[1] ವಿಶ್ವಾಸದಲ್ಲಿ ಬಲವುಳ್ಳವರಾದ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ, ಬಲಹೀನರ ಬಲಹೀನತೆಗಳನ್ನು ಸಹಿಸಿಕೊಳ್ಳಬೇಕು.
[2] ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಭಕ್ತಿವೃದ್ಧಿಯ ಹಿತಕ್ಕಾಗಿ ಅವರನ್ನು ಸುಖವನ್ನು ನೋಡಿಕೊಳ್ಳಲಿ.
[3] “ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಂದವು,” ಎಂದು ಬರೆದಿರುವಂತೆ ಕ್ರಿಸ್ತನು ಸಹ ತಮ್ಮ ಸುಖಕ್ಕಾಗಿ ಬಾಳಲಿಲ್ಲ.
[4] ಪವಿತ್ರ ವೇದದಲ್ಲಿ ಮುಂಚಿತವಾಗಿ ಬರೆದಿರುವುದೆಲ್ಲವೂ ನಮ್ಮ ಬೋಧನೆಗಾಗಿಯೇ ಬರೆಯಲಾಗಿದೆ. ನಾವು ಆ ಬೋಧನೆಗಳ ಮೂಲಕ ಸಹನೆಯನ್ನೂ ಉತ್ತೇಜನೆಯನ್ನೂ ಹೊಂದಿಕೊಂಡು ನಿರೀಕ್ಷೆಯುಳ್ಳವರಾಗಿರಬೇಕೆಂದು ಬರೆಯಲಾಗಿದೆ.
[5] ಸಹನೆಯನ್ನೂ ಉತ್ತೇಜನವನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವಂತೆ ನಿಮಗೆ ಒಂದೇ ಆತ್ಮವನ್ನು ಕೊಡಲಿ.
[6] ಹೀಗೆ ನೀವು ಒಂದೇ ಮನಸ್ಸುಳ್ಳವರಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರನ್ನು ಒಂದೇ ಬಾಯಿಂದ ಮಹಿಮೆ ಪಡಿಸುವಿರಿ.
[7] ದೇವರಿಗೆ ಮಹಿಮೆಯಾಗುವುದಕ್ಕಾಗಿ ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿರಿ.
[8] ನಾನು ನಿಮಗೆ ಹೇಳುವುದೇನೆಂದರೆ, ದೇವರು ನಂಬಿಗಸ್ತರು ಎಂದು ತೋರಿಸುವುದಕ್ಕಾಗಿ ಕ್ರಿಸ್ತ ಯೇಸು ಯೆಹೂದ್ಯರಿಗೆ ಸೇವಕರಾಗಿ ಬಂದರು. ಹೀಗೆ ದೇವರು ಪಿತೃಗಳಿಗೆ ಕೊಟ್ಟ ವಾಗ್ದಾನಗಳನ್ನು ದೃಢಪಡಿಸಿದರು.
[9] ಇದಲ್ಲದೆ ಯೆಹೂದ್ಯರಲ್ಲದವರು ದೇವರ ಕರುಣೆಗಾಗಿ ದೇವರನ್ನು ಮಹಿಮೆ ಪಡಿಸುವಂತೆ ಹೀಗೆ ಮಾಡಿದರು. ಇದು ಪವಿತ್ರ ವೇದದಲ್ಲಿ ಹೀಗೆ ಬರೆದದ್ದನ್ನು ನೆರವೇರಿಸಿತು: “ಆದ್ದರಿಂದ ಯೆಹೂದ್ಯರಲ್ಲದವರ ನಡುವೆ ನಾನು ನಿನ್ನನ್ನು ಸ್ತುತಿಸುವೆನು, ನಾನು ನಿನ್ನ ನಾಮವನ್ನು ಸ್ತುತಿಸಿ ಹಾಡುವೆನು.”
[10] ಮತ್ತೊಂದು ಕಡೆಯಲ್ಲಿ ಹೀಗೆ ಬರೆಯಲಾಗಿದೆ: “ಯೆಹೂದ್ಯರಲ್ಲದವರೇ ದೇವಜನರೊಂದಿಗೆ ಸೇರಿ ಸಂತೋಷಪಡಿರಿ.”
[11] ಇನ್ನೊಂದು ಕಡೆಯಲ್ಲಿ, “ಯೆಹೂದ್ಯರಲ್ಲದವರೇ ಕರ್ತನನ್ನು ಸ್ತುತಿಸಿರಿ. ಸಮಸ್ತ ಜನರೇ ಕರ್ತನಿಗೆ ಸ್ತೋತ್ರಮಾಡಿರಿ.”
[12] ಪುನಃ ಪ್ರವಾದಿ ಯೆಶಾಯನು ಹೇಳುವುದೇನೆಂದರೆ: “ಇಷಯನ ವಂಶದಿಂದ ಬೇರು ಒಂದು ಚಿಗುರುವುದು, ಜನಾಂಗಗಳನ್ನು ಆಳುವವರಾಗಿ ಅವರು ಉದಯಿಸುವರು. ಯೆಹೂದ್ಯರಲ್ಲದವರು ಆತನಲ್ಲಿ ನಿರೀಕ್ಷೆ ಇಡುವರು.”
[13] ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.
[14] ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ.
[15] ನಾನು ನಿಮಗೆ ಕೆಲವು ವಿಷಯಗಳನ್ನು ಜ್ಞಾಪಕ ಪಡಿಸುವುದಕ್ಕಾಗಿ ಬಹಳ ಧೈರ್ಯದಿಂದ ಹೀಗೆ ಬರೆದಿದ್ದೇನೆ.
[16] ಯೆಹೂದ್ಯರಲ್ಲದವರು ಪವಿತ್ರಾತ್ಮನಿಂದ ಪರಿಶುದ್ಧರಾಗಿ, ದೇವರಿಗೆ ಅಂಗೀಕೃತವಾದ ಕಾಣಿಕೆಗಳಾಗಬೇಕೆಂಬ ಕಾರಣದಿಂದ, ನಾನು ಯೆಹೂದ್ಯರಲ್ಲದವರಿಗೆ ಕ್ರಿಸ್ತ ಯೇಸುವಿನ ಸೇವಕನಾಗಿ ದೇವರ ಸುವಾರ್ತೆಯನ್ನು ಪ್ರಕಟಿಸಲು ದೇವರು ನನಗೆ ಕೃಪೆ ನೀಡಿದ್ದಾರೆ.
[17] ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ದೇವರ ಸೇವೆಯ ವಿಷಯವಾಗಿ ಹೊಗಳಿಕೊಳ್ಳುತ್ತೇನೆ.
[18] ಯೆಹೂದ್ಯರಲ್ಲದವರನ್ನು ದೇವರಿಗೆ ವಿಧೇಯರಾಗುವುದಕ್ಕಾಗಿ ಕ್ರಿಸ್ತನು ನನ್ನ ಮೂಲಕ ಮಾತಿನಿಂದಲೂ ಕೃತ್ಯದಿಂದಲೂ
[19] ಬಲವಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಪವಿತ್ರಾತ್ಮ ಶಕ್ತಿಯಿಂದಲೂ ಮಾಡಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. ಯೆರೂಸಲೇಮಿನಿಂದ ಪ್ರಾರಂಭಿಸಿ, ಇಲ್ಲುರಿಕದವರೆಗೆ ನಾನು ಕ್ರಿಸ್ತನ ಸುವಾರ್ತೆಯನ್ನು ಸಂಪೂರ್ಣವಾಗಿ ಸಾರಿದ್ದೇನೆ.
[20] ಬೇರೊಬ್ಬರು ಹಾಕಿರುವ ಅಸ್ತಿವಾರದ ಮೇಲೆ ನಾನು ಕಟ್ಟಬಾರದೆಂದು, ಕ್ರಿಸ್ತನ ಹೆಸರು ತಿಳಿಯಪಡಿಸದೆ ಇರುವಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಆತುರದಿಂದ ಹೋರಾಡುತ್ತಿದ್ದೇನೆ.
[21] ಪವಿತ್ರ ವೇದದಲ್ಲಿ ಬರೆದಿರುವಂತೆ : “ಯಾರಿಗೆ ಆತನ ಸುದ್ದಿ ಮುಟ್ಟಲಿಲ್ಲವೋ ಅವರು ಆತನನ್ನು ಕಾಣುವರು; ಯಾರು ಆತನ ವರ್ತಮಾನ ಕೇಳಲಿಲ್ಲವೋ ಅವರು ಗ್ರಹಿಸಿಕೊಳ್ಳುವರು.”
[22] ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಬಾರಿ ಅಭ್ಯಂತರವಾಯಿತು.
[23] ಈಗಲಾದರೋ ಈ ಪ್ರದೇಶದಲ್ಲಿ ನನಗೆ ಅವಕಾಶವಿಲ್ಲದಿರುವುದರಿಂದಲೂ ಅನೇಕ ವರ್ಷಗಳಿಂದ ನಿಮ್ಮನ್ನು ಸಂದರ್ಶಿಸಬೇಕೆಂಬ ಹಂಬಲವಿರುವುದರಿಂದಲೂ
[24] ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನಿಮ್ಮನ್ನು ಸಂದರ್ಶಿಸುವ ನಿರೀಕ್ಷೆಯಲ್ಲಿದ್ದೇನೆ. ಸ್ವಲ್ಪಕಾಲ ನಿಮ್ಮ ಅನ್ಯೋನ್ಯತೆಯ ಆನಂದವನ್ನು ಪಡೆದ ಬಳಿಕ ಅಲ್ಲಿಗೆ ಹೋಗುವ ನನ್ನ ಪ್ರಯಾಣದಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತೇನೆ.
[25] ಈಗಲಾದರೋ ನಾನು ದೇವಜನರ ಸೇವೆಗಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ.
[26] ಮಕೆದೋನ್ಯ ಮತ್ತು ಅಖಾಯದವರು ಯೆರೂಸಲೇಮಿನ ಭಕ್ತರಲ್ಲಿರುವ ಬಡವರಾಗಿರುವವರಿಗೆ ಸಹಾಯ ಮಾಡುವುದು ಒಳ್ಳೆಯದೆಂದು ಭಾವಿಸಿದ್ದಾರೆ.
[27] ಅವರು ಅದನ್ನು ಮಾಡಲು ಇಷ್ಟಪಟ್ಟದ್ದಲ್ಲದೆ, ಅದು ಕರ್ತವ್ಯವೂ ಆಗಿದೆ. ಹೌದು, ಯೆಹೂದ್ಯರಲ್ಲದವರು ಯೆಹೂದ್ಯರ ಆತ್ಮಿಕ ಆಶೀರ್ವಾದಗಳಲ್ಲಿ ಪಾಲುಗೊಂಡಿರುವುದಾದರೆ ತಮ್ಮ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯವಾಗಿದೆ.
[28] ಆದ್ದರಿಂದ ಈ ಕೆಲಸವನ್ನು ಪೂರೈಸಿ ಸಂಗ್ರಹಿಸಿ ಕೊಟ್ಟದ್ದನ್ನು ಅವರಿಗೆ ಒಪ್ಪಿಸಿ ಖಚಿತವಾದ ಬಳಿಕ, ನಾನು ಸ್ಪೇನ್ ದೇಶಕ್ಕೆ ಹೋಗುವ ದಾರಿಯಲ್ಲಿ ನಿಮ್ಮನ್ನು ಸಂದರ್ಶಿಸುತ್ತೇನೆ.
[29] ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದದಿಂದ ತುಂಬಿದವನಾಗಿ ಬರುತ್ತೇನೆಂದು ಬಲ್ಲೆನು.
[30] ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ.
[31] ನಾನು ಯೂದಾಯ ಪ್ರಾಂತದಲ್ಲಿ ಅವಿಶ್ವಾಸಿಗಳ ಕೈಯಿಂದ ಕಾಪಾಡಬೇಕೆಂತಲೂ ನನ್ನ ಸೇವೆಯು ಯೆರೂಸಲೇಮಿನಲ್ಲಿರುವ ದೇವಜನರಿಗೆ ಮೆಚ್ಚುಗೆಯಾಗಿರಬೇಕೆಂತಲೂ ಪ್ರಾರ್ಥಿಸಿರಿ.
[32] ಆಗ ನಾನು ದೇವರ ಚಿತ್ತಾನುಸಾರ ನಿಮ್ಮ ಬಳಿಗೆ ಸಂತೋಷದಿಂದ ಬಂದು, ನಿಮ್ಮ ಸಂಗಡ ವಿಶ್ರಾಂತಿ ಹೊಂದುವೆನು.
[33] ಸಮಾಧಾನದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.