[1] ಜನರೆಲ್ಲರು ಯೊರ್ದನ್ ನದಿಯ ಆಚೆಗೆ ದಾಟಿದ ಮೇಲೆ, ಯೆಹೋವ ದೇವರು ಯೆಹೋಶುವನೊಂದಿಗೆ ಮಾತನಾಡಿ,
[2] “ನೀನು ಜನರಲ್ಲಿ ಪ್ರತಿ ಗೋತ್ರಕ್ಕೆ ಒಬ್ಬೊಬ್ಬನಂತೆ ಹನ್ನೆರಡು ಮಂದಿ ಗಂಡಸರನ್ನು ಆರಿಸಿಕೊಂಡು,
[3] ಯೊರ್ದನ್ ನದಿ ಮಧ್ಯದಲ್ಲಿ ಯಾಜಕರ ಕಾಲುಗಳು ಸ್ಥಿರವಾಗಿ ನಿಂತ ಸ್ಥಳದಲ್ಲಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಅವುಗಳನ್ನು ನಿಮ್ಮ ಸಂಗಡ ಆಚೆದಡಕ್ಕೆ ತಂದು, ನೀವು ಈ ರಾತ್ರಿಯಲ್ಲಿ ಇಳಿದುಕೊಳ್ಳುವ ಸ್ಥಳದಲ್ಲಿ ಅವುಗಳನ್ನು ಹಾಕಿರಿ ಎಂದು ಅವರಿಗೆ ಆಜ್ಞಾಪಿಸು,” ಎಂದರು.
[4] ಆಗ ಯೆಹೋಶುವನು ಇಸ್ರಾಯೇಲರಲ್ಲಿ ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನ ಪ್ರಕಾರ ತಾನು ಆರಿಸಿಕೊಂಡ ಹನ್ನೆರಡು ಮಂದಿ ಗಂಡಸರನ್ನು ಕರೆದನು.
[5] ಯೆಹೋಶುವನು ಅವರಿಗೆ, “ನೀವು ಯೊರ್ದನ್ ನದಿ ಮಧ್ಯದಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಮಂಜೂಷದ ಮುಂದೆ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನೂ ಒಂದೊಂದು ಕಲ್ಲನ್ನು ಭುಜದ ಮೇಲೆ ಹೊತ್ತುಕೊಂಡು ಬನ್ನಿರಿ.
[6] ಏಕೆಂದರೆ ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳೇನು?’ ಎಂದು ಕೇಳುವಾಗ,
[7] ನೀವು ಅವರಿಗೆ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯೊರ್ದನ್ ನದಿಯ ನೀರು ವಿಭಾಗವಾಯಿತು. ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿಯನ್ನು ದಾಟುವಾಗ, ಯೊರ್ದನ್ ನದಿಯ ನೀರು ನಿಂತುಹೋಯಿತು. ಈ ಕಲ್ಲುಗಳು ಇಸ್ರಾಯೇಲರಿಗೆ ಎಂದೆಂದಿಗೂ ಜ್ಞಾಪಕಾರ್ಥವಾದ ಗುರುತು,’ ಎಂದು ಉತ್ತರಕೊಡಬೇಕು,” ಎಂದನು.
[8] ಆಗ ಇಸ್ರಾಯೇಲರು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು. ಯೆಹೋವ ದೇವರು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾಯೇಲರ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನ್ ನದಿಯ ಮಧ್ಯದಿಂದ ತೆಗೆದುಕೊಂಡು, ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ಇಟ್ಟರು.
[9] ಯೆಹೋಶುವನು ಯೊರ್ದನ್ ನದಿ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ಇಟ್ಟ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದವರೆಗೂ ಅಲ್ಲಿಯೇ ಇವೆ.
[10] ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದ ಪ್ರಕಾರ, ಯೆಹೋವ ದೇವರು ಆಜ್ಞಾಪಿಸಿದ್ದೆಲ್ಲಾ ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿ ನಡುವೆಯೇ ನಿಂತರು. ಜನರು ತ್ವರೆಯಾಗಿ ಆಚೆಗೆ ದಾಟಿಹೋದರು.
[11] ಜನರೆಲ್ಲರೂ ಆಚೆಗೆ ದಾಟಿದ ಮೇಲೆ ಯೆಹೋವ ದೇವರ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು.
[12] ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಗೋತ್ರದವರು ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ಧರಾಗಿ ಮಿಕ್ಕ ಇಸ್ರಾಯೇಲರಿಗಿಂತ ಮುಂದಾಗಿ ಹಾದುಹೋದರು.
[13] ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಯೆಹೋವ ದೇವರ ಮುಂದೆ ಯುದ್ಧಮಾಡುವುದಕ್ಕೆ ಯೆರಿಕೋವಿನ ಬಯಲುಗಳಿಗೆ ಹಾದುಬಂದರು.
[14] ಆ ದಿನದಲ್ಲಿ ಯೆಹೋವ ದೇವರು ಯೆಹೋಶುವನನ್ನು ಇಸ್ರಾಯೇಲರೆಲ್ಲರ ಮುಂದೆ ಘನಪಡಿಸಿದರು. ಅವರು ಮೋಶೆಯನ್ನು ಗೌರವಿಸಿದ ಹಾಗೆಯೇ, ಅವನಿಗೂ ಅವನು ಬದುಕಿದ ದಿನಗಳಲ್ಲೆಲ್ಲಾ ಗೌರವ ಕೊಟ್ಟರು.
[15] ಯೆಹೋವ ದೇವರು ಯೆಹೋಶುವನ ಸಂಗಡ ಮಾತನಾಡಿ,
[16] “ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲೆ ಬರಬೇಕೆಂದು ಆಜ್ಞಾಪಿಸು,” ಎಂದು ಹೇಳಿದರು.
[17] ಆಗ ಯೆಹೋಶುವನು ಯಾಜಕರಿಗೆ, “ಯೊರ್ದನಿನಿಂದ ಮೇಲಕ್ಕೆ ಬನ್ನಿರಿ,” ಎಂದು ಆಜ್ಞಾಪಿಸಿದನು.
[18] ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿ ಮಧ್ಯದಲ್ಲಿಂದ ಏರಿ, ತಮ್ಮ ಅಂಗಾಲುಗಳನ್ನು ಒಣನೆಲದ ಮೇಲೆ ಇಟ್ಟಕೂಡಲೇ ನೀರು ಮುಂಚಿನಂತೆ ಬಂದು ಯೊರ್ದನ್ ನದಿಯ ದಡ ತುಂಬಿ ಹರಿಯಿತು.
[19] ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಯೊರ್ದನಿನಿಂದ ಹೊರಟು, ಯೆರಿಕೋವಿನ ಪೂರ್ವದಿಕ್ಕಿನ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದುಕೊಂಡರು.
[20] ಅವರು ಯೊರ್ದನಿನಿಂದ ತೆಗೆದುಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು.
[21] ಅವನು ಇಸ್ರಾಯೇಲರಿಗೆ, “ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನು?’ ಎಂದು ಮುಂದಿನ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳುವಾಗ,
[22] ನೀವು ಅವರಿಗೆ, ‘ಇಸ್ರಾಯೇಲರು ಒಣನೆಲದಲ್ಲಿ ಈ ಯೊರ್ದನ್ ನದಿಯನ್ನು ದಾಟಿ ಬಂದರು.
[23] ನೀವು ಯೊರ್ದನ್ ನದಿ ನೀರನ್ನು ದಾಟಿ ಬರುವವರೆಗೂ, ನಿಮ್ಮ ದೇವರಾದ ಯೆಹೋವ ದೇವರು ಆ ನದಿಯ ನೀರನ್ನು ಒಣಗಿ ಹೋಗುವಂತೆ ಮಾಡಿದರು. ಕೆಂಪು ಸಮುದ್ರವನ್ನು ನಾವು ದಾಟುವವರೆಗೂ ನಮ್ಮ ಮುಂದೆ ಬತ್ತಿಸಿದಂತೆ, ಯೊರ್ದನ್ ನದಿ ನೀರನ್ನೂ ಬತ್ತಿಸಿದರು.
[24] ಭೂಮಿಯ ಜನರೆಲ್ಲಾ ಯೆಹೋವ ದೇವರ ಹಸ್ತವು ಬಲವುಳ್ಳದ್ದೆಂದು ತಿಳಿಯುವಂತೆಯೂ ನೀವು ನಿರಂತರವೂ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವಂತೆಯೂ ದೇವರಾದ ಯೆಹೋವ ದೇವರು ಹೀಗೆ ಮಾಡಿದರು,’ ಎಂದು ನೀವು ಹೇಳಬೇಕು,” ಎಂದನು.