Skip to content
Opens in a new window
Listen to this chapter • 5:24

[1] ಹಾಗಾದರೆ ಯೆಹೂದ್ಯರಾಗಿರುವುದರಿಂದ ಪ್ರಯೋಜನವೇನು? ಅಥವಾ ಸುನ್ನತಿಯಿಂದ ಲಾಭವೇನು?

[2] ಎಲ್ಲಾ ವಿಷಯಗಳಲ್ಲಿಯೂ ಬಹಳ ಪ್ರಯೋಜನವಿದೆ. ಮೊದಲನೆಯದಾಗಿ ದೇವರ ವಾಕ್ಯಗಳು ಯೆಹೂದ್ಯರ ವಶಕ್ಕೆ ಒಪ್ಪಿಸಲಾಗಿವೆ.

[3] ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರ ಅಪನಂಬಿಕೆಯು ದೇವರ ಪ್ರಾಮಾಣಿಕತೆಯನ್ನು ರದ್ದುಗೊಳಿಸುವುದೇ?

[4] ಎಂದಿಗೂ ಹಾಗೆ ಆಗದಿರಲಿ. ಆದರೆ ಪ್ರತಿ ಮನುಷ್ಯನು ಸುಳ್ಳುಗಾರನಾದರೂ ದೇವರು ಸತ್ಯವಂತರೇ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ನೀನು ನಿನ್ನ ಮಾತುಗಳಲ್ಲಿಯೇ ನೀತಿವಂತನೆಂದು ನಿರ್ಣಯಿಸಲಾಗುವೆ. ನಿನ್ನ ಮೇಲೆ ತೀರ್ಪು ಮಾಡುವಾಗ ನೀನು ಜಯಿಸಬೇಕು.”

[5] ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ.

[6] ಎಂದಿಗೂ ಹಾಗೆ ಆಗದಿರಲಿ. ದೇವರು ಅನ್ಯಾಯಗಾರರಾಗಿದ್ದರೆ ಲೋಕಕ್ಕೆ ನ್ಯಾಯತೀರಿಸುವುದು ಹೇಗೆ?

[7] “ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೊಂಡು ಅವರ ಮಹಿಮೆಯನ್ನು ಹೆಚ್ಚಿಸುವುದಾದರೆ ನನಗೆ ಪಾಪಿಯೆಂದು ಇನ್ನು ತೀರ್ಪಾಗುವುದು ಏಕೆ?”

[8] “ಒಳ್ಳೆಯದಾಗುವಂತೆ ಕೆಟ್ಟದ್ದನ್ನು ಮಾಡೋಣ,” ಎಂದು ನಾವು ಹೇಳುತ್ತಿರುವುದಾಗಿ, ಕೆಲವರು ನಮ್ಮ ಬಗ್ಗೆ ದೂಷಿಸಿ ಹೇಳುವ ಪ್ರಕಾರ ನಾವೇಕೆ ಹೇಳಬಾರದು? ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯವೇ!

[9] ಹಾಗಾದರೆ ಏನು? ಯೆಹೂದ್ಯರಾದ ನಾವು ಯೆಹೂದ್ಯರಲ್ಲದವರಿಗಿಂತಲೂ ಶ್ರೇಷ್ಠರೋ? ಎಂದಿಗೂ ಇಲ್ಲವಲ್ಲ. ಯೆಹೂದ್ಯರಾಗಲಿ, ಯೆಹೂದ್ಯರಲ್ಲದವರಾಗಲಿ ಎಲ್ಲರೂ ಪಾಪದ ಶಕ್ತಿಗೆ ಒಳಗಾದವರೆಂದು ನಾವು ಈಗಾಗಲೇ ತೋರಿಸಿದ್ದೇವೆ.

[10] ಪವಿತ್ರ ವೇದಗಳಲ್ಲಿ ಬರೆದಿರುವಂತೆ: “ನೀತಿವಂತನು ಇಲ್ಲ, ಒಬ್ಬನೂ ಇಲ್ಲ.

[11] ಅರ್ಥಮಾಡಿಕೊಳ್ಳುವವನು ಒಬ್ಬನೂ ಇಲ್ಲ. ದೇವರನ್ನು ಹುಡುಕುವವನು ಒಬ್ಬನೂ ಇಲ್ಲ.

[12] ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಲಸಕ್ಕೆ ಬಾರದವರಾಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ ಒಬ್ಬನಾದರೂ ಇಲ್ಲ.”

[13] “ಅವರ ಗಂಟಲುಗಳು ತೆರೆದ ಸಮಾಧಿಗಳು. ಅವರ ನಾಲಿಗೆಯು ವಂಚನೆಯನ್ನು ನುಡಿಯುತ್ತದೆ.” “ಅವರ ತುಟಿಗಳಲ್ಲಿ ಹಾವಿನ ವಿಷವಿದೆ.”

[14] “ಅವರ ಬಾಯಿ ಶಾಪದಿಂದಲೂ ಕಹಿಯಿಂದಲೂ ತುಂಬಿರುತ್ತವೆ.”

[15] “ಅವರ ಕಾಲುಗಳು ರಕ್ತಪಾತಕ್ಕೆ ಆತುರಗೊಂಡಿವೆ.

[16] ನಾಶ, ಸಂಕಟಗಳು ಅವರ ಮಾರ್ಗಗಳಲ್ಲಿ ಹಿಂಬಾಲಿಸುತ್ತವೆ.

[17] ಸಮಾಧಾನದ ಮಾರ್ಗವನ್ನೇ ಅವರು ಅರಿಯರು.”

[18] “ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.”

[19] ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.

[20] ಆದ್ದರಿಂದ ಯಾರೂ ದೇವರ ದೃಷ್ಟಿಯಲ್ಲಿ ನಿಯಮದ ಕೃತ್ಯಗಳಿಂದ ನೀತಿವಂತರೆಂದು ನಿರ್ಣಯಿಸಲಾಗುವುದಿಲ್ಲ. ನಿಯಮದಿಂದ ಪಾಪದ ಪ್ರಜ್ಞೆ ಉಂಟಾಗುತ್ತದಷ್ಟೆ.

[21] ಆದರೆ ಈಗ ನಿಯಮವಿಲ್ಲದೆ ದೇವರ ನೀತಿಯು ಪ್ರಕಟವಾಗಿದೆ. ಅದಕ್ಕೆ ನಿಯಮವೂ ಪ್ರವಾದಿಗಳೂ ಸಾಕ್ಷಿಕೊಡುತ್ತಾರೆ.

[22] ದೇವರ ನೀತಿಯು ನಂಬುವವರೆಲ್ಲರಿಗೆ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಡುವುದರ ಮೂಲಕ ಲಭಿಸುತ್ತದೆ. ಇಲ್ಲಿ ಯಾವ ಭೇದವೂ ಇರುವುದಿಲ್ಲ.

[23] ಏಕೆಂದರೆ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.

[24] ಆದರೆ ಕ್ರಿಸ್ತ ಯೇಸುವಿನಲ್ಲಿ ಬಂದ ವಿಮೋಚನೆಯ ಮೂಲಕ ಅವರು ದೇವರ ಕೃಪೆಯಿಂದ ಉಚಿತವಾಗಿ ನೀತಿವಂತರೆಂದು ನಿರ್ಣಯ ಹೊಂದುತ್ತಾರೆ.

[25] ಇದನ್ನು ನಂಬಿಕೆಯಿಂದ ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೊರಕುವಂತೆ ದೇವರು ಕ್ರಿಸ್ತ ಯೇಸುವನ್ನು ನಮಗಾಗಿ ಪ್ರಾಯಶ್ಚಿತ್ತ ಬಲಿಯಾಗಿ ಒಪ್ಪಿಸಿದರು. ದೇವರು ಹಿಂದಿನ ಕಾಲದಲ್ಲಿ ಜನರು ಮಾಡಿರುವ ಪಾಪಗಳನ್ನು ದಂಡಿಸದೆ ತಮ್ಮ ನೀತಿಯನ್ನು ತೋರಿಸಿಕೊಡುವುದಕ್ಕಾಗಿಯೂ

[26] ಈಗಿನ ಕಾಲದಲ್ಲಿ ದೇವರು ತಮ್ಮ ನೀತಿಯನ್ನು ತೋರ್ಪಡಿಸಲೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕಾಗಿಯೂ ದೀರ್ಘಶಾಂತರಾಗಿದ್ದಾರೆ.

[27] ಹಾಗಾದರೆ, ನಾವು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವೆಲ್ಲಿ? ಆಸ್ಪದವೇ ಇಲ್ಲ. ನೀತಿವಂತರೆಂಬ ನಿರ್ಣಯ ನಿಯಮದಿಂದಲೋ? ಕ್ರಿಯೆಗಳಿಂದಲೋ? ಇಲ್ಲ, ಅದು ಇಲ್ಲದೆ ಹೋಯಿತು. ಅದು ನಂಬಿಕೆಯ ನಿಯಮದಿಂದಲೇ.

[28] ಏಕೆಂದರೆ ನಿಯಮವನ್ನು ಕೈಕೊಳ್ಳುವುದರಿಂದಲೇ. ನಂಬಿಕೆಯಿಂದಲೇ ಒಬ್ಬ ಮನುಷ್ಯನು ನೀತಿವಂತನೆಂದು ನಿರ್ಣಯ ಹೊಂದುತ್ತಾನೆಂದು ಎಣಿಸುತ್ತೇವೆ.

[29] ದೇವರು ಯೆಹೂದ್ಯರಿಗೆ ಮಾತ್ರ ದೇವರೋ? ದೇವರು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿರುವುದಿಲ್ಲವೋ? ಹೌದು, ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾರೆ.

[30] ಸುನ್ನತಿಯವರಿಗೂ ಸುನ್ನತಿಯಿಲ್ಲದವರಿಗೂ ಒಂದೇ ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ.

[31] ಹಾಗಾದರೆ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ. ಹಾಗಾದರೆ, ನಾವು ನಂಬಿಕೆಯ ಮೂಲಕ ನಿಯಮವನ್ನು ನಿರರ್ಥಕಗೊಳಿಸುತ್ತೇವೋ? ಎಂದಿಗೂ ಇಲ್ಲ. ನಾವು ನಿಯಮವನ್ನು ಸ್ಥಿರಪಡಿಸುತ್ತೇವಷ್ಟೇ.

ರೋಮಾಪುರದವರಿಗೆ — Chapters