[1] ನಮ್ಮ ಸಹೋದರಿಯೂ ಕೆಂಖ್ರೆಯ ಸಭೆಯ ಸೇವಕಿಯೂ ಆಗಿರುವ ಫೊಯಿಬೆಯನ್ನು ನಿಮಗೆ ಪರಿಚಯಿಸುತ್ತೇನೆ.
[2] ಕರ್ತನಲ್ಲಿ ದೇವಜನರಿಗೆ ಯೋಗ್ಯವಾಗಿರುವ ರೀತಿಯಲ್ಲಿ ಆಕೆಯನ್ನು ಸ್ವೀಕರಿಸಿ, ಆಕೆಯು ಅನೇಕರಿಗೂ ನನಗೂ ವಿಶೇಷವಾದ ರೀತಿಯಲ್ಲಿ ಸಹಾಯ ಮಾಡಿದವಳಾಗಿರುವುದರಿಂದ ನಿಮಗೆ ಯಾವ ಕೊರತೆಗಳಿದ್ದರೂ ಆಕೆಗೆ ಬೇಕಾದದ್ದನ್ನು ಒದಗಿಸಿರಿ.
[3] ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಕೆಲಸದವರಾಗಿರುವ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
[4] ಅವರು ನನ್ನ ಪ್ರಾಣದ ನಿಮಿತ್ತವಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿದರು. ಅವರಿಗೆ ನಾನು ಮಾತ್ರವೇ ಅಲ್ಲ ಯೆಹೂದ್ಯರಲ್ಲದವರು ಎಲ್ಲಾ ಸಭೆಗಳವರೂ ಕೃತಜ್ಞರಾಗಿರುತ್ತಾರೆ.
[5] ಅವರ ಮನೆಯಲ್ಲಿ ಸೇರಿ ಬರುವ ಸಭೆಗೂ ನನ್ನ ವಂದನೆಗಳನ್ನು ತಿಳಿಸಿರಿ. ಏಷ್ಯಾ ಪ್ರಾಂತದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾಗಿರುವ ಎಪೈನೆತನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
[6] ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆಗಳು.
[7] ನನ್ನ ಬಂಧುಗಳೂ ಜೊತೆ ಸೆರೆಯವರೂ ಆದ ಅಂದ್ರೋನಿಕನಿಗೂ ಯೂನ್ಯಳಿಗೂ ವಂದನೆಗಳು. ಅವರು ಅಪೊಸ್ತಲರಲ್ಲಿ ಪ್ರಸಿದ್ಧರೂ ಮತ್ತು ನನಗಿಂತ ಮೊದಲೇ ಕ್ರಿಸ್ತನಲ್ಲಿದ್ದವರೂ ಆಗಿರುತ್ತಾರೆ.
[8] ನನಗೆ ಕರ್ತನಲ್ಲಿ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆಗಳು.
[9] ಕ್ರಿಸ್ತನಲ್ಲಿ ನನ್ನ ಜೊತೆ ಸೇವಕನಾಗಿರುವ ಉರ್ಬಾನನಿಗೂ ನನಗೆ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
[10] ಕ್ರಿಸ್ತನಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆಗಳು, ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
[11] ನನ್ನ ಸಂಬಂಧಿಯಾಗಿರುವ ಹೆರೊಡಿಯೋನನಿಗೆ ವಂದನೆಗಳು, ಕರ್ತನಲ್ಲಿರುವ ನಾರ್ಕಿಸ್ಸನ ಕುಟುಂಬದವರಿಗೆ ವಂದನೆಗಳು.
[12] ಕರ್ತನ ಸೇವೆಯಲ್ಲಿ ದುಡಿಯುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು, ಕರ್ತನಲ್ಲಿ ತುಂಬಾ ಶ್ರಮಪಟ್ಟು ದುಡಿದಿರುವ ಪ್ರೀತಿಯ ಪೆರ್ಸೀಸಳಿಗೂ ನನ್ನ ವಂದನೆಗಳು.
[13] ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೂ ತಾಯಿಯಂತಿದ್ದ ಅವನ ತಾಯಿಗೂ ವಂದನೆಗಳು.
[14] ಅಸುಂಕ್ರಿತ, ಪ್ಲೆಗೋನ, ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನ ಮತ್ತು ಅವನೊಂದಿಗಿರುವ ಪ್ರಿಯರಿಗೂ ವಂದನೆಗಳು.
[15] ಫಿಲೊಲೊಗ, ಯೂಲ್ಯಳು, ನೇರ್ಯ ಮತ್ತು ಅವನ ಸಹೋದರಿ, ಒಲುಂಪ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೂ ವಂದನೆಗಳು.
[16] ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲಾ ಸಭೆಗಳವರೂ ನಿಮಗೆ ವಂದನೆಗಳನ್ನು ಕಳುಹಿಸುತ್ತಾರೆ.
[17] ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[18] ಅಂಥಾ ಜನರು ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಸೇವೆ ಮಾಡುವವರಾಗಿರದೆ ತಮ್ಮ ಹೊಟ್ಟೆಯ ಸೇವೆ ಮಾಡುವವರಾಗಿರುತ್ತಾರೆ. ನಯವಾದ ಮತ್ತು ಮುಖಸ್ತುತಿಯ ಮಾತುಗಳಿಂದ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
[19] ನಿಮ್ಮ ವಿಧೇಯತೆಯು ಎಲ್ಲಾ ಮನುಷ್ಯರಿಗೂ ಪ್ರಸಿದ್ಧವಾಯಿತು. ಆದ್ದರಿಂದ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ಆದರೆ ನೀವು ಒಳ್ಳೆಯದನ್ನು ಕುರಿತು ಜ್ಞಾನಿಗಳಾಗಿಯೂ ಕೆಟ್ಟವುಗಳನ್ನು ಕುರಿತು ನಿಷ್ಕಳಂಕರಾಗಿಯೂ ಇರಬೇಕೆಂದು ಅಪೇಕ್ಷಿಸುತ್ತೇನೆ.
[20] ಆಗ ಸಮಾಧಾನದ ದೇವರು ಬೇಗನೆ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತ ಆಗಿರುವ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
[21] ನನ್ನ ಜೊತೆ ಕೆಲಸದವನಾಗಿರುವ ತಿಮೊಥೆಯನು ನಿಮಗೆ ವಂದನೆಗಳನ್ನು ತಿಳಿಸುತ್ತಾನೆ. ಹಾಗೆಯೇ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
[22] ಈ ಪತ್ರವನ್ನು ಬರೆದ ತೆರ್ತ್ಯನೆಂಬ ನಾನು ಕರ್ತನಲ್ಲಿ ನಿಮ್ಮನ್ನು ವಂದಿಸುತ್ತೇನೆ.
[23] ಇಲ್ಲಿ ನನಗೂ ಇಡೀ ಸಭೆಗೂ ಅತಿಥಿ ಸತ್ಕಾರ ಮಾಡುತ್ತಿರುವ ಗಾಯನು ತನ್ನ ವಂದನೆಗಳನ್ನು ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾಗಿರುವ ಎರಸ್ತನೂ ಮತ್ತು ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
[24] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರೊಡನೆ ಇರಲಿ! ಆಮೆನ್.
[25] ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.
[26] ಆದರೆ ನಿತ್ಯ ದೇವರು ಆಜ್ಞಾಪಿಸಿದಂತೆ ಈಗ ಪ್ರವಾದಿಗಳ ಗ್ರಂಥಗಳ ಮೂಲಕ ಮುಂತಿಳಿಸಿರುವಂತೆ, ಈ ಸಂದೇಶವು ಯೆಹೂದ್ಯರಲ್ಲದ ಜನರೆಲ್ಲರಿಗೂ ತಿಳಿಸಲಾಗಿದೆ. ಹೀಗೆ ಅವರು ನಂಬಿದ್ದರಿಂದ ವಿಧೇಯರಾಗುತ್ತಾರೆ.
[27] ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.