Skip to content
Opens in a new window
Listen to this chapter • 7:23

[1] ಲೇವಿ ಗೋತ್ರದ ಹಿರಿಯರು, ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲರ ಗೋತ್ರಗಳ ಹಿರಿಯರ ಬಳಿಗೂ ಯಾಜಕನಾದ ಎಲಿಯಾಜರನ ಬಳಿಗೂ ಬಂದರು.

[2] ಅವರು ಕಾನಾನ್ ದೇಶದ ಶೀಲೋವಿನಲ್ಲಿ ಅವರನ್ನು ಸಂಧಿಸಿ, “ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ್ದಾರೆ,” ಎಂದರು.

[3] ಹಾಗೆಯೇ ಇಸ್ರಾಯೇಲರು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಯೆಹೋವ ದೇವರ ಆಜ್ಞೆಯ ಪ್ರಕಾರ ಪಟ್ಟಣಗಳನ್ನೂ ಗೋಮಾಳಗಳನ್ನೂ ಕೊಟ್ಟರು. ಅವುಗಳ ವಿವರ:

[4] ಕೊಹಾತ್ಯರ ಗೋತ್ರಗಳಿಗೆ ಚೀಟು ಬಂದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೆಹೂದದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ, ಬೆನ್ಯಾಮೀನನ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.

[5] ಕೊಹಾತ್ಯರಿಗೆ ಎಫ್ರಾಯೀಮನ ಗೋತ್ರದಲ್ಲಿಯೂ, ದಾನನ ಗೋತ್ರದಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹತ್ತು ಪಟ್ಟಣಗಳು ಚೀಟಿಯಿಂದ ದೊರಕಿದವು.

[6] ಗೇರ್ಷೋನ್ಯರಿಗೆ ಇಸ್ಸಾಕಾರನ ಗೋತ್ರದಲ್ಲಿಯೂ, ಆಶೇರನ ಗೋತ್ರದಲ್ಲಿಯೂ, ನಫ್ತಾಲಿಯ ಗೋತ್ರದಲ್ಲಿಯೂ, ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.

[7] ಇದಲ್ಲದೆ ಮೆರಾರೀಯರಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ, ಗಾದನ ಗೋತ್ರದಲ್ಲಿಯೂ, ಜೆಬುಲೂನನ ಗೋತ್ರದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.

[8] ಈ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗೋಮಾಳಗಳನ್ನೂ ಇಸ್ರಾಯೇಲರು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ, ಲೇವಿಯರಿಗೆ ಚೀಟು ಹಾಕಿಕೊಟ್ಟರು.

[9] ಅವರು ಯೆಹೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರದಲ್ಲಿಯೂ ಕೆಲವು ಪಟ್ಟಣಗಳನ್ನು ಕೊಟ್ಟರು.

[10] ಲೇವಿಯರಿಗೆ ಮೊದಲನೆಯ ಚೀಟು ಬಿದ್ದ ಕಾರಣ, ಲೇವಿ ಗೋತ್ರಕ್ಕೆ ಸೇರಿದ ಕೊಹಾತ್ಯರಾದ ಆರೋನನ ಸಂತತಿಯರಿಗೆ ಯೆಹೂದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ ಕೂಡಲಾದ ಪಟ್ಟಣಗಳ ವಿವರ:

[11] ಯೆಹೂದದ ಬೆಟ್ಟಗಳಲ್ಲಿರುವ ಅನಾಕನ ಪಿತೃವಾದ ಕಿರ್ಯತ್ ಅರ್ಬನ ಹೆಸರಿದ್ದ ಪಟ್ಟಣವಾದ ಹೆಬ್ರೋನನ್ನೂ, ಅದರ ಸುತ್ತಲಿರುವ ಗೋಮಾಳಗಳನ್ನೂ ಅವರಿಗೆ ಕೊಟ್ಟರು.

[12] ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೂ ಬಾಧ್ಯತೆಯಾಗಿ ಕೊಟ್ಟರು.

[13] ಹೀಗೆಯೇ ಯಾಜಕನಾದ ಆರೋನನ ವಂಶದವರಿಗೆ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಕೊಟ್ಟರು. ಲಿಬ್ನಾವನ್ನೂ

[14] ಯತ್ತೀರನ್ನೂ ಎಷ್ಟೆಮೋವನ್ನೂ

[15] ಹೋಲೋನನ್ನೂ ದೆಬೀರನ್ನೂ

[16] ಆಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಆ ಎರಡು ಗೋತ್ರಗಳಿಂದ ಈ ಒಂಬತ್ತು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.

[17] ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿ ಗಿಬ್ಯೋನನ್ನೂ ಗೆಬಾನನ್ನೂ

[18] ಅನಾತೋತನ್ನೂ ಅಲ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.

[19] ಯಾಜಕನಾದ ಆರೋನನ ವಂಶದವರಿಗೆ ಒಟ್ಟು ಹದಿಮೂರು ಪಟ್ಟಣಗಳೂ, ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[20] ಇದಲ್ಲದೆ ಲೇವಿಯರಾದ ಕೊಹಾತ್ಯನ ಗೋತ್ರದ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯೀಮನ ಗೋತ್ರದಲ್ಲಿ ಚೀಟಿಯಿಂದ ದೊರಕಿದ ಪಟ್ಟಣಗಳ ವಿವರ:

[21] ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯೀಮನ ಬೆಟ್ಟಗಳಲ್ಲಿರುವ, ಶೆಕೆಮನ್ನೂ ಗೆಜೆರನ್ನೂ

[22] ಕಿಬ್‌ಚೈಮ್ ಮತ್ತು ಬೇತ್ ಹೋರೋನ್ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[23] ಇದಲ್ಲದೆ ದಾನ್ಯನ ಗೋತ್ರದಲ್ಲಿ, ಎಲ್ತೆಕೇಯನ್ನೂ ಗಿಬ್ಬೆತೋನನ್ನೂ

[24] ಅಯ್ಯಾಲೋನನ್ನೂ ಗತ್ ರಿಮ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[25] ಮನಸ್ಸೆಯ ಅರ್ಧಗೋತ್ರದಲ್ಲಿ, ತಾನಕನ್ನೂ ಗತ್ ರಿಮ್ಮೋನನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[26] ಹೀಗೆ ಉಳಿದಂಥ ಕೊಹಾತ್ಯನ ಗೋತ್ರಗಳಲ್ಲಿ ಹತ್ತು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[27] ಲೇವಿ ಗೋತ್ರದ ಗೇರ್ಷೋನ್ಯರಿಗೆ ಮನಸ್ಸೆಯ ಅರ್ಧಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[28] ಇದಲ್ಲದೆ ಇಸ್ಸಾಕಾರನ ಗೋತ್ರದ ಸೊತ್ತಿನಿಂದ ಕಿಷ್ಯೋನನ್ನೂ ದಾಬೆರತನ್ನೂ

[29] ಯರ್ಮೂತ್ ಮತ್ತು ಏಂಗನ್ನೀಮನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[30] ಆಶೇರನ ಗೋತ್ರದ ಸೊತ್ತಿನಿಂದ ಮಿಷಾಲನ್ನೂ, ಅಬ್ದೋನನ್ನೂ

[31] ಹೆಲ್ಕತನ್ನೂ ರೆಹೋಬನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[32] ನಫ್ತಾಲಿಯ ಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಹಮ್ಮೋತ್ ದೋರನ್ನೂ ಕರ್ತಾನನ್ನೂ ಹೀಗೆ ಮೂರು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[33] ಗೇರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಹದಿಮೂರು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[34] ಉಳಿದ ಲೇವಿಯರಾದ ಮೆರಾರೀಯ ಕುಟುಂಬಗಳಿಗೆ ಜೆಬುಲೂನನ ಗೋತ್ರದ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,

[35] ದಿಮ್ನಾ, ನಹಲಾಲ್, ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[36] ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಯಹಚವನ್ನೂ

[37] ಕೆದೇಮೋತನ್ನೂ ಮೇಫಾತನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[38] ಗಾದ್ಯರ ಗೋತ್ರದಲ್ಲಿ, ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನ ರಾಮೋತನ್ನೂ, ಮಹನಯಿಮನ್ನೂ,

[39] ಹೆಷ್ಬೋನನ್ನೂ ಯಜ್ಜೇರನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.

[40] ಹೀಗೆಯೇ ಲೇವಿ ಗೋತ್ರದ ಉಳಿದಂಥ ಮೆರಾರೀಯರ ಕುಟುಂಬಗಳ ಪ್ರಕಾರ ಚೀಟಿಯಿಂದ ದೊರೆತ ಪಟ್ಟಣಗಳು ಹನ್ನೆರಡು.

[41] ಇಸ್ರಾಯೇಲರ ನಡುವೆ ಲೇವಿಯರಿಗೆ ಒಟ್ಟು ನಾಲ್ವತ್ತೆಂಟು ಪಟ್ಟಣಗಳು ಅವುಗಳ ಗೋಮಾಳ ಸಹಿತವಾಗಿ ದೊರಕಿದವು.

[42] ಈ ಪಟ್ಟಣಗಳ ಸುತ್ತಲೂ ಪ್ರತಿ ಒಂದಕ್ಕೂ ಗೋಮಾಳಗಳಿದ್ದವು. ಎಲ್ಲ ಪಟ್ಟಣಗಳಿಗೂ ಹೀಗೆಯೇ ಇದ್ದವು.

[43] ಈ ರೀತಿಯಾಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುವೆನೆಂದು ಆಣೆಯಿಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟರು. ಇಸ್ರಾಯೇಲರು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸವಾಗಿದ್ದರು.

[44] ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು.

[45] ಯೆಹೋವ ದೇವರು ಇಸ್ರಾಯೇಲರಿಗೆ ಹೇಳಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ. ಎಲ್ಲಾ ನೆರವೇರಿದವು.

ಯೆಹೋಶುವ — Chapters