠಿಣ್ಯವಿದೆ, ನೀನು ದೇವರ ದಯೆಯಲ್ಲಿಯೇ ಮುಂದುವರಿಯುವುದಾದರೆ ನಿನ್ನ ಮೇಲೆ ದೇವರ ದಯೆಯಿರುವುದು. ಇಲ್ಲದೆ ಹೋದರೆ, ನೀನು ಕೂಡ ಕಡಿದುಹಾಕಲಾಗುವೆ.
[23] ಇಸ್ರಾಯೇಲರು ಕೂಡ ಇನ್ನೂ ಅವಿಶ್ವಾಸದಲ್ಲಿ ಮುಂದುವರಿಯದಿದ್ದರೆ, ಕಸಿಕಟ್ಟಲಾಗುವರು, ಏಕೆಂದರೆ ಅವರನ್ನು ಪುನಃ ಕಸಿಕಟ್ಟಲು ದೇವರು ಶಕ್ತರಾಗಿರುತ್ತಾರೆ.
[24] ಎಷ್ಟಾದರೂ ಕಾಡು ಓಲಿವ್ ಮರದಿಂದ ನೀನು ಕಡಿದುಹಾಕಲಾದ ಕೊಂಬೆ. ನೀನು ನೆಟ್ಟು ಬೆಳೆಸಿರುವ ಉತ್ತಮ ಓಲಿವ್ ಮರಕ್ಕೆ ಅಸ್ವಾಭಾವಿಕವಾಗಿ ಕಸಿಮಾಡುವುದಾದರೆ ಸ್ವಾಭಾವಿಕವಾಗಿರುವ ಈ ಕೊಂಬೆಗಳನ್ನು ಎಷ್ಟೋ ಹೆಚ್ಚಾಗಿ ಓಲಿವ್ ಮರಕ್ಕೆ ಅದೇ ಕಸಿಕಟ್ಟುವುದು ಸುಲಭವಲ್ಲವೇ?
[25] ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು.
[26] ಹೀಗೆ ಪವಿತ್ರ ವೇದದಲ್ಲಿ ಬರೆದಿರುವಂತೆ, ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು: “ವಿಮೋಚಿಸುವವರು ಒಬ್ಬರು ಚೀಯೋನಿನಿಂದ ಬರುತ್ತಾರೆ, ಅವರು ಯಾಕೋಬನ ಸಂತತಿಯಲ್ಲಿ ದೇವರನ್ನು ಅಲ್ಲಗಳೆಯುವ ಸ್ವಭಾವನ್ನು ತಾವೇ ತೆಗೆದುಹಾಕುವರು.
[27] ನಾನು ಅವರ ಪಾಪಗಳನ್ನು ತೆಗೆದುಹಾಕುವಾಗ, ಅವರೊಂದಿಗೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ ಎಂದು ತಿಳಿದುಕೊಳ್ಳುವೆನು,” ಎಂಬುದೇ.
[28] ಸುವಾರ್ತೆಯ ಪ್ರಕಾರ ಇಸ್ರಾಯೇಲರು ಈಗ ನಿಮ್ಮ ನಿಮಿತ್ತ ಶತ್ರುಗಳು. ಆದರೆ ದೇವರ ಆಯ್ಕೆಯ ದೃಷ್ಟಿಯಲ್ಲಿ ನೋಡುವಾಗ ಮೂಲಪಿತೃಗಳ ನಿಮಿತ್ತದಿಂದ ಅವರು ಪ್ರೀತಿಹೊಂದಿದವರು.
[29] ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ.
[30] ಒಂದು ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದ ನೀವು ಇಸ್ರಾಯೇಲರ ಅವಿಧೇಯತೆಯಿಂದ ಈಗ ಕರುಣೆಯನ್ನು ಹೊಂದಿರುವಿರಿ.
[31] ಅದೇ ಪ್ರಕಾರವಾಗಿ ಇಸ್ರಾಯೇಲರು ಈಗ ಅವಿಧೇಯರಾಗಿದ್ದರೂ ನಿಮಗೆ ಕರುಣೆ ದೊರಕಿದಂತೆ, ಅವರಿಗೂ ಈಗ ಕರುಣೆ ದೊರಕುವುದು.
[32] ದೇವರು ತಾವು ಎಲ್ಲರಿಗೂ ಕರುಣೆ ತೋರಿಸುವುದಕ್ಕಾಗಿ ಎಲ್ಲರನ್ನೂ ಅವಿಧೇಯತೆಯಲ್ಲಿ ಕಟ್ಟಿಹಾಕಿರುತ್ತಾರೆ.
[33] ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು! ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು! ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!
[34] “ಕರ್ತದೇವರ ಮನಸ್ಸನ್ನು ಅರಿತವರು ಯಾರು? ಅವರಿಗೆ ಆಲೋಚನೆಯನ್ನು ನೀಡುವವರು ಯಾರು?”
[35] “ದೇವರಿಗೆ ಮೊದಲು ಕೊಟ್ಟು, ಅವರಿಂದ ಪ್ರತಿಫಲವನ್ನು ಪಡೆಯುವವರು ಯಾರು?”
[36] ಏಕೆಂದರೆ ಸಮಸ್ತವೂ ದೇವರಿಂದ ಉಂಟಾಗಿ ದೇವರ ಮೂಲಕವಾಗಿಯೂ ದೇವರಿಗಾಗಿಯೂ ಇರುತ್ತವೆ. ಮಹಿಮೆಯು ಸದಾಕಾಲವೂ ದೇವರಿಗೇ ಸಲ್ಲುವುದಾಗಿರಲಿ. ಆಮೆನ್.