Skip to content
Opens in a new window
Listen to this chapter • 6:32

[1] ನಾನು ಕ್ರಿಸ್ತ ಯೇಸುವಿನಲ್ಲಿ ಸತ್ಯವನ್ನು ಮಾತನಾಡುತ್ತೇನೆ. ನಾನು ಸುಳ್ಳು ಹೇಳುತ್ತಾ ಇಲ್ಲ. ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮ ದೇವರ ಮೂಲಕ ಖಚಿತ ಪಡಿಸುತ್ತದೆ.

[2] ನನ್ನ ಹೃದಯದಲ್ಲಿ ಮಹಾದುಖಃವೂ ಎಡೆಬಿಡದ ವೇದನೆಯೂ ತೀರದವೇದನೆಯೂ ಇದೆ.

[3] ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ.

[4] ಇಸ್ರಾಯೇಲರಾದ ಅವರಿಗೆ ಸ್ವೀಕಾರವೂ ದೇವರ ಮಹಿಮೆಯೂ ಒಡಂಬಡಿಕೆಗಳೂ ನಿಯಮ ಕೊಡೋಣವೂ ದೇವಾಲಯದ ಸೇವೆಯೂ ಹಾಗೂ ವಾಗ್ದಾನಗಳೂ ಒಪ್ಪಿಸಲಾಗಿವೆ.

[5] ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್.

[6] ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.

[7] ಅಥವಾ ಅಬ್ರಹಾಮನ ಸಂತತಿಯವರೆಲ್ಲ ಅವನ ಮಕ್ಕಳಲ್ಲ. ಆದರೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ಹೇಳಲಾಗಿದೆ.

[8] ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು.

[9] ಏಕೆಂದರೆ, “ನೇಮಕವಾದ ಕಾಲದಲ್ಲಿ ನಾನು ತಿರುಗಿ ಬಂದಾಗ ಸಾರಳಿಗೆ ಒಬ್ಬ ಮಗನಿರುವನು,” ಅದು ವಾಗ್ದಾನದ ಮಾತಾಗಿತ್ತು.

[10] ಇದು ಮಾತ್ರವಲ್ಲದೆ, ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನ ಮೂಲಕ ಅವಳಿಜವಳಿ ಮಕ್ಕಳನ್ನು ಪಡೆದಳು.

[11] ಹೀಗೆ, ಆ ಮಕ್ಕಳು ಹುಟ್ಟುವುದಕ್ಕೆ ಮುಂಚೆ, ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುವುದಕ್ಕೆ ಮುಂಚೆಯೇ, ದೇವರ ಆಯ್ಕೆಯ ಉದ್ದೇಶವು ಕೃತ್ಯಗಳಿಗೆ ಅನುಸಾರವಲ್ಲವೆಂಬುದು ಸ್ಥಿರವಾಯಿತು.

[12] ಆದರೆ ಅದು ಕರೆಯುವಾತನಿಂದಲೇ, “ಹಿರಿಯನು ಕಿರಿಯವನಿಗೆ ಸೇವೆಮಾಡುವನು,” ಎಂದು ರೆಬೆಕ್ಕಳಿಗೆ ಹೇಳಲಾಗಿತ್ತು.

[13] ಇದಕ್ಕನುಸಾರವಾಗಿ, “ಯಾಕೋಬನನ್ನು ನಾನು ಪ್ರೀತಿಸಿದೆನು, ಆದರೆ ಏಸಾವನನ್ನು ಹಗೆ ಮಾಡಿದೆನು,” ಎಂದು ಬರೆದಿರುತ್ತದೆ.

[14] ಹಾಗಾದರೆ ನಾವು ಏನು ಹೇಳೋಣ? ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ.

[15] ದೇವರು ಮೋಶೆಗೆ ಹೇಳಿದ್ದೇನೆಂದರೆ, “ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.”

[16] ಆದ್ದರಿಂದ ದೇವರ ಆಯ್ಕೆಯು ಮನುಷ್ಯನ ಬಯಕೆ ಅಥವಾ ಪ್ರಯತ್ನದಿಂದಾಗಿರದೆ, ದೇವರ ಕರುಣೆಯಿಂದಲೇ ಆಗಿದೆ.

[17] ಏಕೆಂದರೆ, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು,” ಎಂದು ಪವಿತ್ರ ವೇದದಲ್ಲಿ ದೇವರು ಫರೋಹನಿಗೆ ಹೇಳುತ್ತಾರೆ.

[18] ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ.

[19] ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ.

[20] ಎಲೈ, ಮನುಷ್ಯನೇ, ದೇವರಿಗೆ ಎದುರಾಗಿ ಮಾತನಾಡಲು ನೀನು ಯಾರು? “ರೂಪಿಸಿರುವುದು ರೂಪಿಸಿದವನಿಗೆ, ‘ಏಕೆ ನನ್ನನ್ನು ಹೀಗೆ ರೂಪಿಸಿದೆ?’ ” ಎಂದು ಪ್ರಶ್ನಿಸಬಹುದೋ?

[21] ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ?

[22] ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು?

[23] ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು.

[24] ಇದಕ್ಕಾಗಿಯೇ ದೇವರು ಯೆಹೂದ್ಯರನ್ನು ಮಾತ್ರವೇ ಕರೆಯದೆ ಯೆಹೂದ್ಯರಲ್ಲದವರನ್ನು ಸಹ ಕರೆದಿದ್ದಾರಲ್ಲಾ?

[25] ಹೋಶೇಯನ ಪ್ರವಾದನೆಯಲ್ಲಿ ದೇವರು, “ನನ್ನ ಜನರಲ್ಲದವರನ್ನು ‘ನನ್ನ ಜನರು,’ ಎಂದು ಕರೆಯುವರು. ನಾನು ಪ್ರೀತಿಸದವರನ್ನು ನನ್ನ ‘ಪ್ರಿಯರು’ ಎಂದೂ ಹೇಳುವರು.”

[26] ಮತ್ತು, “ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ, ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,” ಎಂದು ದೇವರು ಹೇಳುತ್ತಾರೆ.

[27] ಇದಲ್ಲದೆ ಯೆಶಾಯನು ಇಸ್ರಾಯೇಲರನ್ನು ಕುರಿತು ಕೂಗಿ ಹೇಳುವುದೇನೆಂದರೆ, “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಣೆಹೊಂದುವರು.

[28] ಏಕೆಂದರೆ ಕರ್ತನು ತಮ್ಮ ವಾಕ್ಯವನ್ನು ಭೂಮಿಯ ಮೇಲೆ ಅಂತಿಮವಾಗಿಯೂ ತ್ವರಿತವಾಗಿಯೂ ನೆರವೇರಿಸುವರು.”

[29] ಯೆಶಾಯನು ಈ ಹಿಂದೆ, “ಸೇನಾಧೀಶ್ವರರಾದ ದೇವರು ನಮಗೆ ಸಂತತಿಯನ್ನು ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರದ ಹಾಗೆ ಇರುತ್ತಿದ್ದೆವು.” ಎಂದು ಹೇಳಿದ್ದಾನೆ.

[30] ಹಾಗಾದರೆ ನಾವು ಏನು ಹೇಳೋಣ? ನೀತಿಯನ್ನು ಅನುಸರಿಸದ ಯೆಹೂದ್ಯರಲ್ಲದವರು ನಂಬಿಕೆಯ ಮೂಲಕ ದೊರಕುವ ನೀತಿಯನ್ನು ಪಡೆದರು.

[31] ಆದರೆ ನೀತಿಯ ನಿಯಮವನ್ನು ಅನುಸರಿಸಿದ ಇಸ್ರಾಯೇಲರಾದರೋ ಆ ನೀತಿಯ ಮಾರ್ಗವನ್ನು ಪಡೆಯಲಿಲ್ಲ.

[32] ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು.

[33] ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”

ರೋಮಾಪುರದವರಿಗೆ — Chapters