[1] ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.
[2] ಒಂದು ದಿನ ಅವನು ಸಮಸ್ತ ಇಸ್ರಾಯೇಲರನ್ನೂ ಅವರ ಹಿರಿಯರನ್ನೂ ಅವರ ಮುಖ್ಯಸ್ಥರನ್ನೂ ಅವರ ನ್ಯಾಯಾಧಿಪತಿಗಳನ್ನೂ ಅವರ ಅಧಿಕಾರಿಗಳನ್ನೂ ಕರೆಯಿಸಿ ಅವರಿಗೆ, “ನಾನು ದಿನತುಂಬಿದ ವೃದ್ಧನಾಗಿದ್ದೇನೆ.
[3] ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.
[4] ನಾನು ಯೊರ್ದನ್ ನದಿ ಮೊದಲುಗೊಂಡು ಪಶ್ಚಿಮಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ರಾಷ್ಟ್ರಗಳನ್ನು ಸೋಲಿಸಿ, ಉಳಿದ ಸಕಲ ನಾಡನ್ನು ನಿಮ್ಮ ಗೋತ್ರಗಳಿಗೆ ಸೊತ್ತಾಗಿ ಕೊಟ್ಟಿದ್ದೇನೆ.
[5] ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಉಳಿದವರನ್ನು ನಿಮ್ಮ ಮುಂದೆ ತಳ್ಳಿಬಿಟ್ಟು, ನಿಮ್ಮ ಕಣ್ಣೆದುರಿನಿಂದ ಅವರನ್ನು ಹೊರಡಿಸಿ ಬಿಡುವರು. ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆಯೇ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.
[6] “ನೀವು ಬಲಗೊಳ್ಳಿರಿ, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ, ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವ ಎಲ್ಲವನ್ನು ಕೈಗೊಂಡು ನಡೆಯಿರಿ.
[7] ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವರುಗಳ ಹೆಸರುಗಳನ್ನು ಸ್ಮರಿಸಲೂ ಬೇಡಿರಿ. ಅವುಗಳ ಮೇಲೆ ಆಣೆಯೂ ಇಡಬೇಡಿರಿ. ಅವುಗಳಿಗೆ ಆರಾಧನೆ ಮಾಡಬಾರದು. ಅಡ್ಡಬೀಳಲೂಬಾರದು.
[8] ಆದರೆ, ಈವರೆಗೂ ಹೇಗೋ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿರಿ.
[9] “ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
[10] ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
[11] ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.
[12] “ಆದರೆ, ನೀವು ದೇವರಿಂದ ತಿರುಗಿಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಂಡು ಅವರೊಂದಿಗೆ ಮದುವೆ ಮಾಡಿಕೊಟ್ಟರೆ, ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ,
[13] ನಿಮ್ಮ ದೇವರಾದ ಯೆಹೋವ ದೇವರು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿಬಿಡುವುದಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನೊಳಗಿಂದ ನೀವು ನಾಶವಾಗುವವರೆಗೂ ಅವರು ನಿಮಗೆ ಉರುಲೂ ಬೋನೂ ಆಗಿರುವರು. ಇದಲ್ಲದೆ ದೇವರು ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯವಾಗಿ ತಿಳಿದುಕೊಳ್ಳುವಿರಿ.
[14] “ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
[15] ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಒಳ್ಳೆಯ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ
[16] ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯನ್ನು ನೀವು ಉಲ್ಲಂಘಿಸಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಅವರು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವರು. ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯುವುದು. ಅವರು ನಿಮಗೆ ಕೊಟ್ಟ ಒಳ್ಳೆಯ ದೇಶದಿಂದ ನೀವು ಬೇಗನೆ ನಾಶವಾಗಿಹೋಗುವಿರಿ,” ಎಂದನು.