Skip to content
Opens in a new window
Listen to this chapter • 4:38

[1] ಹಾಗಾದರೆ ನಾವು ಏನು ಹೇಳೋಣ? ಕೃಪೆಯು ಹೆಚ್ಚಾಗಲಿ ಎಂದು ನಾವು ಪಾಪದಲ್ಲಿ ಮುಂದುವರಿಯೋಣವೆ?

[2] ಎಂದಿಗೂ ಹಾಗಾಗದಿರಲಿ! ನಾವು ಪಾಪದ ಪಾಲಿಗೆ ಸತ್ತೆವು, ನಾವು ಇನ್ನೂ ಪಾಪದಲ್ಲಿ ಜೀವಿಸುವುದು ಹೇಗೆ?

[3] ಅಥವಾ ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ನಾವು ಅವರ ಮರಣದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುತ್ತೇವೆಂಬುದು ನಿಮಗೆ ತಿಳಿಯದೋ?

[4] ಹೀಗಿರುವಲ್ಲಿ ಯೇಸುವಿರೊಂದಿಗೆ ದೀಕ್ಷಾಸ್ನಾನದ ಮೂಲಕ ಅವರ ಮರಣದಲ್ಲಿ ಹೂಣಲಾದೆವು. ಆದ್ದರಿಂದ ತಂದೆಯ ಮಹಿಮೆಯ ಮೂಲಕ ಕ್ರಿಸ್ತ ಯೇಸು ಸತ್ತವರೊಳಗಿಂದ ಎಬ್ಬಿಸಲಾದಂತೆಯೇ ನಾವು ಹೊಸ ಜೀವವನ್ನು ಜೀವಿಸಬೇಕು.

[5] ನಾವು ಕ್ರಿಸ್ತ ಯೇಸುವಿನೊಂದಿಗೆ ಸೇರಿ ಅವರ ಮರಣದಲ್ಲಿ ಪಾಲುಗಾರರಾದರೆ, ಅವರ ಪುನರುತ್ಥಾನದಲ್ಲಿಯೂ ಪಾಲುಗಾರರಾಗುವೆವು.

[6] ನಮ್ಮ ಪಾಪದ ಶರೀರವು ನಾಶವಾಗಿ ನಾವು ಇನ್ನು ಮುಂದೆ ಎಂದಿಗೂ ಪಾಪಕ್ಕೆ ಗುಲಾಮರಾಗದಂತೆ, ನಮ್ಮ ಹಳೆಯ ಮನುಷ್ಯ ಸ್ವಭಾವ ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಯಿತು ಎಂದು ನಾವು ಬಲ್ಲೆವು.

[7] ಮರಣ ಹೊಂದಿರುವ ಯಾರೇ ಆದರೂ ಪಾಪದಿಂದ ಮುಕ್ತರಾಗಿರುತ್ತಾರೆ.

[8] ನಾವು ಈಗ ಕ್ರಿಸ್ತ ಯೇಸುವಿನೊಂದಿಗೆ ಸತ್ತಿರುವುದಾದರೆ, ಅವರೊಂದಿಗೆ ಬದುಕುವೆವು ಎಂದು ನಂಬುತ್ತೇವೆ.

[9] ಕ್ರಿಸ್ತ ಯೇಸು ಮರಣದಿಂದ ಜೀವಿತರಾಗಿ ಎದ್ದು ಬಂದದ್ದರಿಂದ ಅವರು ಪುನಃ ಸಾಯಲಾರರೆಂದು ಬಲ್ಲೆವು. ಇನ್ನು ಮುಂದೆ ಅವರ ಮೇಲೆ ಮರಣಕ್ಕೆ ಅಧಿಕಾರವಿಲ್ಲ.

[10] ಕ್ರಿಸ್ತ ಯೇಸು ಪಾಪದ ಪಾಲಿಗೆ ಸತ್ತದ್ದೂ ಒಂದೇ ಸಾರಿಯಾಗಿರುತ್ತದೆ. ಆದರೆ, ಅವರು ಜೀವಿಸುವ ಜೀವಿತವು ದೇವರಿಗಾಗಿಯೇ.

[11] ಅದೇ ರೀತಿಯಲ್ಲಿ, ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ಕ್ರಿಸ್ತ ಯೇಸುವಿನಲ್ಲಿ ದೇವರಿಗಾಗಿ ಜೀವಿಸುವವರೆಂದೂ ಎಣಿಸಿಕೊಳ್ಳಿರಿ.

[12] ಆದ್ದರಿಂದ ನೀವು ದೇಹದ ಆಶೆಗಳಿಗೆ ಒಳಗಾಗದಂತೆ ನಿಮ್ಮ ನಶ್ವರ ದೇಹಗಳಲ್ಲಿ ಪಾಪವು ಅಧಿಕಾರ ನಡೆಸಲು ಬಿಡಬೇಡಿರಿ.

[13] ನಿಮ್ಮ ದೇಹದ ಅವಯವಗಳನ್ನು ಅನೀತಿಯನ್ನು ನಡೆಸುವ ಸಾಧನಗಳಾಗುವಂತೆ ಪಾಪಕ್ಕೆ ಒಪ್ಪಿಸಬೇಡಿರಿ. ಆದರೆ ಅದರ ಬದಲಾಗಿ ಮರಣದಿಂದ ಜೀವಕ್ಕೆ ಬಂದವರಂತೆ ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಿರಿ. ನಿಮ್ಮ ದೇಹದ ಅವಯವಗಳನ್ನು ನೀತಿಯ ಸಾಧನಗಳಾಗಿರುವುದಕ್ಕಾಗಿ ದೇವರಿಗೆ ಸಮರ್ಪಿಸಿರಿ.

[14] ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ಏಕೆಂದರೆ ನೀವು ನಿಯಮಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.

[15] ಹಾಗಾದರೆ ಏನು? ನಾವು ನಿಯಮಕ್ಕೆ ಅಧೀನರಾಗಿರದೆ ಕೃಪೆಗೆ ಅಧೀನರಾಗಿರುತ್ತೇವೆಂದು ಪಾಪ ಮಾಡಬಹುದೋ? ಎಂದಿಗೂ ಇಲ್ಲ!

[16] ನೀವು ಯಾರಾದರೊಬ್ಬರಿಗೆ ವಿಧೇಯರಾಗಿರುವುದಕ್ಕಾಗಿ ಗುಲಾಮರಾಗಿ ನಿಮ್ಮನ್ನು ಒಪ್ಪಿಸಿಕೊಟ್ಟಾಗ, ನೀವು ಅವನಿಗೆ ವಿಧೇಯರಾದ ಗುಲಾಮರಾಗುತ್ತೀರಿ ಎಂಬುದು ನಿಮಗೆ ತಿಳಿಯದೋ? ಮರಣಕ್ಕೆ ನಡೆಸುವ ಪಾಪಕ್ಕೆ ನೀವು ಗುಲಾಮರಾಗಿರಬಹುದು ಇಲ್ಲವೆ ನೀತಿಗೆ ನಡೆಸುವ ವಿಧೇಯತೆಗೆ ಒಳಪಟ್ಟಿರಬಹುದು.

[17] ಆದರೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಒಪ್ಪಿಸಿದ ಬೋಧನೆಗೆ ಹೃದಯದಿಂದ ವಿಧೇಯರಾದುದ್ದಕ್ಕಾಗಿ, ದೇವರಿಗೆ ಸ್ತೋತ್ರವಾಗಲಿ.

[18] ಪಾಪದಿಂದ ಬಿಡುಗಡೆಹೊಂದಿ ನೀತಿಗೆ ಗುಲಾಮರಾಗಿದ್ದೀರಿ.

[19] ನೀವು ಶರೀರಭಾವದಲ್ಲಿ ಬಲಹೀನರಾಗಿರುವುದರಿಂದ ನಾನು ಮಾನವ ಮಾತುಗಳಲ್ಲಿ ಇದನ್ನು ಹೇಳುತ್ತಿದ್ದೇನೆ. ನಿಮ್ಮ ದೇಹದ ಅವಯವಗಳನ್ನು ಅಶುದ್ಧತೆಗೂ ಅಧರ್ಮಕ್ಕೂ ದಾಸತ್ವದಲ್ಲಿ ಒಪ್ಪಿಸಿ ಕೊಡುತ್ತಿದ್ದಂತೆಯೇ ನೀವು ಈಗ ಅವುಗಳನ್ನು ಪರಿಶುದ್ಧತೆಗೆ ನಡೆಸುವ ನೀತಿಗೆ ಗುಲಾಮರಾಗಿ ಒಪ್ಪಿಸಿರಿ.

[20] ನೀವು ಪಾಪಕ್ಕೆ ಗುಲಾಮರಾಗಿದ್ದಾಗ ನೀತಿಗೆ ಅಧೀನರಾಗಿರಲಿಲ್ಲ.

[21] ಆದ್ದರಿಂದ ಈಗ ನೀವು ನಾಚಿಕೆ ಪಟ್ಟುಕೊಳ್ಳುತ್ತಿರುವ ಸಂಗತಿಗಳಿಂದ ನಿಮಗಾದ ಲಾಭವೇನು? ಅವು ಮರಣದಲ್ಲಿ ಸಮಾಪ್ತವಾಗುತ್ತವೆ!

[22] ಆದರೆ ಈಗ ನೀವು ಪಾಪದಿಂದ ಬಿಡುಗಡೆ ಹೊಂದಿದವರಾಗಿ ದೇವರಿಗೆ ಗುಲಾಮರಾಗಿರುವುದರಿಂದ, ಪವಿತ್ರವಾಗಿರುವುದೇ ನಿಮಗೆ ದೊರಕುವ ಫಲವು. ಕಡೆಗೆ ದೊರೆಯುವಂಥದು ನಿತ್ಯಜೀವವಾಗಿರುತ್ತದೆ.

[23] ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ.

ರೋಮಾಪುರದವರಿಗೆ — Chapters