Skip to content
Opens in a new window
Listen to this chapter • 4:29

[1] ಅಂಥವನ ಅಭಿಪ್ರಾಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ. ವಿಶ್ವಾಸದಲ್ಲಿ ಬಲಹೀನನಾಗಿರುವವನನ್ನು ಸ್ವೀಕರಿಸಿಕೊಳ್ಳಿರಿ.

[2] ಒಬ್ಬನ ವಿಶ್ವಾಸವು ಎಲ್ಲವನ್ನೂ ತಿನ್ನುವಂತೆ ಮಾಡುತ್ತದೆ. ಆದರೆ ವಿಶ್ವಾಸದಲ್ಲಿ ಬಲಹೀನನಾಗಿರುವವನು ಸಸ್ಯಾಹಾರಿಯಾಗಿಯೇ ಇರುತ್ತಾನೆ.

[3] ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸದಿರಲಿ. ಸಸ್ಯಾಹಾರಿಯು ಮಾಂಸಾಹಾರಿಯನ್ನು ತೀರ್ಪು ಮಾಡದಿರಲಿ. ಏಕೆಂದರೆ ದೇವರು ಇಬ್ಬರನ್ನು ಸ್ವೀಕಾರ ಮಾಡಿರುತ್ತಾರೆ.

[4] ಬೇರೊಬ್ಬನ ಮನೆಗೆಲಸದವನನ್ನು ತೀರ್ಪುಮಾಡಲು ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೆ ಸೇರಿದ್ದು. ಅವನನ್ನು ನಿಲ್ಲುವಂತೆ ಮಾಡಲು ಕರ್ತನು ಶಕ್ತನಾಗಿರುವುದರಿಂದ ಅವನು ಎದ್ದು ನಿಲ್ಲುವನು.

[5] ಕೆಲವರು ಒಂದು ದಿನವನ್ನು ಮತ್ತೊಂದು ದಿನಕ್ಕಿಂತ ವಿಶೇಷವೆಂದು ಎಣಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಂತೆ ನಡೆಯಲಿ.

[6] ಒಬ್ಬ ಒಂದು ದಿನವನ್ನು ವಿಶೇಷವೆಂದು ಎಣಿಸುವುದಾದರೆ ಅವನು ಅದನ್ನು ಕರ್ತನಿಗಾಗಿಯೇ ಮಾಡಲಿ. ಮಾಂಸಾಹಾರಿಯು ದೇವರಿಗೆ ಕೃತಜ್ಞತೆಯನ್ನು ಮಾಡಿ ಊಟಮಾಡುವುದಾದರೆ ಅವನು ಅದನ್ನು ಮಾಡುವುದು ಕರ್ತನಿಗಾಗಿಯೇ. ಸಸ್ಯಾಹಾರಿಯು ಕರ್ತನಿಗಾಗಿಯೇ ತಿನ್ನದೆ ಕೃತಜ್ಞತೆ ಸಲ್ಲಿಸುತ್ತಾನೆ.

[7] ನಮ್ಮಲ್ಲಿ ಯಾರೂ ತಮಗಾಗಿ ಜೀವಿಸದಿರಲಿ, ತಮಗಾಗಿ ಮರಣಿಸುವುದು ಬೇಡ.

[8] ಬದುಕಿದರೆ ನಾವು ಕರ್ತನಿಗಾಗಿ ಬದುಕುತ್ತೇವೆ, ಸತ್ತರೆ ಕರ್ತನಿಗಾಗಿ ಸಾಯುತ್ತೇವೆ. ಹೀಗೆ ನಾವು ಬದುಕಿದರೂ ಸತ್ತರೂ ಕರ್ತನಿಗೆ ಸೇರಿದವರಾಗಿರುತ್ತೇವೆ.

[9] ಈ ಕಾರಣಕ್ಕಾಗಿಯೇ, ಜೀವಿಸುವವರಿಗೂ ಸತ್ತವರಿಗೂ ಕರ್ತನಾಗಿರಬೇಕೆಂದು ಕ್ರಿಸ್ತನು ಮರಣಹೊಂದಿ ಪುನರುತ್ಥಾನಗೊಂಡರು.

[10] ಹೀಗಿರುವಾಗ, ನೀನು ಏಕೆ ನಿನ್ನ ಸಹೋದರರಿಗೆ ತೀರ್ಪುಮಾಡುತ್ತೀ? ಅಥವಾ ನಿನ್ನ ಸಹೋದರರನ್ನು ಏಕೆ ಹೀನಾಯವಾಗಿ ಕಾಣುತ್ತೀ? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲುವೆವು.

[11] ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ನಾನು ಜೀವಿಸುವುದರಿಂದ, ಪ್ರತಿಯೊಬ್ಬರೂ ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಅರಿಕೆ ಮಾಡುವುದು,’ ಎಂದು ಕರ್ತನು ಹೇಳುತ್ತಾರೆ.”

[12] ಹೀಗಿರುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.

[13] ಆದ್ದರಿಂದ ನಾವು ಒಬ್ಬರ ಮೇಲೊಬ್ಬರು ತೀರ್ಪುಮಾಡದಿರೋಣ. ಇದಲ್ಲದೆ ಸಹೋದರರಿಗೆ ಅಡೆತಡೆಯನ್ನಾಗಲಿ, ಅಡ್ಡಿಯನ್ನಾಗಲಿ, ಹಾಕದಿರೋಣ.

[14] ಯಾವುದೇ ಪದಾರ್ಥವು ತನ್ನಷ್ಟಕ್ಕೆ ಅಶುದ್ಧವಲ್ಲ ಎಂದು ನಾನು ಕರ್ತ ಆಗಿರುವ ಯೇಸುವಿನಲ್ಲಿ ನಿಶ್ಚಯವಾಗಿ ಬಲ್ಲೆನು. ಆದರೆ ಯಾರಾದರೂ ಅಶುದ್ಧವೆಂದು ಪರಿಗಣಿಸಿದರೆ ಅದು ಅವರಿಗೆ ಅಶುದ್ಧವಾಗಿರುವುದು.

[15] ನೀವು ಆಹಾರದಿಂದ ನಿಮ್ಮ ಸಹೋದರರನ್ನು ದುಃಖ ಪಡಿಸುವುದಾದರೆ ನೀವು ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ. ನೀವು ತಿನ್ನುವುದರ ಮೂಲಕ ಕ್ರಿಸ್ತನು ಯಾವನಿಗೋಸ್ಕರವಾಗಿ ಸತ್ತರೋ ಅಂಥವರನ್ನು ನಾಶಮಾಡಬೇಡಿರಿ.

[16] ನಿಮಗಿರುವ ಒಳ್ಳೆಯದು ಪರರ ದೂಷಣೆಗೆ ಗುರಿಯಾಗದಿರಲಿ.

[17] ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ. ನೀತಿ, ಸಮಾಧಾನ, ಪವಿತ್ರಾತ್ಮರಲ್ಲಿರುವ ಆನಂದವೂ ಆಗಿದೆ.

[18] ಈ ರೀತಿಯಲ್ಲಿ ಕ್ರಿಸ್ತನಿಗೆ ಸೇವೆಮಾಡುವವರು ದೇವರಿಗೆ ಮೆಚ್ಚುಗೆಯಾದವರೂ ಜನರಿಂದ ಅನುಮೋದನೆ ಹೊಂದಿದವರೂ ಆಗಿರುತ್ತಾರೆ.

[19] ಆದ್ದರಿಂದ ಯಾವುದು ನಮ್ಮನ್ನು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ನಡೆಸುತ್ತದೋ ಅದನ್ನೇ ಮಾಡೋಣ.

[20] ಆಹಾರದ ನಿಮಿತ್ತವಾಗಿ ದೇವರ ಕೆಲಸವನ್ನು ಕೆಡಿಸಬೇಡ, ಎಲ್ಲಾ ಆಹಾರವೂ ಶುದ್ಧವಾದದ್ದೇ. ಆದರೆ ಒಬ್ಬರು ತಿಂದು ವಿಘ್ನವನ್ನು ಒಡ್ಡುವುದು ಕೆಟ್ಟದ್ದು.

[21] ಮಾಂಸ ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ ಅಥವಾ ಬೇರೆ ಏನನ್ನೇ ಆಗಲಿ, ಅದು ನಿಮ್ಮ ಸಹೋದರರನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದೆ ಇರುವುದೇ ಒಳ್ಳೆಯದು.

[22] ಈ ವಿಷಯದಲ್ಲಿ ನಿಮಗಿರುವ ವೈಯಕ್ತಿಕ ದೃಢವಿಶ್ವಾಸವನ್ನು ನೀವು ದೇವರ ಮುಂದೆ ಇಟ್ಟುಕೊಂಡಿರು. ತಾವು ಅನುಮೋದಿಸಿ ಮಾಡಿದ ಕಾರ್ಯಗಳ ಬಗ್ಗೆ ತಮಗೆ ದಂಡನಾತೀರ್ಪು ಮಾಡಿಕೊಳ್ಳದವರು ಧನ್ಯರು.

[23] ಆದರೆ ಅನುಮಾನವುಳ್ಳವರು ಊಟಮಾಡುವುದು ವಿಶ್ವಾಸದಿಂದ ಅಲ್ಲವಾದ್ದರಿಂದ ಅವರು ದೋಷಿಯಾಗುತ್ತಾರೆ. ವಿಶ್ವಾಸವಿಲ್ಲದೆ ಮಾಡುವ ಎಲ್ಲವೂ ಪಾಪವಾಗಿವೆ.

ರೋಮಾಪುರದವರಿಗೆ — Chapters