[1] ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವ ದೇವರು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನ ಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.
[2] “ಅವು ಯಾವುವೆಂದರೆ: “ಫಿಲಿಷ್ಟಿಯರ ಮತ್ತು ಗೆಷೂರ್ಯರ ದೇಶವೆಲ್ಲಾ ಅಂದರೆ,
[3] ಈಜಿಪ್ಟಿಗೆ ಎದುರಾದ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗೂ ಅಂದರೆ, ಗಾಜಾ, ಅಷ್ಡೋದ್, ಅಷ್ಕೆಲೋನ್, ಗಾತ್, ಎಕ್ರೋನ್ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ದಕ್ಷಿಣ ಪ್ರಾಂತ್ಯದಲ್ಲಿದ್ದ ಅವ್ವೀಯರ ಸೀಮೆ;
[4] ಸೀದೋನ್ಯರ ಆರಾ ಪ್ರದೇಶದಿಂದ ಅಫೇಕ್ ಮತ್ತು ಅಮೋರಿಯರ ಮೇರೆಯವರೆಗೆ ಕಾನಾನ್ಯರ ಎಲ್ಲಾ ದೇಶವು,
[5] ಅದರೊಂದಿಗೆ ಗೆಬಾಲ್ಯರ ಪ್ರಾಂತ್ಯ, ಹೆರ್ಮೋನ್ ಬೆಟ್ಟದ ಕೆಳಗೆ ಇರುವ ಬಾಲ್ಗಾದಿನಿಂದ ಹಮಾತಿನ ದಾರಿಯವರೆಗೂ ಇರುವ ಲೆಬನೋನಿನ ಪೂರ್ವ ಪ್ರದೇಶ.
[6] “ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಸೀದೋನ್ಯರನ್ನೂ ನಾನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ, ಇಸ್ರಾಯೇಲರಿಗೆ ಸೊತ್ತಾಗಿ ಪಾಲು ಕೊಡಬೇಕು.
[7] ಈಗ ಈ ದೇಶವನ್ನು ಒಂಬತ್ತು ಗೋತ್ರಗಳಿಗೂ ಮನಸ್ಸೆ ಕುಲದ ಅರ್ಧ ಗೋತ್ರಕ್ಕೆ ಸೊತ್ತಾಗಿ ಪಾಲು ಮಾಡಿಕೊಡು,” ಎಂದು ಹೇಳಿದರು.
[8] ಮನಸ್ಸೆ ಕುಲದ ಉಳಿದ ಅರ್ಧ ಗೋತ್ರದವರೂ ರೂಬೇನ್ಯರೂ ಗಾದ್ಯರೂ ತಮ್ಮ ಸೊತ್ತನ್ನು ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಬೇಕೆಂದು ನಿರ್ಣಯಿಸಿದ ಸ್ಥಳಗಳು ಅವರಿಗೆ ಕೊಡಲಾದವು. ಅವುಗಳು ಯಾವುವೆಂದರೆ:
[9] ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬಾದ ಸಮನಾದ ಭೂಮಿಯೂ
[10] ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಮೇರೆಯವರೆಗೂ ಇದ್ದ ಸಕಲ ಪಟ್ಟಣಗಳು.
[11] ಅದರೊಂದಿಗೆ ಗಿಲ್ಯಾದ್, ಗೆಷೂರ್ಯರ, ಮಾಕಾತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಸಲೆಕಾವರೆಗೆ ಇರುವ ಇಡೀ ಬಾಷಾನ್ ಪೂರ್ತಿಯಾಗಿ.
[12] ಅಂದರೆ, ಬಾಷಾನಿನಲ್ಲಿ ಅಷ್ಟಾರೋತ್, ಎದ್ರೈ ಎಂಬ ಊರುಗಳಲ್ಲಿ ಆಳಿದ ರೆಫಾಯರ ವಂಶಸ್ಥನಾದ ಓಗನ ಸಮಸ್ತ ರಾಜ್ಯವೆಲ್ಲಾ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ, ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.
[13] ಆದಾಗ್ಯೂ ಇಸ್ರಾಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿಬಿಡಲಿಲ್ಲ. ಏಕೆಂದರೆ ಗೆಷೂರ್ಯರೂ ಮಾಕಾತೀಯರೂ ಈ ದಿನದವರೆಗೆ ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದಾರೆ.
[14] ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಅವನು ಅವರಿಗೆ ಹೇಳಿದ ಪ್ರಕಾರ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದ್ದರಿಂದ, ಇಸ್ರಾಯೇಲಿನ ದೇವರೇ ಅವರ ಸೊತ್ತು.
[15] ಮೋಶೆಯು ರೂಬೇನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:
[16] ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ,
[17] ಸಮನಾದ ಭೂಮಿಯಲ್ಲಿರುವ ಹೆಷ್ಬೋನ್ ಪಟ್ಟಣವೂ ಅದರ ಎಲ್ಲಾ ಪಟ್ಟಣಗಳಾದ ದೀಬೋನ್, ಬಾಮೋತ್ ಬಾಳ್, ಬೇತ್ ಬಾಳ್ ಮೆಯೋನ್,
[18] ಯಹಚ, ಕೆದೇಮೋತ್, ಮೇಫಾತ್,
[19] ಕಿರ್ಯಾತಯಿಮ್, ಸಿಬ್ಮಾ, ತಗ್ಗಿನ ಬೆಟ್ಟದಲ್ಲಿರುವ ಚೆರೆತ್ ಶಹರ್,
[20] ಬೇತ್ ಪೆಗೋರ್ ಎಂಬ ಪಟ್ಟಣಗಳೂ ಪಿಸ್ಗಾದ ಕೆಳಗಡೆ ಇರುವ ಸೀಮೆ, ಬೇತ್ ಯೆಷೀಮೋತ್,
[21] ಸಮನಾದ ಭೂಮಿಯ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳಿದ ಸೀಹೋನೆಂಬ ಅಮೋರಿಯರ ಅರಸನ ರಾಜ್ಯವೆಲ್ಲವೂ ಅವರ ಮೇರೆಗೊಳಗಾದವು. ಮೋಶೆಯು ಅವನನ್ನೂ ದೇಶದಲ್ಲಿ ಅವನ ಅಧಿಪತಿಗಳಾದಂಥ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬವರನ್ನೂ ಸೆದೆಬಡಿದನು.
[22] ಇದಲ್ಲದೆ ಇಸ್ರಾಯೇಲರು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮನೆಂಬ ಕಣಿ ಹೇಳುವವನನ್ನು ಖಡ್ಗದಿಂದ ಕೊಂದುಹಾಕಿದರು.
[23] ಯೊರ್ದನ್ ನದಿಯು ರೂಬೇನ್ ಗೋತ್ರಗಳ ಮೇರೆಯಾಗಿತ್ತು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ರೂಬೇನನ ಮಕ್ಕಳಿಗೆ ಅವರ ಗೋತ್ರಗಳ ಪ್ರಕಾರ ದೊರಕಿದ ಸೊತ್ತು.
[24] ಮೋಶೆಯು ಗಾದನ ಗೋತ್ರಗಳಿಗೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:
[25] ಯಜ್ಜೇರ್ ಪ್ರದೇಶ, ಗಿಲ್ಯಾದಿನ ಸಮಸ್ತ ಪಟ್ಟಣಗಳೂ ರಬ್ಬಾ ಊರಿನ ಎದುರಾಗಿರುವ ಅರೋಯೇರ್ ಪಟ್ಟಣವರೆಗೂ ಇರುವ ಅಮ್ಮೋನಿಯರ ಅರ್ಧ ದೇಶವು.
[26] ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೊನೀಮ್ ಎಂಬ ಊರುಗಳವರೆಗೂ ಮಹನಯಿಮಿನಿಂದ ದೆಬೀರ್ ಮೇರೆಯವರೆಗೂ ಇರುವ ದೇಶವು.
[27] ತಗ್ಗಿನಲ್ಲಿರುವ ಬೇತ್‌ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಪೋನ್ ಎಂಬ ಪಟ್ಟಣಗಳು ಹೆಷ್ಬೋನಿನ ಅರಸನಾದ ಸೀಹೋನನ ಉಳಿದ ರಾಜ್ಯವೂ ಯೊರ್ದನ್ ನದಿ ತೀರವಾಗಿ ಕಿನ್ನೆರೆತ್ ಸಮುದ್ರದ ಪರ್ಯಂತರಕ್ಕೂ ಇರುವ ದೇಶವು ಅವರ ಮೇರೆಗೆ ಒಳಗಾದವು.
[28] ಈ ಪಟ್ಟಣಗಳೂ, ಇವುಗಳ ಗ್ರಾಮಗಳೂ ಗಾದ್ಯರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿವೆ.
[29] ಇದಲ್ಲದೆ ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಅವರ ಕುಟುಂಬದ ಪ್ರಕಾರ ಕೊಟ್ಟ ಸೊತ್ತು ಇವು:
[30] ಮಹನಯಿಮಿನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ, ಬಾಷಾನಿನಲ್ಲಿರುವ ಯಾಯೀರನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು.
[31] ಗಿಲ್ಯಾದಿನ ಅರ್ಧ ಭಾಗ, ಬಾಷಾನಿನಲ್ಲಿರುವ ಓಗ್ ರಾಜನ ಪಟ್ಟಣಗಳಾದ ಅಷ್ಟಾರೋತ್, ಎದ್ರೈ, ಇವೆಲ್ಲವೂ ಮನಸ್ಸೆಯ ಮಗ ಮಾಕೀರನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನರಿಗೆ ಕೊಟ್ಟನು.
[32] ಹೀಗೆಯೇ ಮೋಶೆಯು ಯೊರ್ದನ್ ನದಿಗೆ ಆಚೆ ಯೆರಿಕೋವಿನ ಪೂರ್ವದಿಕ್ಕಿನಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಬಾಧ್ಯತೆಯಾಗಿ ಹಂಚಿದ ದೇಶಗಳು ಇವೆ.
[33] ಆದರೆ ಲೇವಿಯರ ಗೋತ್ರಕ್ಕೆ ಮೋಶೆಯು ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ದೇವರು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲರ ದೇವರಾದ ಯೆಹೋವ ದೇವರೇ ಅವರ ಸೊತ್ತು.