[1] ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ಮುತ್ತಿಗೆಹಾಕಿದನು. ಆಗ ಯಾಬೇಷಿನ ಜನರೆಲ್ಲರು ನಾಹಾಷನಿಗೆ, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿದರೆ, ನಾವು ನಿನಗೆ ಅಧೀನರಾಗಿರುವೆವು,” ಎಂದರು.
[2] ಅಮ್ಮೋನ್ಯನಾದ ನಾಹಾಷನು ಅವರಿಗೆ, “ಇಸ್ರಾಯೇಲರಿಗೆ ಅವಮಾನಪಡಿಸುವುದಕ್ಕಾಗಿ ನಿಮ್ಮೆಲ್ಲರ ಬಲಗಣ್ಣುಗಳನ್ನು ಕಿತ್ತು ಹಾಕುವ ಒಂದೇ ನಿಬಂಧನೆಯಿಂದ, ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ,” ಎಂದನು.
[3] ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ, “ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಅವಕಾಶವನ್ನು ಕೊಡು. ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲದೆ ಹೋದರೆ, ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು,” ಎಂದರು.
[4] ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರಿಗೆ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಸ್ವರವನ್ನೆತ್ತಿ ಅತ್ತರು.
[5] ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು, “ಜನರು ಅಳುವುದೇಕೆ?” ಎಂದು ಕೇಳಿದನು. ಅವರು ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು.
[6] ಸೌಲನು ಈ ಮಾತುಗಳನ್ನು ಕೇಳಿದಾಗ, ದೇವರ ಆತ್ಮವು ಬಹಳ ಸಾಮರ್ಥ್ಯದಿಂದ ಅವನ ಮೇಲೆ ಬಂದು, ಅವನು ಬಹು ಕೋಪೋದ್ರೇಕಗೊಂಡನು. ಅನಂತರ ಅವನು ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು,
[7] ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ, ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿ, “ಯಾರು ಸೌಲ ಮತ್ತು ಸಮುಯೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದನು. ಯೆಹೋವ ದೇವರಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ, ಅವರು ಒಬ್ಬ ಮನುಷ್ಯನಂತೆ ಹೊರಟು ಬಂದರು.
[8] ಅವನು ಅವರನ್ನು ಬೆಜೆಕಿನಲ್ಲಿ ಎಣಿಸಿದಾಗ, ಇಸ್ರಾಯೇಲರು ಮೂರು ಲಕ್ಷ ಜನರೂ, ಯೆಹೂದ್ಯರಲ್ಲಿ ಮೂವತ್ತು ಸಾವಿರ ಜನರೂ ಆಗಿದ್ದರು.
[9] ಆಗ ಅವರು ಬಂದ ದೂತರಿಗೆ, “ನೀವು ಗಿಲ್ಯಾದಿನಲ್ಲಿರುವ ಯಾಬೇಷಿನ ಜನರಿಗೆ, ‘ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವುದು,’ ಎಂದು ಹೇಳಿರಿ,” ಎಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ, ಅವರು ಸಂತೋಷಪಟ್ಟರು.
[10] ತರುವಾಯ ಯಾಬೇಷಿನ ಜನರು ನಹಾಷನಿಗೆ, “ನಾಳೆ ನಿನ್ನ ಬಳಿಗೆ ಹೊರಟು ಬರುವೆವು; ಆಗ ನೀನು ನಿನಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡು,” ಎಂದರು.
[11] ಮಾರನೆಯ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ, ಬೆಳಗಿನ ಜಾವದಲ್ಲಿ ಪಾಳೆಯದಲ್ಲಿ ಬಂದು, ಬಿಸಿಲೇರುವವರೆಗೆ ಅಮ್ಮೋನಿಯರನ್ನು ಸಂಹರಿಸಿದನು. ಉಳಿದವರು ಚದರಿಹೋದರು. ಅವರಲ್ಲಿ ಒಬ್ಬರು ಕೂಡ ಇರಲಿಲ್ಲ.
[12] ಆಗ ಜನರು ಸಮುಯೇಲನಿಗೆ, “ಸೌಲನು ನಮ್ಮ ಮೇಲೆ ಆಳುವನೋ ಎಂದು ಹೇಳಿದವರ‍್ಯಾರು? ಆ ಮನುಷ್ಯರನ್ನು ನಮಗೆ ಒಪ್ಪಿಸಿರಿ, ಅವರನ್ನು ಕೊಂದು ಹಾಕುತ್ತೇವೆ,” ಎಂದರು.
[13] ಆಗ ಸೌಲನು, “ಯೆಹೋವ ದೇವರು ಈ ದಿವಸ ಇಸ್ರಾಯೇಲಿನಲ್ಲಿ ರಕ್ಷಣೆಯನ್ನು ಉಂಟುಮಾಡಿದ್ದರಿಂದ, ಈ ಹೊತ್ತು ಯಾರನ್ನೂ ಕೊಲ್ಲಬಾರದು,” ಎಂದನು.
[14] ಆಗ ಸಮುಯೇಲನು ಜನರಿಗೆ, “ನಾವು ಗಿಲ್ಗಾಲಿಗೆ ಹೋಗಿ, ಅಲ್ಲಿ ರಾಜ್ಯತ್ವವನ್ನು ದೃಢೀಕರಿಸೋಣ ಬನ್ನಿರಿ,” ಎಂದನು.
[15] ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ, ಆ ಸ್ಥಳದಲ್ಲಿ ಯೆಹೋವ ದೇವರ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ, ಯೆಹೋವ ದೇವರಿಗೆ ಸಮಾಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲರೂ ಬಹಳವಾಗಿ ಸಂತೋಷಪಟ್ಟರು.