Skip to content
Opens in a new window
Listen to this chapter • 3:10

[1] ಆದರೆ ದಾವೀದನು ತನ್ನ ಹೃದಯದಲ್ಲಿ, “ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಸಾಯುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು,” ಎಂದುಕೊಂಡನು.

[2] ಆದ್ದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರುನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕನ ಮಗ ಆಕೀಷನ ಬಳಿಗೆ ಹೋದನು.

[3] ದಾವೀದನು ಗತ್ ಊರಿನಲ್ಲಿ ಆಕೀಷನ ಬಳಿಯಲ್ಲಿ ತಾನೂ, ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ, ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾದ ಅಹೀನೋವಮಳು, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಸಹಿತವಾಗಿಯೂ ಇದ್ದರು.

[4] ದಾವೀದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲಾಯಿತು. ಆದ್ದರಿಂದ ಅವನು ಆ ತರುವಾಯ ದಾವೀದನನ್ನು ಹುಡುಕಲಿಲ್ಲ.

[5] ದಾವೀದನು ಆಕೀಷನಿಗೆ, “ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದರೆ, ಗ್ರಾಮಾಂತರಗಳಲ್ಲಿ ನಾನು ಇರುವುದಕ್ಕೆ ಒಂದು ಸ್ಥಳ ನನಗೆ ಕೊಡು. ನಿನ್ನ ದಾಸನು ಏಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು?” ಎಂದನು.

[6] ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್ ಊರನ್ನು ಅವನಿಗೆ ಕೊಟ್ಟನು. ಆದ್ದರಿಂದ ಚಿಕ್ಲಗ್ ಇಂದಿನವರೆಗೂ ಯೆಹೂದದ ಅರಸರಿಗೆ ಸೇರಿದೆ.

[7] ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳು ವಾಸಿಸಿದ್ದನು.

[8] ದಾವೀದನೂ, ಅವನ ಜನರೂ ಶೂರಿಗೆ ಹೋಗುವ ಮೇರೆಯಿಂದ ಈಜಿಪ್ಟಿನವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

[9] ಆಗ ದಾವೀದನು ಪುರುಷರನ್ನಾದರೂ, ಸ್ತ್ರೀಯರನ್ನಾದರೂ ಉಳಿಸದೆ, ಆ ಸೀಮೆಯನ್ನು ಹೊಡೆದು, ಕುರಿಪಶುಗಳನ್ನೂ, ಕತ್ತೆಗಳನ್ನೂ, ಒಂಟೆಗಳನ್ನೂ, ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿಬಂದನು.

[10] ಆಗ ಆಕೀಷನು, “ಈ ಹೊತ್ತು ಎಲ್ಲಿ ಸುಲಿದುಕೊಂಡಿರಿ?” ಎಂದಾಗ ದಾವೀದನು, “ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ, ಯೆರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ, ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು,” ಎಂದನು.

[11] ದಾವೀದನು ಗತ್ ಪಟ್ಟಣಕ್ಕೆ ಒಬ್ಬ ಪುರುಷನನ್ನಾದರೂ ಸ್ತ್ರೀಯನನ್ನಾದರೂ ಜೀವಂತವಾಗಿ ತರಲಿಲ್ಲ. ಏಕೆಂದರೆ ಯಾರಾದರೂ ಹೋಗಿ ರಾಜನಾದ ಆಕೀಷನಿಗೆ ಸತ್ಯವನ್ನು ತಿಳಿಸಬಹುದೆಂದು ದಾವೀದನು ಯೋಚಿಸಿದನು. ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.

[12] ಆಕೀಷನು ದಾವೀದನನ್ನು ನಂಬಿ, “ಇವನು ತನ್ನ ಜನರಾದ ಇಸ್ರಾಯೇಲರಿಗೆ ಅಸಹ್ಯವಾದನು, ಆದ್ದರಿಂದ ಇವನು ಎಂದೆಂದಿಗೂ ನನ್ನ ದಾಸನಾಗಿರುವನು,” ಎಂದನು.

1 ಸಮುಯೇಲ — Chapters