[1] ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ
[2] ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೆತಿಗೆ ದಕ್ಷಿಣಕ್ಕಿರುವ ಬಯಲಿನಲ್ಲಿಯೂ ಕಣಿವೆಗಳಲ್ಲಿ ಮತ್ತು ಪಶ್ಚಿಮದಲ್ಲಿ ದೋರಿನ ಪ್ರಾಂತಗಳಲ್ಲಿ ಇರುವ ಅರಸರಿಗೂ
[3] ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ ಬಳಿಗೂ, ಮಿಚ್ಪಾ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿ ಕಳುಹಿಸಿದನು.
[4] ಅವರೆಲ್ಲರು ಸಮುದ್ರ ದಡದ ಮರಳಿನ ಹಾಗೆ ಅಸಂಖ್ಯರಾಗಿದ್ದರು. ಅವರು ಬಹು ರಥಗಳೂ ಕುದುರೆಗಳೂ ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
[5] ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.
[6] ಆಗ ಯೆಹೋವ ದೇವರು ಯೆಹೋಶುವನಿಗೆ, “ಅವರಿಗೆ ಭಯಪಡಬೇಡ, ಏಕೆಂದರೆ ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರೂ ಸಂಹಾರವಾಗುವಂತೆ ಇಸ್ರಾಯೇಲರಿಗೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು,” ಎಂದರು.
[7] ಆಗ ಯೆಹೋಶುವನೂ ಅವನ ಸಂಗಡ ಇದ್ದ ಸೈನಿಕರೆಲ್ಲರೂ ಬಂದು ಫಕ್ಕನೆ ಮೇರೋಮ ಜಲಾಶಯದ ಬಳಿಯಲ್ಲಿ ಅವರ ಮೇಲೆ ದಾಳಿಮಾಡಿದರು.
[8] ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.
[9] ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರವೇ ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದುಬಿಟ್ಟು, ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
[10] ಆ ಕಾಲದಲ್ಲಿ ಯೆಹೋಶುವನು ಹಿಂದಿರುಗಿ ಹಾಚೋರನ್ನು ಹಿಡಿದು, ಅದರ ಅರಸನನ್ನು ಖಡ್ಗದಿಂದ ಸಂಹರಿಸಿದನು. ಏಕೆಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ಶಿರಸ್ಸಾಗಿತ್ತು.
[11] ಅವರು ಒಬ್ಬರನ್ನಾದರೂ ಉಳಿಸದೆ, ಅದರಲ್ಲಿದ್ದ ಪ್ರತಿಯೊಬ್ಬರನ್ನೂ ಖಡ್ಗದಿಂದ ಸಂಹರಿಸಿದನು. ಹಾಚೋರನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
[12] ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ, ಅವುಗಳ ಸಮಸ್ತ ಅರಸರನ್ನೂ ಹಿಡಿದು ಖಡ್ಗದಿಂದ ದಾಳಿಮಾಡಿ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು.
[13] ಆದರೆ ದಿನ್ನೆಯ ಮೇಲೆ ನಿಂತಿರುವ ಪಟ್ಟಣಗಳನ್ನೆಲ್ಲಾ ಇಸ್ರಾಯೇಲರು ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟುಬಿಟ್ಟನು.
[14] ಆ ಪಟ್ಟಣಗಳ ಎಲ್ಲಾ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನೆಲ್ಲಾ ಇಸ್ರಾಯೇಲರು ತಮಗೋಸ್ಕರ ಸುಲಿಗೆ ಮಾಡಿಕೊಂಡರು. ಖಡ್ಗದಿಂದ ಜನರನ್ನು ನಾಶಮಾಡಿದರು. ಒಬ್ಬರನ್ನೂ ಅವರು ಉಳಿಸಲಿಲ್ಲ.
[15] ಯೆಹೋವ ದೇವರು ತಮ್ಮ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದನು. ಯೆಹೋಶುವನೂ ಹಾಗೆಯೇ ಮಾಡಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಯೆಹೋಶುವನು ಒಂದನ್ನೂ ಮೀರದೆ ಎಲ್ಲವನ್ನೂ ಮಾಡಿದನು.
[16] ಈ ಪ್ರಕಾರ ಗೋಷೆನ್ ಸೀಮೆ, ಅದರ ಕಣಿವೆ, ಬಯಲು ಪ್ರದೇಶ, ದಕ್ಷಿಣದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲಾ ಯೆಹೋಶುವನಿಗೆ ಸ್ವಾಧೀನವಾದವು.
[17] ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು.
[18] ಯೆಹೋಶುವನು ಬಹಳ ಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧ ಮಾಡುತ್ತಿದ್ದನು.
[19] ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ. ಅವರು ಬೇರೆ ಎಲ್ಲವುಗಳನ್ನು ಯುದ್ಧಮಾಡಿ ತೆಗೆದುಕೊಂಡರು.
[20] ಏಕೆಂದರೆ ಅವರು ಇಸ್ರಾಯೇಲರಿಗೆ ಎದುರಾಗಿ ಯುದ್ಧಮಾಡಲು ಬರುವ ಹಾಗೆ ಅವರ ಹೃದಯವನ್ನು ಯೆಹೋವ ದೇವರು ಕಠಿಣಮಾಡಿದ್ದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರಿಗೆ ದಯೆ ತೋರಿಸದೆ, ಅವರನ್ನು ಸಂಹರಿಸಿದರು.
[21] ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ, ದೆಬೀರಿನಲ್ಲಿಯೂ, ಅನಾಬಿನಲ್ಲಿಯೂ, ಯೆಹೂದದ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲ್ ಪ್ರಾಂತದ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯರನ್ನು ಕಡಿದುಬಿಟ್ಟು, ಅವರನ್ನೂ, ಅವರ ಪಟ್ಟಣಗಳನ್ನೂ ಪೂರ್ಣವಾಗಿ ನಾಶಮಾಡಿದನು.
[22] ಅನಾಕ್ಯರು ಇಸ್ರಾಯೇಲರ ದೇಶದಲ್ಲಿ ಒಬ್ಬರೂ ಉಳಿಯಲಿಲ್ಲ. ಗಾಜದಲ್ಲಿಯೂ, ಗತ್‌ನಲ್ಲಿಯೂ, ಅಷ್ಡೋದಿನಲ್ಲಿಯೂ ಮಾತ್ರ ಕೆಲವರು ಉಳಿದರು.
[23] ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.