Skip to content
Opens in a new window
Listen to this chapter • 4:45

[1] ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು.

[2] ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ನೋಡುವುದಕ್ಕಾಗದಂತೆ ಅವನ ಕಣ್ಣುಗಳು ಮಬ್ಬಾಗುತ್ತಿದ್ದವು.

[3] ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು.

[4] ಆಗ ಯೆಹೋವ ದೇವರು ಸಮುಯೇಲನನ್ನು ಕರೆದರು. ಅದಕ್ಕವನು, “ಇಗೋ, ನಾನು ಇಲ್ಲಿದ್ದೇನೆ,” ಎಂದು ಹೇಳಿ,

[5] ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನಾನು ನಿನ್ನನ್ನು ಕರೆಯಲಿಲ್ಲ, ತಿರುಗಿ ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು.

[6] ಯೆಹೋವ ದೇವರು, “ಸಮುಯೇಲನೇ,” ಎಂದು ಅವನನ್ನು ತಿರುಗಿ ಕರೆದರು. ಆಗ ಸಮುಯೇಲನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ; ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನನ್ನ ಮಗನೇ, ನಾನು ಕರೆಯಲಿಲ್ಲ; ನೀನು ಹೋಗಿ ಮಲಗಿಕೋ,” ಎಂದನು.

[7] ಸಮುಯೇಲನು ಆವರೆಗೂ ಯೆಹೋವ ದೇವರನ್ನು ತಿಳಿದುಕೊಂಡಿರಲಿಲ್ಲ. ಯೆಹೋವ ದೇವರ ವಾಕ್ಯವು ಅವನಿಗೆ ಪ್ರಕಟವಾಗಿರಲೂ ಇಲ್ಲ.

[8] ಯೆಹೋವ ದೇವರು ಮತ್ತೆ ಮೂರನೆಯ ಸಾರಿ, “ಸಮುಯೇಲನೇ,” ಎಂದು ಕರೆದರು. ಅವನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಆಗ ಏಲಿಯು, ಯೆಹೋವ ದೇವರು ಹುಡುಗನನ್ನು ಕರೆದರೆಂದು ಗ್ರಹಿಸಿಕೊಂಡನು.

[9] ಏಲಿಯು ಸಮುಯೇಲನಿಗೆ, “ನೀನು ಹೋಗಿ ಮಲಗು; ಅವರು ನಿನ್ನನ್ನು ಕರೆದರೆ, ಆಗ ನೀನು, ‘ಯೆಹೋವ ದೇವರೇ, ಮಾತನಾಡಿ, ನಿಮ್ಮ ದಾಸನು ಕೇಳುತ್ತಾನೆ,’ ಎಂದು ಹೇಳು,” ಎಂದನು. ಹಾಗೆಯೇ ಸಮುಯೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.

[10] ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು.

[11] ಆಗ ಯೆಹೋವ ದೇವರು ಸಮುಯೇಲನಿಗೆ, “ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯವನ್ನು ಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳೂ ಕಂಪಿಸುವುವು.

[12] ಏಕೆಂದರೆ ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ. ನಾನು ಆರಂಭಿಸಿದ ಹಾಗೆ ಅಂತ್ಯವನ್ನು ಮಾಡುವೆನು.

[13] ನಾನು ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯತೀರಿಸುವೆನು, ಎಂದು ಹೇಳಿದ್ದೆನು. ಏಕೆಂದರೆ ತನ್ನ ಪುತ್ರರು ದೇವರ ನಿಂದನೆ ಮಾಡಿದಾಗ, ಅವರನ್ನು ಹತೋಟಿಗೆ ತರಲಿಲ್ಲ.

[14] ಆದ್ದರಿಂದ ‘ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿಯಿಂದಲಾದರೂ, ಅರ್ಪಣೆಯಿಂದಲಾದರೂ ಪ್ರಾಯಶ್ಚಿತ್ತವಾಗುವದಿಲ್ಲ, ಎಂದು ನಾನು ಏಲಿಯ ಮನೆಯನ್ನು ಕುರಿತು ಪ್ರಮಾಣಮಾಡಿದೆನು,’ ” ಎಂದರು.

[15] ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು.

[16] ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.

[17] ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು.

[18] ಹಾಗೆಯೇ ಸಮುಯೇಲನು ಅವನಿಗೆ ಒಂದನ್ನೂ ಮರೆಮಾಡದೆ, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು, “ಅವರು ಯೆಹೋವ ದೇವರು. ಅವರಿಗೆ ಸರಿತೋರುವುದನ್ನು ಮಾಡಲಿ,” ಎಂದನು.

[19] ಸಮುಯೇಲನು ಬೆಳೆಯುತ್ತಾ ಬಂದನು. ಯೆಹೋವ ದೇವರು ಅವನ ಸಂಗಡ ಇದ್ದು, ಅವರ ವಾಕ್ಯಗಳಲ್ಲಿ ಒಂದಾದರೂ ಬಿದ್ದು ಹೋಗಗೊಡಿಸಲಿಲ್ಲ.

[20] ಆಗ ಸಮುಯೇಲನು ಯೆಹೋವ ದೇವರ ಪ್ರವಾದಿಯಾಗಿ ದೃಢಪಟ್ಟನೆಂದು ದಾನ್ ಊರು ಮೊದಲ್ಗೊಂಡು ಬೇರ್ಷೆಬದವರೆಗೂ ಇದ್ದ ಇಸ್ರಾಯೇಲರೆಲ್ಲರು ತಿಳಿದಿದ್ದರು.

[21] ಯೆಹೋವ ದೇವರು ತಿರುಗಿ ಶೀಲೋವಿನಲ್ಲಿ ಕಾಣಿಸಿಕೊಂಡರು. ಏಕೆಂದರೆ ಶೀಲೋವಿನಲ್ಲಿ ಯೆಹೋವ ದೇವರು ವಾಕ್ಯದ ಮೂಲಕ ಸಮುಯೇಲನಿಗೆ ಪ್ರಕಟಿಸಿಕೊಂಡರು.

1 ಸಮುಯೇಲ — Chapters