Skip to content
Opens in a new window
Listen to this chapter • 6:24

[1] ಆಗ ಯೆರಿಕೋವಿನ ಜನರು ಇಸ್ರಾಯೇಲರ ನಿಮಿತ್ತವಾಗಿ, ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದರು.

[2] ಆಗ ಯೆಹೋವ ದೇವರು ಯೆಹೋಶುವನಿಗೆ, “ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.

[3] ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು.

[4] ಏಳುಮಂದಿ ಯಾಜಕರು ಹೊತ್ತುಕೊಂಡಿದ್ದ ಮಂಜೂಷದ ಮುಂದೆ ಟಗರುಗಳ ಏಳು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡು ಹೋಗಬೇಕು. ಆದರೆ ಅವರು ಏಳನೆಯ ದಿವಸ ಪಟ್ಟಣವನ್ನು ಏಳು ಸಾರಿ ಸುತ್ತಿ ಬರಬೇಕು. ಯಾಜಕರು ತುತೂರಿಗಳನ್ನು ಊದಬೇಕು.

[5] ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.

[6] ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ. ಏಳುಮಂದಿ ಯಾಜಕರು ಏಳು ಟಗರು ಕೊಂಬುಗಳ ತುತೂರಿಗಳೊಂದಿಗೆ ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.

[7] ಜನರಿಗೆ, “ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.

[8] ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ, ಏಳು ಟಗರು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಮುಂದೆ ನಡೆದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರನ್ನು ಹಿಂಬಾಲಿಸಿತು.

[9] ಹೀಗೆ ಯುದ್ಧ ಸನ್ನದ್ಧರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು.

[10] ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಶಬ್ದವು ಕೇಳಿಸಲೂಬಾರದು. ನಿಮ್ಮ ಬಾಯಿಂದ ಯಾವ ಮಾತು ಹೊರಡಲೂಬಾರದು, ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು.

[11] ಹೀಗೆಯೇ ಯೆಹೋವ ದೇವರ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದರು.

[12] ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡರು.

[13] ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧವಾದ ಜನರು ಅವರ ಮುಂದೆ ಹೋದರು. ಆದರೆ ಹಿಂದಿನ ಸೈನ್ಯದವರು ಯೆಹೋವ ದೇವರ ಮಂಜೂಷದ ಹಿಂದೆ ನಡೆದರು. ಯಾಜಕರು ತುತೂರಿಗಳನ್ನು ಊದುತ್ತಾ ಹೊರಟರು.

[14] ಹೀಗೆ ಎರಡನೆಯ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿಬಂದು ಪಾಳೆಯಕ್ಕೆ ಹಿಂದಿರುಗಿದರು. ಹೀಗೆಯೇ ಆರು ದಿನ ಮಾಡಿದರು.

[15] ಆದರೆ ಏಳನೆಯ ದಿನ ಸೂರ್ಯೋದಯವಾಗುವಾಗ, ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು. ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿಬಂದರು.

[16] ಏಳನೆಯ ಸಾರಿ ಯಾಜಕರು ತುತೂರಿಗಳನ್ನು ಊದುವಾಗ, ಯೆಹೋಶುವನು ಜನರಿಗೆ, “ಆರ್ಭಟಿಸಿರಿ! ಯೆಹೋವ ದೇವರು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾರೆ.

[17] ಆದರೂ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರಿಗೆ ಅರ್ಪಿತವಾದವುಗಳು. ರಾಹಾಬಳೆಂಬ ವೇಶ್ಯೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಆಕೆಯು ಬಚ್ಚಿಟ್ಟಿದ್ದಳು.

[18] ಆದರೆ ಅರ್ಪಿತವಾದವುಗಳನ್ನು ನೀವು ಮುಟ್ಟಬೇಡಿರಿ. ಹಾಗೆ ಅವುಗಳನ್ನು ತೆಗೆದುಕೊಂಡು ನಿಮಗೆ ನಾಶನವನ್ನು ತಂದುಕೊಳ್ಳಬೇಡಿರಿ. ಇಸ್ರಾಯೇಲಿನ ಪಾಳೆಯವೇ ಶಾಪಕ್ಕೆ ಈಡು ಮಾಡಿ, ತೊಂದರೆ ಪಡಿಸದಂತೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರಿ.

[19] ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.

[20] ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು.

[21] ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀಪುರುಷರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆಗಳನ್ನೂ ಖಡ್ಗದಿಂದ ಸಂಪೂರ್ಣವಾಗಿ ನಾಶಮಾಡಿದರು.

[22] ಆ ನಾಡನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ ಯೆಹೋಶುವನು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳನ್ನೂ ಅವಳಿಗೆ ಇರುವ ಸಮಸ್ತವನ್ನೂ ನೀವು ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತೆಗೆದುಕೊಂಡು ಬನ್ನಿರಿ,” ಎಂದನು.

[23] ಅದರಂತೆ ಆ ಯೌವನಸ್ಥರು ಒಳಗೆ ಹೋಗಿ, ರಾಹಾಬಳನ್ನೂ ಅವಳ ತಂದೆಯನ್ನೂ ಅವಳ ತಾಯಿಯನ್ನೂ ಅವಳ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಗೋತ್ರದ ಎಲ್ಲಾ ಸಂಬಂಧಿಕರನ್ನೂ ಹೊರಗೆ ಕರೆತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು.

[24] ಆದರೆ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿಬಂಗಾರವನ್ನೂ ಕಂಚು ಕಬ್ಬಿಣ ಪಾತ್ರೆಗಳನ್ನು ಮಾತ್ರ ಯೆಹೋವ ದೇವರ ಮನೆಯ ಭಂಡಾರದಲ್ಲಿ ಇಟ್ಟರು.

[25] ಆದರೆ ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ, ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದ ಸಮಸ್ತವನ್ನೂ ತಪ್ಪಿಸಿ ಉಳಿಸಿದನು. ಅವಳು ಈ ದಿವಸದವರೆಗೂ ಇಸ್ರಾಯೇಲರಲ್ಲಿ ವಾಸವಾಗಿದ್ದಾಳೆ. ಏಕೆಂದರೆ ಯೆರಿಕೋವನ್ನು ಸಂಚರಿಸಿ ನೋಡಲು, ಯೆಹೋಶುವನು ಕಳುಹಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.

[26] ಆ ಕಾಲದಲ್ಲಿ ಯೆಹೋಶುವನು ಅವರಿಗೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಯೆರಿಕೋವೆಂಬ ಈ ನಗರವನ್ನು ಮತ್ತೆ ಕಟ್ಟುವವನು, ಯೆಹೋವ ದೇವರ ದೃಷ್ಟಿಯಲ್ಲಿ ಶಾಪಗ್ರಸ್ತನಾಗುವನು. “ಅದರ ಅಸ್ತಿವಾರವನ್ನು ಹಾಕುವವನು, ಅವನು ತನ್ನ ಚೊಚ್ಚಲು ಮಗನನ್ನು ಕಳೆದುಕೊಳ್ಳುವನು. ಪಟ್ಟಣದ ಬಾಗಿಲುಗಳನ್ನಿಡುವಾಗ ತನ್ನ ಕಿರಿ ಮಗನನ್ನು ಕಳೆದುಕೊಳ್ಳುವನು.”

[27] ಯೆಹೋವ ದೇವರು ಯೆಹೋಶುವನ ಸಂಗಡ ಇದ್ದರು. ಅವನ ಕೀರ್ತಿ ದೇಶದಲ್ಲೆಲ್ಲಾ ಹರಡಿತು.

ಯೆಹೋಶುವ — Chapters