[1] ಸಮುಯೇಲನು ಸೌಲನಿಗೆ, “ಯೆಹೋವ ದೇವರು ತಮ್ಮ ಜನರಾದ ಇಸ್ರಾಯೇಲರ ಮೇಲೆ ನಿನ್ನನ್ನು ಅರಸನಾಗಿರಲು ಅಭಿಷೇಕಿಸಲು ನನ್ನನ್ನು ಕಳುಹಿಸಿದರು. ಈಗ ನೀನು ಯೆಹೋವ ದೇವರ ಮಾತುಗಳನ್ನು ಕೇಳು.
[2] ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿ ತೊಂದರೆಪಡಿಸಿದರು, ಆದ್ದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು.
[3] ಈಗ ನೀನು ಹೋಗಿ ಅಮಾಲೇಕ್ಯರನ್ನು ಹೊಡೆದು, ಅವರಿಗೆ ಉಂಟಾದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿಬಿಟ್ಟು, ಅವರನ್ನು ಕನಿಕರಿಸದೆ ಪುರುಷರನ್ನೂ, ಸ್ತ್ರೀಯರನ್ನೂ, ಚಿಕ್ಕವರನ್ನೂ, ಹಸುಗೂಸುಗಳನ್ನೂ, ದನಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ, ಕತ್ತೆಗಳನ್ನೂ ಕೊಂದುಹಾಕು,’ ” ಎಂಬದು.
[4] ಆಗ ಸೌಲನು ತೆಲಾಯಿಮಿನಲ್ಲಿ ಜನರನ್ನು ಕೂಡಿಸಿ, ಲೆಕ್ಕ ಮಾಡಿದನು. ಇಸ್ರಾಯೇಲರ ಕಾಲಾಳುಗಳು ಎರಡು ಲಕ್ಷ ಜನರೂ, ಯೆಹೂದನ ಮನುಷ್ಯರು ಹತ್ತು ಸಾವಿರ ಜನರೂ ಇದ್ದರು.
[5] ಸೌಲನು ಅಮಾಲೇಕ್ಯರ ಪಟ್ಟಣದವರೆಗೂ ಬಂದು, ತಗ್ಗಿನಲ್ಲಿ ಹೊಂಚಿಹಾಕಿದ್ದನು.
[6] ಕೇನ್ಯರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ, ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ, ನೀವು ಅವರ ಮಧ್ಯದಲ್ಲಿಂದ ಹೊರಟು ಹೋಗಿರಿ,” ಎಂದು ಹೇಳಿದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು.
[7] ಆಗ ಸೌಲನು ಹವೀಲದಿಂದ ಈಜಿಪ್ಟಿನ ಪೂರ್ವದಿಕ್ಕಿನಲ್ಲಿರುವ ಶೂರಿಗೆ ಹೋಗುವ ಮೇರೆಯವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು,
[8] ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು, ಆದರೆ ಸಮಸ್ತ ಜನರನ್ನು ಖಡ್ಗದಿಂದ ಸಂಪೂರ್ಣ ನಾಶಮಾಡಿದನು.
[9] ಸೌಲನೂ, ಅವನ ಜನರೂ ಅಗಾಗನನ್ನೂ ಮೇಲ್ತರವಾದ ಕುರಿಗಳನ್ನೂ ದನಗಳನ್ನೂ ಕುರಿಮರಿಗಳನ್ನೂ, ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದರು. ಆದರೆ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
[10] ಆಗ ಯೆಹೋವ ದೇವರ ವಾಕ್ಯವು ಸಮುಯೇಲನಿಗೆ ಉಂಟಾಗಿ,
[11] “ನಾನು ಸೌಲನನ್ನು ಅರಸನಾಗಿ ಮಾಡಿದ್ದರಿಂದ ದುಃಖಪಡುತ್ತೇನೆ. ಏಕೆಂದರೆ ಅವನು ನನ್ನನ್ನು ಹಿಂಬಾಲಿಸುವುದನ್ನು ಬಿಟ್ಟು, ಹಿಂದಕ್ಕೆ ಹೋದನು; ನನ್ನ ಆಜ್ಞೆಗಳನ್ನು ಈಡೇರಿಸಲಿಲ್ಲ,” ಎಂದರು. ಅದಕ್ಕೆ ಸಮುಯೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವ ದೇವರಿಗೆ ಮೊರೆಯಿಟ್ಟನು.
[12] ಸಮುಯೇಲನು ಉದಯಕಾಲದಲ್ಲೆದ್ದು ಸೌಲನನ್ನು ಎದುರುಗೊಳ್ಳಲು ಹೋದನು. ಆಗ ಅವನಿಗೆ ಹೀಗೆ ಹೇಳಲಾಗಿತ್ತು, “ಸೌಲನು ತನ್ನ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ಕರ್ಮೆಲಿಗೆ ಹೋಗಿದ್ದಾನೆ. ನಂತರ ಅಲ್ಲಿಂದ ಮುಂದೆ ಹೋಗಿ ಗಿಲ್ಗಾಲಿಗೆ ಹೋಗಿದ್ದಾನೆ.”
[13] ಸಮುಯೇಲನು ಸೌಲನ ಬಳಿಗೆ ಬಂದಾಗ, ಸೌಲನು ಅವನಿಗೆ, “ನಿನಗೆ ಯೆಹೋವ ದೇವರ ಆಶೀರ್ವಾದವಾಗಲಿ; ನಾನು ಯೆಹೋವ ದೇವರ ಆಜ್ಞೆಯನ್ನು ಈಡೇರಿಸಿದೆನು,” ಎಂದನು.
[14] ಆಗ ಸಮುಯೇಲನು ಅವನಿಗೆ, “ನನ್ನ ಕಿವಿಗಳಲ್ಲಿ ಬೀಳುವ ಆ ಕುರಿಗಳ ಶಬ್ದವೇನು? ನಾನು ಕೇಳುವ ಪಶುಗಳ ಶಬ್ದವೇನು?” ಎಂದನು.
[15] ಅದಕ್ಕೆ ಸೌಲನು, “ಜನರು ಅಮಾಲೇಕ್ಯರ ಬಳಿಯಿಂದ ತೆಗೆದುಕೊಂಡು ಬಂದವುಗಳು; ಏಕೆಂದರೆ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸುವುದಕ್ಕೋಸ್ಕರ ಮೇಲ್ತರವಾದ ಪಶುಕುರಿಗಳನ್ನು ಉಳಿಸಿಟ್ಟು, ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿಬಿಟ್ಟೆವು,” ಎಂದನು.
[16] ಆಗ ಸಮುಯೇಲನು ಸೌಲನಿಗೆ, “ಅದಿರಲಿ, ಯೆಹೋವ ದೇವರು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು,” ಎಂದನು. ಅದಕ್ಕವನು, “ಹೇಳು,” ಎಂದನು.
[17] ಆಗ ಸಮುಯೇಲನು, “ನೀನು ನಿನ್ನ ದೃಷ್ಟಿಯಲ್ಲಿ ಚಿಕ್ಕವನಾಗಿರುವಾಗಲೇ ಇಸ್ರಾಯೇಲ್ ಗೋತ್ರಗಳ ಮೇಲೆ ಯಜಮಾನನಾಗಿ ನೇಮಕವಾದಿಯಲ್ಲವೆ? ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿ ಅಭಿಷೇಕಿಸಿದರಲ್ಲವೆ?
[18] ಯೆಹೋವ ದೇವರು ನಿನಗೆ, ‘ಹೋಗು ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ, ಅವರು ತೀರಿ ಹೋಗುವವರೆಗೂ ಅವರ ಸಂಗಡ ಯುದ್ಧಮಾಡಬೇಕು,’ ಎಂದು ಆಜ್ಞಾಪಿಸಿದರು.
[19] ಹೀಗಿರುವಾಗ ನೀನು ಏಕೆ ಯೆಹೋವ ದೇವರ ಮಾತಿಗೆ ವಿಧೇಯನಾಗದೆ, ಕೊಳ್ಳೆಯ ಮೇಲೆ ಬಿದ್ದು ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ?” ಎಂದನು.
[20] ಆಗ ಸೌಲನು ಸಮುಯೇಲನಿಗೆ, “ಹೌದು, ನಾನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ಯೆಹೋವ ದೇವರು ನನ್ನನ್ನು ಕಳುಹಿಸಿದ ಮಾರ್ಗವಾಗಿ ಹೋಗಿ, ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು, ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು.
[21] ಆದರೆ ಜನರು ನಿನ್ನ ದೇವರಾದ ಯೆಹೋವ ದೇವರಿಗೆ ಗಿಲ್ಗಾಲಿನಲ್ಲಿ ಬಲಿ ಕೊಡುವುದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣವಾಗಿ ನಾಶಮಾಡಬೇಕೆಂದಿರುವ ದನಕುರಿಗಳಲ್ಲಿ ಉತ್ತಮವಾದವುಗಳನ್ನು ಹಿಡಿದುಕೊಂಡು ಬಂದರು,” ಎಂದನು.
[22] ಅದಕ್ಕೆ ಸಮುಯೇಲನು ಹೇಳಿದ್ದೇನೆಂದರೆ, “ಯೆಹೋವ ದೇವರ ವಾಕ್ಯಕ್ಕೆ ವಿಧೇಯನಾದರೆ, ಯೆಹೋವ ದೇವರಿಗೆ ಆಗುವ ಸಂತೋಷ ದಹನಬಲಿಗಳಲ್ಲಿಯೂ ಯಜ್ಞಗಳಲ್ಲಿಯೂ ಆಗುವುದೋ? ಇಗೋ, ಯಜ್ಞಕ್ಕಿಂತ ವಿಧೇಯತೆಯು, ಟಗರುಗಳ ಕೊಬ್ಬಿಗಿಂತ ಮಾತುಕೇಳುವುದೇ ಉತ್ತಮವಾಗಿರುವುದು.
[23] ಏಕೆಂದರೆ ಪ್ರತಿಭಟಿಸುವುದು ಮಂತ್ರತಂತ್ರಗಳಷ್ಟು ಪಾಪವಾಗಿದೆ. ಹಟಮಾರಿತನವು ದುಷ್ಟತನಕ್ಕೂ ವಿಗ್ರಹಾರಾಧನೆಗೂ ಸಮಾನವಾಗಿದೆ. ನೀನು ಯೆಹೋವ ದೇವರ ವಾಕ್ಯವನ್ನು ಅಲಕ್ಷ್ಯಮಾಡಿದ್ದರಿಂದ ಅವರು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕರಿಸಿಬಿಟ್ಟಿದ್ದಾರೆ.”
[24] ಆಗ ಸೌಲನು ಸಮುಯೇಲನಿಗೆ, “ನಾನು ಯೆಹೋವ ದೇವರ ಆಜ್ಞೆಯನ್ನೂ, ನಿನ್ನ ಮಾತುಗಳನ್ನೂ ಮೀರಿದ್ದರಿಂದ ನಾನು ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
[25] ಆದ್ದರಿಂದ ಈಗ ದಯಮಾಡಿ ನನ್ನ ಪಾಪವನ್ನು ಕ್ಷಮಿಸಿ, ನಾನು ಯೆಹೋವ ದೇವರನ್ನು ಆರಾಧಿಸುವ ಹಾಗೆ ನನ್ನ ಸಂಗಡ ತಿರುಗಿ ಬಾ,” ಎಂದು ಬೇಡಿಕೊಂಡನು.
[26] ಆದರೆ ಸಮುಯೇಲನು ಸೌಲನಿಗೆ, “ನಾನು ನಿನ್ನ ಸಂಗಡ ಹಿಂದಿರುಗಿ ಬರುವುದಿಲ್ಲ. ಏಕೆಂದರೆ ನೀನು ಯೆಹೋವ ದೇವರ ವಾಕ್ಯವನ್ನು ತಿರಸ್ಕರಿಸಿದ್ದೀ. ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿರದ ಹಾಗೆ ತಿರಸ್ಕಾರಮಾಡಿಬಿಟ್ಟರು,” ಎಂದು ಹೇಳಿದನು.
[27] ಸಮುಯೇಲನು ಹೋಗುವುದಕ್ಕೋಸ್ಕರ ತಿರುಗಿಕೊಳ್ಳುವಾಗ ಸೌಲನು ಅವನ ವಸ್ತ್ರದ ಕೊನೆಯನ್ನು ಹಿಡಿದುಕೊಂಡನು. ಆಗ ಅದು ಹರಿದುಹೋಯಿತು.
[28] ಸಮುಯೇಲನು ಅವನಿಗೆ, “ನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಯೆಹೋವ ದೇವರು ಈ ಹೊತ್ತು ಕಿತ್ತು, ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟರು.
[29] ಇಸ್ರಾಯೇಲಿನ ಪ್ರತಾಪರು ಸುಳ್ಳು ಹೇಳುವವರಲ್ಲ, ಮಾತನ್ನು ಹಿಂತೆಗೆದುಕೊಳ್ಳುವವರಲ್ಲ. ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದನು.
[30] ಅದಕ್ಕವನು, “ನಾನು ಪಾಪವನ್ನು ಮಾಡಿದೆನು. ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ, ಇಸ್ರಾಯೇಲರ ಮುಂದೆಯೂ ನನ್ನನ್ನು ಘನಪಡಿಸು. ನಾನು ನಿನ್ನ ದೇವರಾದ ಯೆಹೋವ ದೇವರಿಗೆ ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ,” ಎಂದನು.
[31] ಹಾಗೆಯೇ ಸಮುಯೇಲನು ತಿರುಗಿ ಸೌಲನ ಹಿಂದೆ ಹೋದನು. ಸೌಲನು ಯೆಹೋವ ದೇವರನ್ನು ಆರಾಧಿಸಿದನು.
[32] ಸಮುಯೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ,” ಎಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ, “ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತು,” ಎಂದುಕೊಂಡನು.
[33] ಆದರೆ ಸಮುಯೇಲನು ಅವನಿಗೆ, “ನಿನ್ನ ಖಡ್ಗವು ಹೇಗೆ ಸ್ತ್ರೀಯರನ್ನು ಮಕ್ಕಳಿಲ್ಲದವರಾಗಿ ಮಾಡಿತೋ, ಹಾಗೆಯೇ ಸ್ತ್ರೀಯರಲ್ಲಿ ನಿನ್ನ ತಾಯಿಯು ಮಕ್ಕಳಿಲ್ಲದವಳಾಗುವಳು,” ಎಂದು ಹೇಳಿ, ಸಮುಯೇಲನು ಗಿಲ್ಗಾಲಿನಲ್ಲಿ ಯೆಹೋವ ದೇವರ ಮುಂದೆ ಅಗಾಗನಿಗೆ ಮರಣದಂಡನೆ ವಿಧಿಸಿದನು.
[34] ಸಮುಯೇಲನು ರಾಮಕ್ಕೆ ಹೋದನು; ಆದರೆ ಸೌಲನು ತನ್ನ ಊರಾದ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು.
[35] ಸಮುಯೇಲನು ತಾನು ಸಾಯುವ ದಿವಸದವರೆಗೂ ಸೌಲನನ್ನು ತಿರುಗಿ ಕಾಣಲು ಬರಲಿಲ್ಲ. ಸಮುಯೇಲನು ಅವನಿಗೋಸ್ಕರ ದುಃಖಪಟ್ಟನು. ಇದಲ್ಲದೆ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಮಾಡಿದ್ದಕ್ಕೋಸ್ಕರ ಯೆಹೋವ ದೇವರು ದುಃಖಪಟ್ಟರು.