Skip to content
Opens in a new window
Listen to this chapter • 2:01

[1] ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಉಂಟಾದ ಸೊತ್ತಿನ ವಿವರ: ಯೆರಿಕೋವಿನ ಬಳಿಯಲ್ಲಿರುವ ಯೊರ್ದನ್ ನದಿಯಿಂದ ಪೂರ್ವದಲ್ಲಿರುವ ಯೆರಿಕೋವಿನ ಜಲದವರೆಗೂ ಮತ್ತು ಬೇತೇಲಿನ ಬೆಟ್ಟಗಳವರೆಗೂ ಇರುವ ಮರುಭೂಮಿಯ ಮಾರ್ಗವಾಗಿ ಹೋಗಿತ್ತು.

[2] ಬೇತೇಲಿನಿಂದ ಅಂದರೆ ಲೂಜ್ ಅಲ್ಲಿಂದ ಅರ್ಕಿಯ ಮೇರೆಗಳಾದ ಅಟಾರೋತನ್ನು ದಾಟಿ,

[3] ಪಶ್ಚಿಮಕ್ಕೆ ಯಫ್ಲೇಟ್ಯರ ಮೇರೆಗೂ ಕೆಳಗಡೆಯಾದ ಬೇತ್ ಹೋರೋನ್ ಮೇರೆಯವರೆಗೂ ಅಲ್ಲಿಂದ ಗೆಜೆರಿನವರೆಗೂ ಹೋಗಿ ಮೆಡಿಟೆರಿಯನ್ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

[4] ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯೀಮರು ತಮಗೆ ಸೊತ್ತಾಗಿ ತೆಗೆದುಕೊಂಡರು.

[5] ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.

[6] ಅಲ್ಲಿಂದ ಮೆಡಿಟೆರಿಯನ್ ಸಮುದ್ರದ ಪಶ್ಚಿಮ ಮೇರೆಗೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಪೂರ್ವಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಪೂರ್ವದ ಕಡೆಗೆ ಹಾದು ಹೋಗಿತ್ತು.

[7] ಯಾನೋಹದಿಂದ ಅಟಾರೋತ್‌ಗೂ ನಾರಾ ಎಂಬ ಊರುಗಳ ಮೇಲೆ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನ್ ನದಿಗೆ ಮುಗಿಯುವುದು.

[8] ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಮೆಡಿಟೆರೆನಿಯನ್ ಸಮುದ್ರದವರೆಗೆ ಮುಗಿಯುವುದು. ಇದು ಎಫ್ರಾಯೀಮನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರವೇ ದೊರೆತ ಸೊತ್ತು.

[9] ಇದಲ್ಲದೆ ಎಫ್ರಾಯೀಮ್ ಹಾಗೂ ಮನಸ್ಸೆ ಗೋತ್ರದವರ ಮಧ್ಯೆ ಕೊಡಲಾದ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಪ್ರತ್ಯೇಕವಾಗಿ ಕೊಡಲಾಗಿತ್ತು.

[10] ಅವರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ, ಎಫ್ರಾಯೀಮ್ಯರ ಮಧ್ಯದಲ್ಲಿ ಕಾನಾನ್ಯರು ಈವರೆಗೂ ಅವರಲ್ಲಿ ದಾಸತ್ವದಲ್ಲಿದ್ದುಕೊಂಡು ಕೆಲಸಮಾಡುವವರಾಗಿದ್ದಾರೆ.

ಯೆಹೋಶುವ — Chapters