Skip to content
Opens in a new window
Listen to this chapter • 5:39

[1] ಯೆಹೋವ ದೇವರ ಮಂಜೂಷವು ಫಿಲಿಷ್ಟಿಯರ ಸೀಮೆಯಲ್ಲಿ ಏಳು ತಿಂಗಳು ಇದ್ದ ತರುವಾಯ

[2] ಫಿಲಿಷ್ಟಿಯರು ಯಾಜಕರನ್ನೂ ಕಣಿಹೇಳುವವರನ್ನೂ ಕರೆದು, “ಯೆಹೋವ ದೇವರ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವುದು ನಮಗೆ ತಿಳಿಸಿರಿ,” ಎಂದರು.

[3] ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು,” ಎಂದರು.

[4] ಆಗ ಅವರು, “ದೋಷಪರಿಹಾರ ಕಾಣಿಕೆಗಾಗಿ ನಾವು ಅದರ ಸಂಗಡ ಕಳುಹಿಸತಕ್ಕದ್ದೇನು?” ಎಂದರು. ಅದಕ್ಕವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವುದರಿಂದ ಫಿಲಿಷ್ಟಿಯರ ಅಧಿಪತಿಗಳ ಸಂಖ್ಯೆಗೆ ಸರಿಯಾಗಿ ಒಬ್ಬೊಬ್ಬರಿಗೆ ಬಂಗಾರದ ಐದು ಗಡ್ಡೆಗಳನ್ನು ಮತ್ತು ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ.

[5] ಏಕೆಂದರೆ ನಿಮ್ಮೆಲ್ಲರ ನಾಶಕ್ಕೆ ಕಾರಣವಾದ ಈ ಗಡ್ಡೆಗಳ ಹಾಗು ಇಲಿಗಳ ಸ್ವರೂಪಗಳನ್ನು ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಅವರು ನಿಮ್ಮ ಮೇಲೆಯೂ, ನಿಮ್ಮ ದೇವರುಗಳ ಮೇಲೆಯೂ, ನಿಮ್ಮ ಭೂಮಿಯ ಮೇಲೆಯೂ ಇರುವ ತಮ್ಮ ಕೈಯನ್ನು ತೆಗೆದು ಹಗುರಮಾಡುವರು.

[6] ಈಜಿಪ್ಟಿನವರೂ, ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ, ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವುದೇನು? ದೇವರು ಅವರ ಮಧ್ಯದಲ್ಲಿ ಆಶ್ಚರ್ಯಕರವಾದ ಕ್ರಿಯೆಗಳನ್ನು ನಡಿಸಿದಾಗ, ಅವರು ಇಸ್ರಾಯೇಲರನ್ನು ಅವರು ಹೋಗುವಹಾಗೆ ಕಳುಹಿಸಲಿಲ್ಲವೋ?

[7] “ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ, ನೊಗವನ್ನು ಹಾಕದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು, ಅವುಗಳನ್ನು ಬಂಡಿಗೆ ಕಟ್ಟಿ, ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು,

[8] ಯೆಹೋವ ದೇವರ ಮಂಜೂಷವನ್ನು ಬಂಡಿಯ ಮೇಲೆ ಇಟ್ಟು, ನೀವು ಕಳುಹಿಸಿಕೊಡುವ ನಿಮ್ಮ ದೋಷಪರಿಹಾರ ಕಾಣಿಕೆಯ ಬಂಗಾರದ ವಸ್ತುಗಳನ್ನು ಅದರ ಪಕ್ಕದಲ್ಲಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ, ಅದು ಹೋಗುವಹಾಗೆ ಕಳುಹಿಸಿರಿ.

[9] ಆಗ ನೋಡಿರಿ, ಅದು ತನ್ನ ಮೇರೆಯಾದ ಬೇತ್ ಷೆಮೆಷ್ ಎಂಬ ಮಾರ್ಗವನ್ನು ಹಿಡಿದು ಹೋದರೆ, ಯೆಹೋವ ದೇವರು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾರೆ, ಇಲ್ಲದೆ ಹೋದರೆ ಅವರ ಹಸ್ತವು ನಮ್ಮನ್ನು ಮುಟ್ಟಲಿಲ್ಲ, ಅದು ತಾನಾಗಿಯೇ ನಮಗೆ ಆಯಿತೆಂದು ತಿಳಿದುಕೊಳ್ಳಿರಿ,” ಎಂದರು.

[10] ಅವರು ಆ ಪ್ರಕಾರವೇ ಎರಡು ಹಾಲು ಕರೆಯುವ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು

[11] ಯೆಹೋವ ದೇವರ ಮಂಜೂಷವನ್ನೂ, ಬಂಗಾರದ ಇಲಿಗಳನ್ನೂ, ತಮ್ಮ ಗಡ್ಡೆರೋಗದ ರೂಪಗಳನ್ನೂ ಇಟ್ಟಿರುವ ಚಿಕ್ಕ ಪೆಟ್ಟಿಗೆಯನ್ನೂ ಆ ಬಂಡಿಯ ಮೇಲಿಟ್ಟರು.

[12] ಆಗ ಹಸುಗಳು ಕೂಗುತ್ತಾ ಬೇತ್ ಷೆಮೆಷ್ ಕಡೆಗೆ ಹೋಗುವ ಮಾರ್ಗವನ್ನು ಹಿಡಿದು, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ ಹೆದ್ದಾರಿಯಲ್ಲಿ ಹೋದವು. ಫಿಲಿಷ್ಟಿಯರ ಅಧಿಪತಿಗಳು ಬೇತ್ ಷೆಮೆಷ್ ಊರಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.

[13] ಬೇತ್ ಷೆಮೆಷ್ ಊರಿನವರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು, ಅದನ್ನು ಕಂಡದ್ದಕ್ಕೆ ಸಂತೋಷಪಟ್ಟರು.

[14] ಆ ಬಂಡಿಯು ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು. ಅಲ್ಲಿ ಒಂದು ದೊಡ್ಡ ಬಂಡೆ ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಹಸುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಿದರು.

[15] ಲೇವಿಯರು ಯೆಹೋವ ದೇವರ ಮಂಜೂಷವನ್ನೂ, ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳಿದ್ದ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ, ಆ ದೊಡ್ಡ ಬಂಡೆಯ ಮೇಲಿಟ್ಟುಕೊಂಡರು. ಬೇತ್ ಷೆಮೆಷ್ ಊರಿನವರು ಆ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸಮರ್ಪಣೆಗಳನ್ನೂ ಅರ್ಪಿಸಿದರು.

[16] ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ಕಂಡು, ಅದೇ ದಿನದಲ್ಲಿ ತಿರುಗಿ ಎಕ್ರೋನಿಗೆ ಹೋದರು.

[17] ಫಿಲಿಷ್ಟಿಯರು ದೋಷಪರಿಹಾರ ಕಾಣಿಕೆಗಾಗಿ, ಗಡ್ಡೆರೋಗದ ಬಂಗಾರ ಸ್ವರೂಪಗಳನ್ನು ಅಷ್ಡೋದಿನಿಂದ ಒಂದೂ, ಗಾಜನಿಂದ ಒಂದೂ, ಅಷ್ಕೆಲೋನದಿಂದ ಒಂದೂ, ಗತ್‌ನಿಂದ ಒಂದೂ, ಎಕ್ರೋನಿನಿಂದ ಒಂದೂ ಯೆಹೋವ ದೇವರಿಗೆ ಅರ್ಪಿಸಿದರು.

[18] ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ ಲೆಕ್ಕಕ್ಕೆ ಸರಿಯಾಗಿದ್ದವು. ಯೆಹೋವ ದೇವರ ಮಂಜೂಷವನ್ನಿಟ್ಟ ದೊಡ್ಡ ಬಂಡೆಯು ಇಂದಿನವರೆಗೂ ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಸಾಕ್ಷಿಯಾಗಿದೆ.

[19] ಬೇತ್ ಷೆಮೆಷ್ ಊರಿನ ಜನರು ಯೆಹೋವ ದೇವರ ಮಂಜೂಷದೊಳಗೆ ಇಣಿಕಿ ನೋಡಿದ್ದರಿಂದ, ಯೆಹೋವ ದೇವರು ಅವರೊಳಗೆ ಎಪ್ಪತ್ತು ಮಂದಿಯನ್ನು ಕಠಿಣವಾಗಿ ದಂಡಿಸಿದರು.

[20] ಯೆಹೋವ ದೇವರು ತಮ್ಮಲ್ಲಿ ದೊಡ್ಡ ನಾಶನಮಾಡಿದ್ದರಿಂದ, ಬೇತ್ ಷೆಮೆಷ್ ಊರಿನವರು ದುಃಖಪಟ್ಟು, “ಈ ಪರಿಶುದ್ಧ ದೇವರಾದ ಯೆಹೋವ ದೇವರ ಮುಂದೆ ನಿಲ್ಲತಕ್ಕವನ್ಯಾರು? ಇಲ್ಲಿಂದ ಮಂಜೂಷವು ಎಲ್ಲಿಗೆ ಹೋಗುವುದು?” ಎಂದು ಹೇಳಿದರು.

[21] ಅವರು ಕಿರ್ಯತ್ ಯಾರೀಮಿನ ನಿವಾಸಿಗಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವ ದೇವರ ಮಂಜೂಷವನ್ನು ತಿರುಗಿ ಕಳುಹಿಸಿದ್ದಾರೆ, ನೀವು ಬಂದು ಅದನ್ನು ನಿಮ್ಮ ಬಳಿಗೆ ತೆಗೆದುಕೊಂಡು ಹೋಗಿರಿ,” ಎಂದು ಹೇಳಿದರು.

1 ಸಮುಯೇಲ — Chapters