Skip to content
Opens in a new window
Listen to this chapter • 6:03

[1] ಸೌಲನು ತನ್ನ ಮಗ ಯೋನಾತಾನ ಮತ್ತು ತನ್ನ ಸಮಸ್ತ ಸೇವಕರಿಗೆ ದಾವೀದನನ್ನು ಕೊಲ್ಲಬೇಕೆಂದು ಹೇಳಿದನು. ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.

[2] ಯೋನಾತಾನನು ದಾವೀದನನ್ನು, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ. ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆಯಾಗಿದ್ದು, ಮರೆಯಾದ ಸ್ಥಳಗಳಲ್ಲಿ ಅಡಗಿಕೋ.

[3] ಆಗ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು, ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿ, ನಾನು ನೋಡುವುದನ್ನು ಹೊರಟುಬಂದು ನೀನು ಇರುವ ಹೊಲದಲ್ಲಿ ನಿನಗೆ ತಿಳಿಸುವೆನು,” ಎಂದನು.

[4] ಹಾಗೆಯೇ ಯೋನಾತಾನನು ತನ್ನ ತಂದೆ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೆಯದನ್ನು ಮಾತನಾಡಿ ಅವನಿಗೆ, “ಅರಸನು ತನ್ನ ಸೇವಕನಾದ ದಾವೀದನಿಗೆ ದ್ರೋಹಮಾಡದೆ ಇರಲಿ. ಏಕೆಂದರೆ ಅವನು ನಿನಗೆ ದ್ರೋಹಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.

[5] ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಫಿಲಿಷ್ಟಿಯನನ್ನು ಹೊಡೆದನು. ಯೆಹೋವ ದೇವರು ಸಮಸ್ತ ಇಸ್ರಾಯೇಲರಿಗೋಸ್ಕರ ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ನೀನೂ ಕಂಡು ಸಂತೋಷಪಟ್ಟೆ. ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರ್ದೋಷಿಯ ರಕ್ತಕ್ಕೆ ವಿರೋಧವಾಗಿ ಅಪರಾಧವನ್ನು ಮಾಡುವುದೇಕೆ?” ಎಂದನು.

[6] ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.

[7] ಆಗ ಯೋನಾತಾನನು ದಾವೀದನನ್ನು ಕರೆದು, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ, ದಾವೀದನನ್ನು ಸೌಲನ ಬಳಿಗೆ ಕರೆತಂದನು. ಅವನು ಮುಂಚಿನ ಹಾಗೆಯೇ ಸೌಲನ ಬಳಿಯಲ್ಲಿ ಇದ್ದನು.

[8] ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.

[9] ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು.

[10] ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.

[11] ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ,” ಎಂದು ಹೇಳಿ

[12] ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು.

[13] ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.

[14] ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, “ಅವನು ಖಾಯಿಲೆಯಲ್ಲಿದ್ದಾನೆ,” ಎಂದಳು.

[15] ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, “ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದನು.

[16] ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.

[17] ಆಗ ಸೌಲನು ಮೀಕಲಳಿಗೆ, “ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ,” ಎಂದನು. ಆಗ ಮೀಕಲಳು ಸೌಲನಿಗೆ ಉತ್ತರವಾಗಿ, “ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು,” ಎಂದಳು.

[18] ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.

[19] ಆಗ, “ದಾವೀದನು ರಾಮದ ನಯೋತಿನಲ್ಲಿ ಇದ್ದಾನೆ,” ಎಂದು ಸೌಲನಿಗೆ ಗೊತ್ತಾಯಿತು.

[20] ಆದ್ದರಿಂದ ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದನು. ಪ್ರವಾದಿಗಳ ಗುಂಪು ಪ್ರವಾದಿಸುವುದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುಯೇಲನು ನಿಂತಿರುವುದನ್ನೂ ಕಂಡಾಗ, ದೇವರ ಆತ್ಮ ಸೌಲನ ದೂತರ ಮೇಲೆ ಬಂದಿತು, ಅವರೂ ಸಹ ಪ್ರವಾದಿಸಿದರು.

[21] ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ, ಅವನು ಬೇರೆ ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು.

[22] ಆಗ ಸೌಲನು ತಾನೇ ರಾಮಕ್ಕೆ ಹೋದನು. ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, ಸಮುಯೇಲನೂ ದಾವೀದನೂ ಎಲ್ಲಿದ್ದಾರೆ ಎಂದು ಕೇಳಿದನು. ಆಗ ಒಬ್ಬನು, “ಅವರು ರಾಮದ ನಯೋತಿನಲ್ಲಿದ್ದಾರೆ,” ಎಂದನು.

[23] ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು.

[24] ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ, ತಾನೂ ಹಾಗೆಯೇ ಸಮುಯೇಲನ ಮುಂದೆ ಪ್ರವಾದಿಸಿದನು. ಆ ದಿನ ಹಗಲೆಲ್ಲವೂ, ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದ್ದರಿಂದ, “ಸೌಲನು ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ?” ಎಂಬ ಮಾತು ಪ್ರಚಲಿತವಾಯಿತು.

1 ಸಮುಯೇಲ — Chapters