[1] ಯಾಜಕನಾದ ಎಲಿಯಾಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಮುಖ್ಯಸ್ಥರೂ ಜನರಿಗೆ ಸೊತ್ತಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲರು ಬಾಧ್ಯವಾಗಿ ಪ್ರದೇಶಗಳನ್ನು ಹೊಂದಿದರು.
[2] ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಹಾಗೆಯೇ ಒಂಬತ್ತುವರೆ ಗೋತ್ರಗಳಿಗೆ ಚೀಟುಗಳನ್ನು ಹಾಕಿ ಸೊತ್ತಾಗಿ ಪಾಲು ಹಂಚಿದರು.
[3] ಏಕೆಂದರೆ ಮೋಶೆಯು ಯೊರ್ದನ್ ನದಿ ಆಚೆ ಎರಡೂವರೆ ಗೋತ್ರಗಳಿಗೆ ಸೊತ್ತನ್ನು ಕೊಟ್ಟಿದ್ದನು. ಆದರೆ ಲೇವಿಯರಿಗೆ ಯಾವ ಸೊತ್ತನ್ನೂ ಕೊಡಲಿಲ್ಲ,
[4] ಯೋಸೇಫನ ಮಕ್ಕಳಾದ ಮನಸ್ಸೆಯೂ, ಎಫ್ರಾಯೀಮನೂ ಎರಡು ಗೋತ್ರಗಳಾಗಿದ್ದರು. ಲೇವಿಯರಿಗೆ ದೇಶದಲ್ಲಿ ಪಾಲುಕೊಡಲಿಲ್ಲ. ಆದರೆ ವಾಸಮಾಡುವ ಪಟ್ಟಣಗಳನ್ನೂ, ದನಕುರಿಗಳಿಗೋಸ್ಕರವಾಗಿ ಹುಲ್ಲುಗಾವಲುಗಳನ್ನೂ, ಪ್ರಾಂತಗಳನ್ನೂ ಮಾಡಿಕೊಟ್ಟರು.
[5] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರಮಾಡಿ, ದೇಶವನ್ನು ಹಂಚಿಕೊಡಲಾಯಿತು.
[6] ಯೆಹೂದದ ಗೋತ್ರದವರು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಬಂದರು. ಆಗ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಅವನಿಗೆ, “ಕಾದೇಶ್ ಬರ್ನೇಯದಲ್ಲಿ ಯೆಹೋವ ದೇವರು ನನ್ನನ್ನೂ, ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ.
[7] ದೇಶವನ್ನು ಸಂಚರಿಸಿ ನೋಡಲು ಯೆಹೋವ ದೇವರ ಸೇವಕನಾದ ಮೋಶೆಯು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ ನಾನು ನಾಲ್ವತ್ತು ವರ್ಷ ಪ್ರಾಯದವನಾಗಿದ್ದೆನು. ನನ್ನ ಮನಸ್ಸಿಗೆ ಬಂದಿದ್ದ ವರದಿಯನ್ನು ತಂದು ತಿಳಿಸಿದೆನು.
[8] ಆದರೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದೆನು.
[9] ಆ ದಿವಸದಲ್ಲಿ ಮೋಶೆಯು ನನಗೆ, ‘ನೀನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ನಿನ್ನ ಪಾದ ಮೆಟ್ಟಿದ ದೇಶವು ನಿನಗೂ, ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವುದು,’ ಎಂದು ಆಣೆ ಇಟ್ಟು ಹೇಳಿದನು.
[10] “ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ.
[11] ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ.
[12] ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.
[13] ಆಗ ಯೆಹೋಶುವನು ಯೆಫುನ್ನೆಯ ಮಗ ಕಾಲೇಬನನ್ನು ಆಶೀರ್ವದಿಸಿ, ಅವನಿಗೆ ಹೆಬ್ರೋನನ್ನು ಸೊತ್ತಾಗಿ ಕೊಟ್ಟನು.
[14] ಹೀಗೆಯೇ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ಹೆಬ್ರೋನು ಇಂದಿನವರೆಗೂ ಅವನ ಸೊತ್ತಾಗಿದೆ.
[15] ಹೆಬ್ರೋನಿನ ಮೊದಲಿನ ಹೆಸರು ಕಿರ್ಯತ್ ಅರ್ಬ. “ಅರ್ಬ” ಎಂಬುವವನು ಅನಾಕ್ಯರಲ್ಲಿ ಪ್ರಮುಖನಾಗಿದ್ದನು. ದೇಶವು ಯುದ್ಧವಿಲ್ಲದೆ ಶಾಂತವಾಗಿತ್ತು.