Skip to content
Opens in a new window
Listen to this chapter • 4:06

[1] ಸಮುಯೇಲನು ವೃದ್ಧನಾದಾಗ ತನ್ನ ಪುತ್ರರನ್ನು ಇಸ್ರಾಯೇಲಿಗೆ ನ್ಯಾಯಾಧಿಪತಿಗಳನ್ನಾಗಿ ಮಾಡಿದನು.

[2] ಅವನ ಚೊಚ್ಚಲ ಮಗನ ಹೆಸರು ಯೋಯೇಲ್, ಅವನ ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.

[3] ಆದರೆ ಅವರು ಸಮುಯೇಲನ ಮಾರ್ಗದಲ್ಲಿ ನಡೆಯದೆ, ಅಪ್ರಾಮಾಣಿಕತೆಯಿಂದ ಹಣ ಸಂಪಾದಿಸಿ, ಲಂಚವನ್ನು ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುತ್ತಿದ್ದರು.

[4] ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು, ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು ಅವನಿಗೆ,

[5] “ನೀನು ವೃದ್ಧನಾದೆ, ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವುದಿಲ್ಲ. ಈಗ ಎಲ್ಲ ರಾಷ್ಟ್ರಗಳ ಹಾಗೆ ನಮಗೆ ನ್ಯಾಯತೀರಿಸುವುದಕ್ಕೆ ಒಬ್ಬ ಅರಸನನ್ನು ನೇಮಿಸು,” ಎಂದರು.

[6] “ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು,” ಎಂದು ಅವರು ಹೇಳಿದ್ದು ಸಮುಯೇಲನಿಗೆ ಕೆಟ್ಟದ್ದಾಗಿ ಕಾಣಿಸಿತು. ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.

[7] ಆಗ ಯೆಹೋವ ದೇವರು ಸಮುಯೇಲನಿಗೆ, “ಜನರು ನಿನಗೆ ಹೇಳಿದ್ದೆಲ್ಲದರಲ್ಲಿ ಅವರ ಮಾತು ಕೇಳು. ಏಕೆಂದರೆ ಅವರು ನಿನ್ನನ್ನು ತಿರಸ್ಕಾರ ಮಾಡಿಲ್ಲ. ನಾನು ಅವರನ್ನು ಆಳದ ಹಾಗೆ ನನ್ನನ್ನೇ ತಿರಸ್ಕಾರಮಾಡಿದ್ದಾರೆ.

[8] ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದ ದಿನವು ಮೊದಲುಗೊಂಡು ಈ ದಿನದವರೆಗೂ ಅವರು ನನ್ನನ್ನು ಬಿಟ್ಟು, ಅನ್ಯದೇವರುಗಳನ್ನು ಸೇವಿಸಿ, ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡುತ್ತಾರೆ.

[9] ಈಗ ಅವರ ಮಾತನ್ನು ಕೇಳು. ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು, ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬುದನ್ನು ತಿಳಿಸು,” ಎಂದನು.

[10] ಆಗ ಸಮುಯೇಲನು ಒಬ್ಬ ಅರಸನನ್ನು ಕೇಳಿದ ಜನರಿಗೆ ಯೆಹೋವ ದೇವರ ವಾಕ್ಯಗಳನ್ನೆಲ್ಲಾ ಹೇಳಿದನು.

[11] ಅವನು, “ನಿಮ್ಮನ್ನು ಆಳುವ ಅರಸನ ಅಧಿಕಾರವು ಏನೆಂದರೆ, ಅವನು ನಿಮ್ಮ ಪುತ್ರರನ್ನು ತನ್ನ ರಥಗಳಿಗೋಸ್ಕರ ಸಾರಥಿಗಳನ್ನಾಗಿಯೂ ಕುದುರೆ ಸವಾರರನ್ನಾಗಿಯೂ ತೆಗೆದುಕೊಳ್ಳುವನು. ಕೆಲವರು ಅವನ ರಥಗಳ ಮುಂದೆ ಓಡುವರು.

[12] ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು.

[13] ಇದಲ್ಲದೆ ಅವನು ನಿಮ್ಮ ಪುತ್ರಿಯರನ್ನು ತೈಲಗಾರ್ತಿಗಳಾಗಿಯೂ, ಅಡುಗೆ ಮಾಡುವವರಾಗಿಯೂ ರೊಟ್ಟಿ ಸುಡುವವರಾಗಿಯೂ ಇಟ್ಟುಕೊಳ್ಳುವನು.

[14] ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ, ನಿಮ್ಮ ದ್ರಾಕ್ಷಿತೋಟಗಳನ್ನೂ, ನಿಮ್ಮ ಓಲಿವ್ ಮರದ ತೋಪುಗಳನ್ನೂ ತೆಗೆದುಕೊಂಡು ತನ್ನ ಸೇವಕರಿಗೆ ಕೊಡುವನು.

[15] ನಿಮ್ಮ ಧಾನ್ಯಗಳಲ್ಲಿಯೂ, ನಿಮ್ಮ ದ್ರಾಕ್ಷಿ ಫಲಗಳಲ್ಲಿಯೂ ಹತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ತನ್ನ ಅಧಿಕಾರಿಗಳಿಗೂ, ತನ್ನ ಸೇವಕರಿಗೂ ಕೊಡುವನು.

[16] ನಿಮ್ಮ ದಾಸರನ್ನೂ, ನಿಮ್ಮ ದಾಸಿಯರನ್ನೂ, ನಿಮ್ಮ ಉತ್ತಮ ಪ್ರಾಯಸ್ಥರನ್ನೂ, ನಿಮ್ಮ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕೆ ಇಡುವನು.

[17] ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆಯ್ದುಕೊಳ್ಳುವನು. ನೀವು ಅವನಿಗೆ ದಾಸರಾಗುವಿರಿ.

[18] ನೀವು ನಿಮಗೆ ಆಯ್ದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ, ಆದರೆ ಆ ದಿವಸದಲ್ಲಿ ಯೆಹೋವ ದೇವರು ನಿಮಗೆ ಕಿವಿಗೊಡುವುದಿಲ್ಲ,” ಎಂದನು.

[19] ಆದರೂ ಜನರು ಸಮುಯೇಲನ ಮಾತನ್ನು ಕೇಳಲೊಲ್ಲದೆ, ಅವರು, “ಹಾಗಲ್ಲ, ನಮ್ಮ ಮೇಲೆ ಅರಸನು ಇರಬೇಕು.

[20] ನಾವು ಸಕಲ ರಾಷ್ಟ್ರಗಳ ಹಾಗೆ ಇರಬೇಕು. ನಮ್ಮ ಅರಸನು ನಮಗೆ ನ್ಯಾಯತೀರಿಸುವನು. ಅವನು ನಮ್ಮ ಮುಂದೆ ಹೊರಟು, ನಮ್ಮ ಪರವಾಗಿ ಯುದ್ಧಗಳನ್ನು ನಡೆಸುವನು,” ಎಂದರು.

[21] ಸಮುಯೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಯೆಹೋವ ದೇವರಿಗೆ ಹೇಳಿದನು.

[22] ಯೆಹೋವ ದೇವರು ಸಮುಯೇಲನಿಗೆ, “ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು,” ಎಂದರು. ಆಗ ಸಮುಯೇಲನು ಇಸ್ರಾಯೇಲ್ ಜನರಿಗೆ, “ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ,” ಎಂದನು.

1 ಸಮುಯೇಲ — Chapters