[1] ಆದ್ದರಿಂದ, ಪ್ರಿಯರೇ ದೇವರ ಕರುಣೆಯಿಂದ ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು.
[2] ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ.
[3] ನನಗೆ ದಯಪಾಲಿಸಿರುವ ಕೃಪೆಯಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ, ನೀವು ಭಾವಿಸುವುದಕ್ಕಿಂತ ಹೆಚ್ಚಾಗಿ ಯಾರೂ ನಿಮ್ಮನ್ನು ನೀವೇ ಉನ್ನತವಾಗಿ ಭಾವಿಸಿಕೊಳ್ಳಬೇಡಿರಿ. ಅದರ ಬದಲಾಗಿ ದೇವರು ನಿಮಗೆ ಅನುಗ್ರಹಿಸಿರುವ ವಿಶ್ವಾಸದ ಅಳತೆಗೆ ಅನುಸಾರವಾಗಿ ಸ್ವಸ್ಥಚಿತ್ತವುಳ್ಳವರಾಗಿ ಭಾವಿಸಿಕೊಳ್ಳಿರಿ.
[4] ನಮ್ಮಲ್ಲಿ ಪ್ರತಿಯೊಬ್ಬನಿಗೂ ಅನೇಕ ಅಂಗಗಳಿಂದ ಕೂಡಿದ ಒಂದು ದೇಹವಿರುವ ಹಾಗೆಯೇ ಮತ್ತು ಹೇಗೆ ಈ ಅಂಗಾಂಗಗಳಿಗೆಲ್ಲಾ ಒಂದೇ ಕೆಲಸವಿರುವುದ್ಲಿಲವೋ,
[5] ಅದೇ ರೀತಿಯಲ್ಲಿ, ಅನೇಕರಾಗಿರುವ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗುತ್ತೇವೆ ಮತ್ತು ಪ್ರತಿಯೊಬ್ಬನೂ ಒಬ್ಬರಿಗೊಬ್ಬರು ಅಂಗಗಳಾಗಿರುತ್ತೇವೆ.
[6] ನಮಗೆ ಕೊಟ್ಟಿರುವ ದೇವರ ಕೃಪೆಗೆ ಅನುಸಾರವಾಗಿ ನಮಗೆ ಬೇರೆ ಬೇರೆ ವರಗಳಿರುತ್ತವೆ. ಒಬ್ಬನಿಗೆ ಪ್ರವಾದನಾ ವರವಾಗಿದ್ದರೆ, ಅದನ್ನು ಅವನ ವಿಶ್ವಾಸದ ಅಳತೆಗೆ ತಕ್ಕ ರೀತಿಯಲ್ಲಿ ಉಪಯೋಗಿಸಲಿ.
[7] ಅದು ಇತರರಿಗೆ ಸೇವೆ ಸಲ್ಲಿಸುವುದಾಗಿದ್ದರೆ, ಅದನ್ನು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಉಪಯೋಗಿಸಲಿ. ಅದು ಬೋಧಿಸುವ ವರವಾಗಿದ್ದರೆ, ಅವನು ಬೋಧಿಸಲಿ.
[8] ಅದು ಪ್ರೋತ್ಸಾಹಗೊಳಿಸುವುದಾಗಿದ್ದರೆ, ಅವನು ಪ್ರೋತ್ಸಾಹಗೊಳಿಸಲಿ. ದಾನಕೊಡುವ ವರವಾಗಿದ್ದರೆ, ಅವನು ಧಾರಾಳವಾಗಿ ಕೊಡಲಿ. ನಾಯಕತ್ವ ವಹಿಸುವ ವರವಾಗಿದ್ದರೆ, ಅವನು ಶ್ರದ್ಧೆಯಿಂದ ಮಾಡಲಿ ದಯೆ ತೋರಿಸುವ ವರವಾಗಿದ್ದರೆ ಅದನ್ನು ಅವನು ಸಂತೋಷದಿಂದ ಮಾಡಲಿ.
[9] ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.
[10] ಒಬ್ಬರಿಗೊಬ್ಬರು ಸಹೋದರ ಪ್ರೀತಿಯಲ್ಲಿ ಸಮರ್ಪಿತರಾಗಿರಿ. ಗೌರವಿಸುವುದರಲ್ಲಿ ಒಬ್ಬರಿಗೊಬ್ಬರು ಮುಂದಾಗಿರಿ.
[11] ಉತ್ಸಾಹದಲ್ಲಿ ಆಲಸ್ಯರಾಗದೆ, ಆತ್ಮದಲ್ಲಿ ಬೆಂಕಿಯುಳ್ಳವರಾಗಿ ಕರ್ತನ ಸೇವೆಯನ್ನು ಮಾಡಿರಿ.
[12] ನಿರೀಕ್ಷೆಯಲ್ಲಿ ಸಂತೋಷವುಳ್ಳವರೂ ಸಂಕಟಗಳಲ್ಲಿ ಸಹನೆಯುಳ್ಳವರೂ ಪ್ರಾರ್ಥನೆಯಲ್ಲಿ ದೃಢಮನಸ್ಸುಳ್ಳವರೂ ಆಗಿ ಮುಂದುವರಿಯಿರಿ.
[13] ಕೊರತೆ ಇರುವ ದೇವಜನರೊಂದಿಗೆ ನಿಮಗೆ ಇರುವುದನ್ನು ಹಂಚಿಕೊಳ್ಳಿರಿ, ಅತಿಥಿ ಸತ್ಕಾರವನ್ನು ಮಾಡುತ್ತಾ ಇರಿ.
[14] ನಿಮ್ಮನ್ನು ಹಿಂಸಿಸುವರನ್ನು ಆಶೀರ್ವದಿಸಿರಿ, ಶಪಿಸಬೇಡಿರಿ.
[15] ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ.
[16] ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳವರಾಗಿರಿ. ನೀವು ಮನಸ್ಸಿನಲ್ಲಿ ಅಹಂಕಾರಿಗಳಾಗಿರದೆ, ದೀನರೊಂದಿಗೆ ಸಂತೋಷದಿಂದ ಸಹಭಾಗಿಗಳಾಗಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
[17] ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯದನ್ನು ಮಾಡಿರಿ.
[18] ಸಾಧ್ಯವಾದರೆ, ನಿಮ್ಮಿಂದ ಆದಷ್ಟು ಎಲ್ಲರೊಂದಿಗೂ ಸಮಾಧಾನದಿಂದಿರಿ.
[19] ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸದೆ, ಅದನ್ನು ದೇವರ ಕೋಪಕ್ಕೆ ಬಿಟ್ಟುಬಿಡಿರಿ. ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸೇರಿದ್ದು. ನಾನು ಅದನ್ನು ತೀರಿಸುವೆನು, ಎಂದು ಕರ್ತನು ಹೇಳುತ್ತಾರೆ,” ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ.
[20] “ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು, ಅವನು ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು.”
[21] ಕೆಟ್ಟದ್ದಕ್ಕೆ ಸೋಲಬೇಡಿರಿ, ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸಿರಿ.