Skip to content
Opens in a new window
Listen to this chapter • 5:56

[1] ಸೌಲನು ಅರಸನಾದಾಗ ಮೂವತ್ತು ವರ್ಷ ಪ್ರಾಯದವನಾಗಿದ್ದನು. ಅವನು ಇಸ್ರಾಯೇಲರ ಮೇಲೆ ನಲವತ್ತೆರಡು ವರ್ಷಕಾಲ ಆಳಿದನು.

[2] ಸೌಲನು ಇಸ್ರಾಯೇಲರೊಳಗಿಂದ ಮೂರು ಸಾವಿರ ಜನ ಪುರುಷರನ್ನು ಆಯ್ದುಕೊಂಡನು. ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯು, ಬೇತೇಲಿನ ದಿನ್ನೆ ಪ್ರದೇಶಗಳಲ್ಲಿಯು ಇದ್ದರು. ಒಂದು ಸಾವಿರ ಜನರು ಬೆನ್ಯಾಮೀನ್ಯರ ಗಿಬೆಯದಲ್ಲಿ ಯೋನಾತಾನನ ಜೊತೆಗಿದ್ದರು. ಉಳಿದ ಜನರನ್ನು ಅವನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.

[3] ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ತಿಳಿದುಬಂತು. ಆದ್ದರಿಂದ ಸೌಲನು ದೇಶದಲ್ಲೆಲ್ಲಾ ಹಿಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.

[4] “ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ಸೌಲನು ನಾಶಮಾಡಿದ್ದರಿಂದ, ಇಸ್ರಾಯೇಲರು ಈಗ ಫಿಲಿಷ್ಟಿಯರಿಗೆ ಅಸಹ್ಯಕರ ಶತ್ರುವಾದರು,” ಎಂಬ ವರ್ತಮಾನವನ್ನು ಸಮಸ್ತ ಇಸ್ರಾಯೇಲರು ಕೇಳಿದರು. ಮತ್ತು ಗಿಲ್ಗಾಲಿಗೆ ಬಂದು ಸೌಲನನ್ನು ಸೇರಿಕೊಳ್ಳಲು ಜನರನ್ನು ಕರೆದರು.

[5] ಆಗ ಇಸ್ರಾಯೇಲರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ, ಆರು ಸಾವಿರ ಕುದುರೆ ಸವಾರರೂ, ಸಮುದ್ರತೀರದ ಮರಳಷ್ಟು ಜನರೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳಿದುಕೊಂಡರು.

[6] ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದದ್ದರಿಂದ ತಾವು ಇಕ್ಕಟ್ಟಿನಲ್ಲಿ ಇರುವುದನ್ನು ಕಂಡು, ಗವಿಗಳಲ್ಲಿಯೂ, ಮುಳ್ಳಿನ ಪೊದೆಗಳಲ್ಲಿಯೂ, ಗುಡ್ಡಗಳಲ್ಲಿಯೂ, ಕುಣಿಗಳಲ್ಲಿಯೂ ಬಾವಿಗಳಲ್ಲಿಯೂ ಅಡಗಿಕೊಂಡರು.

[7] ಇದಲ್ಲದೆ ಹಿಬ್ರಿಯರಲ್ಲಿ ಕೆಲವರು ಯೊರ್ದನನ್ನು ದಾಟಿ, ಗಾದ್ ದೇಶಕ್ಕೂ, ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು. ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು.

[8] ಸೌಲನು ತನಗೆ ಸಮುಯೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುಯೇಲನು ಗಿಲ್ಗಾಲಿಗೆ ಬಾರದೆ ಇದ್ದುದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.

[9] ಆಗ ಸೌಲನು, “ದಹನಬಲಿಯನ್ನೂ, ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು.

[10] ಆದರೆ ಅವನು ದಹನಬಲಿಯನ್ನು ಅರ್ಪಿಸಿ, ತೀರಿಸುವಷ್ಟರೊಳಗೆ ಸಮುಯೇಲನು ಬಂದನು. ಆಗ ಅವನನ್ನು ವಂದಿಸುವುದಕ್ಕಾಗಿ ಸೌಲನು ಅವನನ್ನು ಎದುರುಗೊಳ್ಳಲು ಹೋದನು.

[11] ಆದರೆ ಸಮುಯೇಲನು, “ನೀನೇನು ಮಾಡಿದಿ?” ಎಂದು ಸೌಲನನ್ನು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟು ಹೋಗುತ್ತಿರುವುದನ್ನು, ನೀನು ನೇಮಿಸಿದ ದಿವಸಗಳ ಪ್ರಕಾರ ಬಾರದಿರುವುದನ್ನು ಮತ್ತು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವುದನ್ನು ಕಂಡೆನು.

[12] ಆಗ ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ದಾಳಿಮಾಡುವುದು ಖಚಿತ ಮತ್ತು ನಾನು ಎಂದಿಗೂ ಯೆಹೋವ ದೇವರ ಸಹಾಯವನ್ನು ಕೇಳಲಿಲ್ಲ.’ ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ದಹನಬಲಿಯನ್ನು ಅರ್ಪಿಸಿದೆನು,” ಎಂದನು.

[13] ಸಮುಯೇಲನು ಸೌಲನಿಗೆ, “ನೀನು ಬುದ್ಧಿಹೀನವಾದ ಕೆಲಸಮಾಡಿದ್ದೀ; ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಯೆಹೋವ ದೇವರು ಇಸ್ರಾಯೇಲರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವುದಕ್ಕೆ ಇದ್ದರು.

[14] ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದನ್ನು ನೀನು ಕೈಗೊಳ್ಳದೆ ಹೋದದ್ದರಿಂದ, ಅವರು ತಮ್ಮ ಹೃದಯಕ್ಕೆ ತಕ್ಕಂಥ ಒಬ್ಬ ಮನುಷ್ಯನನ್ನು ಹುಡುಕಿ, ಅವನನ್ನು ತಮ್ಮ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾರೆ,” ಎಂದನು.

[15] ಸಮುಯೇಲನು ಎದ್ದು ಗಿಲ್ಗಾಲಿನಿಂದ ಬೆನ್ಯಾಮೀನ್ ದೇಶದ ಗಿಬೆಯಕ್ಕೆ ಹೋದನು. ಸೌಲನು ತನ್ನ ಸಂಗಡ ಇದ್ದ ಜನರನ್ನು ಲೆಕ್ಕಮಾಡಿದಾಗ, ಅವರು ಸುಮಾರು ಆರುನೂರು ಜನರಿದ್ದರು.

[16] ಸೌಲನೂ, ಅವನ ಮಗ ಯೋನಾತಾನನೂ, ಅವನ ಸಂಗಡ ಇರುವ ಜನರೂ ಸಹಿತವಾಗಿ ಬೆನ್ಯಾಮೀನ್ಯರ ಗಿಬೆಯದಲ್ಲಿ ಇದ್ದರು. ಆದರೆ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಇಳಿದುಕೊಂಡಿದ್ದರು.

[17] ಆಗ ಫಿಲಿಷ್ಟಿಯರ ಪಾಳೆಯದಿಂದ ಸುಲಿದುಕೊಳ್ಳುವವರು ಮೂರು ಗುಂಪಾಗಿ ಹೊರಟರು. ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ ದೇಶದ ಕಡೆಗೆ ಹೋಯಿತು.

[18] ಮತ್ತೊಂದು ಗುಂಪು ಬೇತ್ ಹೋರೋನಿನ ಮಾರ್ಗವಾಗಿ ಹೋಯಿತು. ಬೇರೊಂದು ಗುಂಪು ಮರುಭೂಮಿಗೆ ಎದುರಾಗಿರುವ ಜೆಬೋಯಿಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.

[19] “ಹಿಬ್ರಿಯರು ತಮಗೆ ಖಡ್ಗವನ್ನಾದರೂ ಈಟಿಯನ್ನಾದರೂ ಮಾಡಿಕೊಳ್ಳಬಾರದು,” ಎಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ, ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ.

[20] ಆದ್ದರಿಂದ ಇಸ್ರಾಯೇಲರೆಲ್ಲಾ ತಮ್ಮ ತಮ್ಮ ನೇಗಿಲಿನ ಗುಳಗಳನ್ನೂ, ಸಲಿಕೆಗಳನ್ನೂ, ಕೊಡಲಿಗಳನ್ನೂ, ಗುದ್ದಲಿಗಳನ್ನೂ ಮೊನೆ ಮಾಡುವುದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.

[21] ಆದರೆ ಸಲಿಕೆ, ಗುದ್ದಲಿ, ಕುಂಟೆ, ಮುಳ್ಳುಗೋಲು, ಕೊಡಲಿ, ಅಂಕುಶ ಇವುಗಳನ್ನು ಹದಮಾಡುವುದಕ್ಕೆ ಅವರಲ್ಲಿ ಅರವು ಮಾತ್ರ ಇತ್ತು.

[22] ಯುದ್ಧದ ದಿವಸದಲ್ಲಿ ಸೌಲ ಯೋನಾತಾನರ ಜೊತೆಯಲ್ಲಿದ್ದ ಸಮಸ್ತ ಜನರಲ್ಲಿ ಒಬ್ಬನ ಕೈಯಲ್ಲಾದರೂ ಖಡ್ಗವಾಗಲಿ, ಈಟಿಯಾಗಲಿ ಇರಲಿಲ್ಲ. ಆದರೆ ಸೌಲನಿಗೂ, ಅವನ ಪುತ್ರನಾದ ಯೋನಾತಾನನಿಗೂ ಮಾತ್ರವೇ ಇತ್ತು.

[23] ಆಗ ಫಿಲಿಷ್ಟಿಯರ ದಂಡು ಮಿಕ್ಮಾಷಿನ ಕಣಿವೆಯ ಮಾರ್ಗದತ್ತ ಹೊರಟಿತು.

1 ಸಮುಯೇಲ — Chapters