Skip to content
Opens in a new window
Listen to this chapter • 4:09

[1] ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ.

[2] ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ಆಸಕ್ತಿಯು ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ.

[3] ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.

[4] ಕ್ರಿಸ್ತ ಯೇಸುವನ್ನು ನಂಬುವ ಪ್ರತಿಯೊಬ್ಬರಿಗೂ ನೀತಿಯು ದೊರಕುವಂತೆ ಕ್ರಿಸ್ತ ಯೇಸು ಮೋಶೆಯ ನಿಯಮದ ಅಂತ್ಯವಾಗಿರುತ್ತಾರೆ.

[5] ನಿಯಮದಿಂದ ಬರುವ ನೀತಿಯ ಬಗ್ಗೆ ಮೋಶೆಯು ಬರೆದಿರುವುದು ಏನೆಂದರೆ: “ನಿಯಮದಲ್ಲಿ ಬರೆದಿರುವ ಎಲ್ಲವನ್ನೂ ಮಾಡುವವರೇ ಬಾಳುವವರು,” ಎಂಬುದಾಗಿ ಬರೆದನು.

[6] ಆದರೆ ವಿಶ್ವಾಸದಿಂದ ಬರುವ ನೀತಿಯ ಬಗ್ಗೆ ಮೋಶೆಯು ಹೇಳುವುದೇನೆಂದರೆ: “ ‘ಕ್ರಿಸ್ತನನ್ನು ಕೆಳಗೆ ತರಲು ಪರಲೋಕಕ್ಕೆ ಯಾರು ಏರಿ ಹೋಗುವರು?’

[7] ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.”

[8] ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.” ಅದೇ ನಾವು ಸಾರುವ ವಿಶ್ವಾಸದ ವಾಕ್ಯ.

[9] ನೀನು, “ಯೇಸುವೇ ಕರ್ತ,” ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ.

[10] ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ.

[11] ಪವಿತ್ರ ವೇದದಲ್ಲಿ ಹೇಳಿರುವಂತೆ, “ಅವರ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದೇ ಇಲ್ಲ.”

[12] ಈ ವಿಷಯದಲ್ಲಿ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಕರ್ತ ಆಗಿರುವ ಒಬ್ಬರೇ ಕರ್ತ; ಅವರು ತಮ್ಮನ್ನು ಕರೆಯುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುತ್ತಾರೆ.

[13] ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”

[14] ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ?

[15] ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, “ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!” ಎಂದು ಬರೆಯಲಾಗಿದೆ.

[16] ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?” ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ.

[17] ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ.

[18] ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”

[19] ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು, “ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,” ಎಂದು ಹೇಳುತ್ತಾನೆ.

[20] ಆದರೆ ಯೆಶಾಯನು ಬಹು ಧೈರ್ಯವಾಗಿ, “ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.

[21] ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,” ಎಂದು ಹೇಳುತ್ತಾನೆ.

ರೋಮಾಪುರದವರಿಗೆ — Chapters