[1] ಆಗ ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರುಗಿ ಬಂದಾಗ, “ದಾವೀದನು ಏನ್ಗೆದಿ ಮರುಭೂಮಿಯಲ್ಲಿ ಇದ್ದಾನೆ,” ಎಂದು ಅವನಿಗೆ ತಿಳಿದುಬಂದಿತು.
[2] ಆಗ ಸೌಲನು ಸಮಸ್ತ ಇಸ್ರಾಯೇಲಿನಲ್ಲಿ ಶ್ರೇಷ್ಠರಾದ ಮೂರು ಸಾವಿರ ಸೈನಿಕರನ್ನು ತೆಗೆದುಕೊಂಡು ದಾವೀದನನ್ನೂ, ಅವನ ಜನರನ್ನೂ ಹುಡುಕಲು ಕಾಡುಮೇಕೆಗಳಿರುವ ಬಂಡೆಗಳಿಗೆ ಹೋದನು.
[3] ಸೌಲನು ಮಾರ್ಗದಲ್ಲಿ ಕುರಿಹಟ್ಟಿಗಳು ಇರುವ ಗವಿಯ ಬಳಿಗೆ ಬಂದು, ಅದರಲ್ಲಿ ಅವನು ಶೌಚಕ್ಕಾಗಿ ಹೋದನು. ಆದರೆ ದಾವೀದನೂ, ಅವನ ಜನರೂ ಅದೇ ಗವಿಯ ಹಿಂದೆ ಅಡಗಿಕೊಂಡಿದ್ದರು.
[4] ಆಗ ದಾವೀದನ ಜನರು ಅವನಿಗೆ, “ ‘ನಾನು ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು. ಆಗ ನೀನು ನಿನ್ನ ಇಷ್ಟಾನುಸಾರ ಅವನಿಗೆ ಮಾಡಬಹುದು,’ ಎಂದು ಯೆಹೋವ ದೇವರು ನಿನಗೆ ಹೇಳಿದ ದಿನವು ಇದೇ,” ಎಂದರು. ಆಗ ದಾವೀದನು ಎದ್ದು ಹೋಗಿ ರಹಸ್ಯವಾಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
[5] ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು.
[6] ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು.
[7] ಹೀಗೆಯೇ ದಾವೀದನು ತನ್ನ ಜನರನ್ನು ಸೌಲನ ಮೇಲೆ ಬೀಳಗೊಡದೆ, ಈ ಮಾತುಗಳಿಂದ ಅವರನ್ನು ನಿಲ್ಲಿಸಿದನು. ಸೌಲನು ಎದ್ದು ಗವಿಯನ್ನು ಬಿಟ್ಟು, ಹೊರಗೆ ನಡೆದು ಹೋದನು.
[8] ತರುವಾಯ ದಾವೀದನು ಎದ್ದು ಗವಿಯಿಂದ ಹೊರಗೆ ಬಂದು ಸೌಲನಿಗೆ, “ಅರಸನೇ, ನನ್ನ ಒಡೆಯನೇ,” ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ, ದಾವೀದನು ನೆಲದವರೆಗೆ ಬಗ್ಗಿ ವಂದಿಸಿದನು.
[9] ಸೌಲನಿಗೆ ದಾವೀದನು, “ಇಗೋ, ದಾವೀದನು ನಿನಗೆ ಕೇಡು ಮಾಡಲು ಹುಡುಕುತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಏಕೆ ಕೇಳುತ್ತಿದ್ದೀ?
[10] ಯೆಹೋವ ದೇವರು ಈ ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರೆಂಬುದನ್ನು ಈ ದಿನ ನಿನ್ನ ಕಣ್ಣುಗಳು ಕಂಡವು. ಕೆಲವರು ನಿನ್ನನ್ನು ಕೊಂದುಹಾಕಲು ನನಗೆ ಒತ್ತಾಯಮಾಡಿದರು. ಆದರೆ ನಾನು ಅವರಿಗೆ, ‘ಅರಸನು ಯೆಹೋವ ದೇವರ ಅಭಿಷಿಕ್ತನು. ಆದುದರಿಂದ ನಾನು ನನ್ನ ಒಡೆಯನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆ.
[11] ಇದಲ್ಲದೆ ನನ್ನ ತಂದೆಯೇ, ಇಲ್ಲಿ ನೋಡು! ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ತುಂಡನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ, ನಿನ್ನ ನಿಲುವಂಗಿಯ ಅಂಚನ್ನು ಮಾತ್ರ ಕತ್ತರಿಸಿಕೊಂಡದ್ದರಿಂದ, ನನ್ನಲ್ಲಿ ಕೆಟ್ಟತನವೂ, ದ್ರೋಹವೂ ಇಲ್ಲವೆಂದು ಇದು ಸೂಚಿಸುತ್ತಿದೆ; ನಾನು ನಿನಗೆ ವಿರೋಧವಾಗಿ ತಪ್ಪುಮಾಡಲಿಲ್ಲವೆಂದು ತಿಳಿದುಕೋ. ಹೀಗಿದ್ದರೂ, ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
[12] ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ.
[13] ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ, ‘ದುಷ್ಟರಿಂದ ದುಷ್ಟತ್ವವು ಹುಟ್ಟುವುದು’ ಆದರೂ ನಾನು ನಿನಗೆ ವಿರೋಧವಾಗಿ ನನ್ನ ಕೈ ಮುಟ್ಟುವುದಿಲ್ಲ.
[14] “ಇಸ್ರಾಯೇಲಿನ ಅರಸನು ಯಾರನ್ನು ಹಿಂದಟ್ಟಿ ಹೊರಟನು? ಯಾರನ್ನು ಹಿಂದಟ್ಟುತ್ತೀ? ಸತ್ತ ನಾಯಿಯನ್ನೇ? ಒಂದು ನೊಣವನ್ನೇ?
[15] ಯೆಹೋವ ದೇವರು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ, ನನ್ನ ಪರವಾಗಿ ವಾದಿಸಿ, ನನ್ನನ್ನು ನಿನ್ನ ಕೈಯಿಂದ ತಪ್ಪಿಸಿಬಿಡಲಿ,” ಎಂದನು.
[16] ದಾವೀದನ ಮಾತುಗಳು ಮುಗಿದ ನಂತರ, ಸೌಲನು ದಾವೀದನಿಗೆ, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಎಂದು ಗಟ್ಟಿಯಾಗಿ ಅತ್ತನು.
[17] ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನು. ನಾನು ನಿನಗೆ ಕೇಡನ್ನು ಮಾಡಿದರೂ, ನೀನು ನನಗೆ ಒಳ್ಳೆಯದನ್ನು ಮಾಡಿದೆ.
[18] ಯೆಹೋವ ದೇವರು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಾಗ, ನೀನು ನನ್ನನ್ನು ಕೊಂದುಹಾಕದೆ ಇದ್ದುದರಿಂದ, ನೀನು ನನಗೆ ಉಪಕಾರ ಮಾಡಿದ್ದನ್ನು ಈ ಹೊತ್ತು ತೋರಿಸಿದೆ.
[19] ಏಕೆಂದರೆ ಯಾವನಾದರೂ ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನನ್ನು ಸುರಕ್ಷಿತನಾಗಿ ಬಿಟ್ಟುಬಿಡುವನೋ? ಈ ಹೊತ್ತು ನೀನು ನನಗೆ ಒಳ್ಳೆಯದನ್ನು ಮಾಡಿದ್ದರಿಂದ ಯೆಹೋವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ.
[20] ಈಗ ಇಗೋ, ನೀನು ನಿಶ್ಚಯವಾಗಿ ಅರಸನಾಗುವೆ ಎಂದೂ, ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರವಾಗುವುದೆಂದೂ ನಾನು ಚೆನ್ನಾಗಿ ಬಲ್ಲೆನು.
[21] ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.
[22] ಹಾಗೆಯೇ ದಾವೀದನು ಸೌಲನಿಗೆ ಪ್ರಮಾಣ ಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಮನುಷ್ಯರೂ ಆಶ್ರಯಗಿರಿಗೆ ಏರಿಹೋದರು.