[1] ಯೆಹೋಶುವನು ಬೆಳಿಗ್ಗೆ ಎದ್ದು, ಅವನೂ, ಇಸ್ರಾಯೇಲರೆಲ್ಲರೂ ಶಿಟ್ಟೀಮಿನಿಂದ ಪ್ರಯಾಣಮಾಡಿ, ಯೊರ್ದನ್ ನದಿ ಬಳಿಗೆ ಬಂದು, ದಾಟುವುದಕ್ಕಿಂತ ಮುಂಚೆ ಅಲ್ಲಿ ಇಳಿದುಕೊಂಡರು.
[2] ಮೂರು ದಿನಗಳಾದ ಮೇಲೆ ಅಧಿಕಾರಿಗಳು ಪಾಳೆಯದೊಳಗೆ ಹಾದು ಹೋಗಿ,
[3] ಜನರಿಗೆ ಆಜ್ಞಾಪಿಸಿ, “ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷ ಹೊರುವುದನ್ನು ಕಾಣುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು.
[4] ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರ ಇರಬೇಕು. ಅದರ ಹತ್ತಿರ ಬರಬೇಡಿರಿ. ನೀವು ಹೋಗಬೇಕಾದ ಮಾರ್ಗ ನಿಮಗೆ ತಿಳಿಯುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇದುವರೆಗೆ ಪ್ರಯಾಣ ಮಾಡಿರುವುದಿಲ್ಲ,” ಎಂದರು.
[5] ಯೆಹೋಶುವನು ಜನರಿಗೆ, “ಇಂದು ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ, ನಾಳೆ ಯೆಹೋವ ದೇವರು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವರು,” ಎಂದನು.
[6] ಆಗ ಯೆಹೋಶುವನು ಯಾಜಕರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋಗಿರಿ,” ಎಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದೆ ಹೊರಟರು.
[7] ಯೆಹೋವ ದೇವರು ಯೆಹೋಶುವನಿಗೆ, “ನಾನು ಮೋಶೆಯ ಸಂಗಡ ಇದ್ದ ಪ್ರಕಾರ, ನಿನ್ನ ಸಂಗಡ ಇರುವುದನ್ನು ಇಸ್ರಾಯೇಲರೆಲ್ಲರೂ ತಿಳಿಯುವಂತೆ, ನಾನು ಈ ದಿನ ನಿನ್ನನ್ನು ಅವರ ಮುಂದೆ ಉನ್ನತಗೊಳಿಸುವೆನು.
[8] ನೀನು ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನ್ ನದಿಯ ಅಂಚಿಗೆ ಬಂದಾಗ, ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು,” ಎಂದರು.
[9] ಆಗ ಯೆಹೋಶುವನು ಇಸ್ರಾಯೇಲರಿಗೆ, “ನೀವು ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿರಿ.
[10] ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರುವುದನ್ನೂ, ಅವರು ಕಾನಾನ್ಯರನ್ನೂ, ಹಿತ್ತಿಯರನ್ನೂ, ಹಿವ್ವಿಯರನ್ನೂ, ಪೆರಿಜೀಯರನ್ನೂ, ಗಿರ್ಗಾಷಿಯರನ್ನೂ, ಅಮೋರಿಯರನ್ನೂ, ಯೆಬೂಸಿಯರನ್ನೂ ನಿಮ್ಮ ಮುಂದೆ ನಿಶ್ಚಯವಾಗಿ ಓಡಿಸಿಬಿಡುವುದನ್ನೂ ನೀವು ತಿಳಿಯುವಿರಿ.
[11] ಇಗೋ, ಸಮಸ್ತ ಭೂಮಿಗೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನ್ ನದಿಯನ್ನು ದಾಟಿ ಹೋಗುವುದು.
[12] ಆದ್ದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬರಾಗಿ ತೆಗೆದುಕೊಳ್ಳಿರಿ.
[13] ಸಮಸ್ತ ಭೂಮಿಗೂ ಒಡೆಯರಾಗಿರುವ ಯೆಹೋವ ದೇವರ ಮಂಜೂಷವನ್ನು ಹೊರುವ ಯಾಜಕರ ಪಾದಗಳು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ, ಮೇಲಿನಿಂದ ಹರಿದು ಬರುವ ನೀರು ಮುಂದೆ ಹರಿಯದೆ ಅಲ್ಲಿಯೇ ರಾಶಿಯಾಗಿ ನಿಲ್ಲುವುದು,” ಎಂದು ಹೇಳಿದನು.
[14] ಆದ್ದರಿಂದ ಜನರು ಯೊರ್ದನ್ ನದಿಯನ್ನು ದಾಟಲು ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಜನರಿಗೆ ಮುಂದಾಗಿ ಹೊತ್ತುಕೊಂಡು ಹೋದರು.
[15] ಎಂದಿನಂತೆ ಯೊರ್ದನ್ ನದಿಯು ಸುಗ್ಗಿಕಾಲದಲ್ಲಿ ದಡ ತುಂಬಿ ಹರಿಯುತ್ತಾ ಇತ್ತು. ಮಂಜೂಷವನ್ನು ಹೊರುವ ಯಾಜಕರ ಕಾಲುಗಳು ನೀರಿನ ಅಂಚಿನಲ್ಲಿ ಇಡುತ್ತಲೇ,
[16] ಮೇಲಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಸಮೀಪವಾಗಿದ್ದ ಆದಾಮ್ ಪಟ್ಟಣಕ್ಕೆ ಬಂದು ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ಎಂಬ ಲವಣ ಸಮುದ್ರಕ್ಕೆ ಹರಿದುಹೋಯಿತು. ಆಗ ಜನರು ಯೆರಿಕೋವಿನ ಎದುರಾಗಿ ನದಿ ದಾಟಿದರು.
[17] ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿಯ ಮಧ್ಯದಲ್ಲಿ ಒಣನೆಲದಲ್ಲಿ ದೃಢವಾಗಿ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲರೆಲ್ಲರೂ ಒಣನೆಲದ ಮೇಲೆ ನಡೆದರು. ಹೀಗೆ ಇಡೀ ರಾಷ್ಟ್ರವು ಯೊರ್ದನ್ ನದಿ ಆಚೆ ಸೇರಿತು.