[1] ಯೊರ್ದನ್ ನದಿಯ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದುರಾದ ಮೆಡಿಟೆರಿಯನ್ ಸಮುದ್ರದ ಸಮಸ್ತ ಪ್ರಾಂತಗಳಲ್ಲಿಯೂ ಇರುವ ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಅರಸರು ಇದನ್ನು ಕೇಳಿದರು.
[2] ಆಗ ಅವರು ಯೆಹೋಶುವನಿಗೂ ಇಸ್ರಾಯೇಲರಿಗೂ ವಿರುದ್ಧ ಯುದ್ಧಮಾಡುವುದಕ್ಕೆ ಒಟ್ಟಾಗಿ ಕೂಡಿಕೊಂಡರು.
[3] ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ,
[4] ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ, ಅವರು ರಾಯಭಾರಿಗಳ ಹಾಗೆ ತೋರಿಸುವಂತೆ ಹಳೆಯ ಗೋಣಿ ಚೀಲಗಳನ್ನೂ ತೇಪೆ ಹಾಕಿದ ಹಳೆಯದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು, ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ಹೋದರು.
[5] ತೇಪೆ ಹಾಕಿದ ಹಳೆಯದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಯನ್ನೂ ತೆಗೆದುಕೊಂಡರು.
[6] ಅನಂತರ ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಸೇರಿ ಯೆಹೋಶುವನ ಬಳಿಗೆ ಬಂದರು. ಅವರು ಅವನಿಗೂ ಇಸ್ರಾಯೇಲರಿಗೂ, “ನಾವು ದೂರದೇಶದಿಂದ ಬಂದೆವು. ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ,” ಎಂದರು.
[7] ಆಗ ಇಸ್ರಾಯೇಲರು ಹಿವ್ವಿಯರಾದ ಅವರಿಗೆ, “ನೀವು ಒಂದು ವೇಳೆ ನಮ್ಮ ಹತ್ತಿರದಲ್ಲಿ ವಾಸಿಸುವವರು ಆಗಿರಬಹುದು. ನಾವು ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವುದು ಹೇಗೆ?” ಎಂದರು.
[8] ಅದಕ್ಕವರು ಯೆಹೋಶುವನಿಗೆ, “ನಾವು ನಿನ್ನ ಸೇವಕರು,” ಎಂದರು. ಆಗ ಯೆಹೋಶುವನು ಅವರಿಗೆ, “ನೀವು ಯಾರು? ಎಲ್ಲಿಂದ ಬಂದಿರಿ?” ಎಂದನು.
[9] ಅವರು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರ ಹೆಸರಿನ ಮಹತ್ವ ಕೇಳಿ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದಿದ್ದೇವೆ. ಏಕೆಂದರೆ ದೇವರ ಕೀರ್ತಿಯನ್ನೂ, ಅವರು ಈಜಿಪ್ಟಿನಲ್ಲಿ ಮಾಡಿದ ಎಲ್ಲವನ್ನೂ ಕೇಳಿದ್ದೇವೆ.
[10] ಯೊರ್ದನ್ ನದಿಗೆ ಆಚೆ ಇರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ, ಅಷ್ಟಾರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದ್ದೇವೆ.
[11] ನಮ್ಮ ಹಿರಿಯರೂ, ನಮ್ಮ ದೇಶವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇನೆಂದರೆ, ‘ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದುಕೊಂಡು ಅವರೆದುರಿಗೆ ಹೋಗಿ, ಅವರಿಗೆ ನಾವು ನಿಮ್ಮ ಸೇವಕರು ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ ಎಂದು ಹೇಳಿರಿ,’ ಎಂದರು.
[12] ಆದರೆ ನಿಮ್ಮ ಬಳಿಗೆ ಬರುವುದಕ್ಕೆ ನಾವು ಹೊರಟ ದಿನದಲ್ಲಿ ನಮ್ಮ ಮಾರ್ಗ ಪ್ರಯಾಣಕ್ಕೆ ನಮ್ಮ ಮನೆಯೊಳಗೆ ನಮ್ಮ ಒಲೆಯ ಮೇಲೆ ಬಿಸಿ ರೊಟ್ಟಿಗಳನ್ನು ತೆಗೆದುಕೊಂಡೆವು.
[13] ಈಗ ಅವು ಒಣಗಿ ಬೂಷ್ಟು ಹಿಡಿದವುಗಳಗಿವೆ. ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸದಾಗಿದ್ದವು. ಇಗೋ, ಈಗ ಅವು ಹರಿದು ಹೋಗಿವೆ. ಇದಲ್ಲದೆ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಪ್ರಯಾಣ ಬಹಳ ದೂರವಾದ್ದರಿಂದ ಹಳೆಯದಾಗಿವೆ,” ಎಂದರು.
[14] ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ.
[15] ಯೆಹೋಶುವನು ಅವರ ಸಂಗಡ ಸಮಾಧಾನದ ಒಡಂಬಡಿಕೆ ಮಾಡಿಕೊಂಡನು. ಅವರನ್ನು ಜೀವದಿಂದ ಉಳಿಸುವುದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಅವರಿಗೆ ಪ್ರಮಾಣ ಮಾಡಿದರು.
[16] ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ, ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ, ತಮ್ಮಲ್ಲಿ ಇರುವವರೆಂದೂ ತಿಳಿದುಬಂತು.
[17] ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.
[18] ಆದರೆ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದ್ದರಿಂದ ಇಸ್ರಾಯೇಲರು ಅವರ ಮೇಲೆ ದಾಳಿಮಾಡಲಿಲ್ಲ. ಆದರೆ ಇಸ್ರಾಯೇಲರೆಲ್ಲರೂ ಪ್ರಧಾನರಿಗೆ ವಿರೋಧವಾಗಿ ಗೊಣಗುಟ್ಟಿದರು.
[19] ಆಗ ಸಕಲ ಪ್ರಧಾನರು ಎಲ್ಲಾ ಜನರಿಗೆ, “ನಾವು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಅವರಿಗೆ ಪ್ರಮಾಣ ಮಾಡಿದ್ದೇವು. ಆದ್ದರಿಂದ ಅವರನ್ನು ನಾವು ಮುಟ್ಟಕೂಡದು.
[20] ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಉಳಿಸಬೇಕು. ಆದರೆ ನಾವು ಅವರಿಗೆ ಹೀಗೆ ಮಾಡೋಣ.
[21] ಅದು ಏನೆಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರು ಜೀವದಿಂದ ಇರಲಿ. ಆದರೆ ಅವರು ಇಸ್ರಾಯೇಲಿನ ಎಲ್ಲಾ ಸಮೂಹಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಪ್ರಧಾನರ ಮಾತಿನಂತೆಯೇ ಆಯಿತು.
[22] ತರುವಾಯ ಯೆಹೋಶುವನು ಗಿಬ್ಯೋನ್ಯರನ್ನು ಕರೆಯಿಸಿ ಅವರಿಗೆ, “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ, ‘ನಾವು ನಿಮಗೆ ಬಹಳ ದೂರವಾಗಿರುವವರು,’ ಎಂದು ಹೇಳಿ ನಮ್ಮನ್ನು ಮೋಸಗೊಳಿಸಿದ್ದೇಕೆ?
[23] ಈಗ ನೀವು ಶಾಪಗ್ರಸ್ತರು, ನೀವು ಯಾವಾಗಲೂ ದಾಸತ್ವದಿಂದ ಬಿಡುಗಡೆಯಾಗುವುದಿಲ್ಲ. ನೀವು ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರುವಿರಿ,” ಎಂದು ಹೇಳಿದನು.
[24] ಅದಕ್ಕವರು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವುದಕ್ಕೂ, ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡುವುದಕ್ಕೂ ತಮ್ಮ ಸೇವಕ ಮೋಶೆಗೆ ಆಜ್ಞಾಪಿಸಿದ್ದಾರೆಂದು, ನಿಮ್ಮ ಸೇವಕರಾದ ನಾವು ಕೇಳಿದೆವು. ಆದ್ದರಿಂದ ನಾವು ನಮ್ಮ ಪ್ರಾಣಕ್ಕಾಗಿ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
[25] ಇಗೋ, ಈಗಲೂ ನಾವು ನಿನ್ನ ಕೈಯಲ್ಲಿಯೇ ಇದ್ದೇವೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿಯೂ, ಸರಿಯಾಗಿಯೂ ತೋಚುವ ಹಾಗೆ ನಮಗೆ ಮಾಡು,” ಎಂದು ಉತ್ತರಕೊಟ್ಟರು.
[26] ಆ ಪ್ರಕಾರವೇ ಯೆಹೋಶುವನು ಅವರಿಗೆ ಹೇಳಿದಂತೆ ಮಾಡಿದನು. ಅವರನ್ನು ಕೊಂದು ಹಾಕದ ಹಾಗೆ ಇಸ್ರಾಯೇಲರ ಕೈಯಿಂದ ತಪ್ಪಿಸಿದನು.
[27] ಯೆಹೋಶುವನು ಆ ದಿನ ಇರುವ ಹಾಗೆ ಗಿಬ್ಯೋನಿನವರ ಸಮೂಹಕ್ಕೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿರುವ ಅವರ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.