[1] ಸಮುಯೇಲನ ವಾಕ್ಯವು ಇಸ್ರಾಯೇಲದಲ್ಲಿ ಹರಡಿತು. ಇಸ್ರಾಯೇಲರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು, ಎಬೆನೆಜೆರಿನ ಸಮೀಪದಲ್ಲಿ ದಂಡಿಳಿದರು. ಫಿಲಿಷ್ಟಿಯರು ಅಫೇಕಿನಲ್ಲಿ ದಂಡಿಳಿದರು.
[2] ಫಿಲಿಷ್ಟಿಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧಮಾಡಿದಾಗ, ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಸೋತರು. ಫಿಲಿಷ್ಟಿಯರು ಯುದ್ಧ ರಂಗದಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರ ಜನರನ್ನು ಹತಮಾಡಿದರು.
[3] ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, “ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ,” ಎಂದರು.
[4] ಕೆರೂಬಿಗಳ ಮಧ್ಯದಲ್ಲಿರುವ ಸೇನಾಧೀಶ್ವರ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬರಲು ಶೀಲೋವಿಗೆ ಜನರನ್ನು ಕಳುಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು.
[5] ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ, ಇಸ್ರಾಯೇಲರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.
[6] ಅವರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿದಾಗ, “ಹಿಬ್ರಿಯರ ಪಾಳೆಯದ ಈ ಮಹಾ ಆರ್ಭಟವೇನು?” ಎಂದು ವಿಚಾರಿಸಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳಿದುಕೊಂಡರು.
[7] “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು, ಫಿಲಿಷ್ಟಿಯರು ಭಯಪಟ್ಟು, ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ.
[8] ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವರ‍್ಯಾರು? ಈಜಿಪ್ಟಿನವರನ್ನು ಮರುಭೂಮಿಯಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
[9] ಫಿಲಿಷ್ಟಿಯರೇ, ನೀವು ಬಲಗೊಂಡು ಶೂರರಾಗಿರಿ. ಹಿಬ್ರಿಯರು ನಿಮಗೆ ಗುಲಾಮರಾಗಿ ಮಾಡಿದ ಪ್ರಕಾರ ನೀವು ಅವರಿಗೆ ಗುಲಾಮರಾಗದ ಹಾಗೆ ಶೂರರಾಗಿ ಇದ್ದು, ಯುದ್ಧಮಾಡಿರೆಂದು ಹೇಳಿಕೊಂಡರು.
[10] ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲರು ಸೋತು, ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾ ಸಂಹಾರವಾಯಿತು. ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು.
[11] ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಮರಣಹೊಂದಿದರು.
[12] ಅದೇ ದಿವಸದಲ್ಲಿ ಬೆನ್ಯಾಮೀನನಾದ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಯುದ್ಧರಂಗದಿಂದ ಶೀಲೋವಿಗೆ ಓಡಿಬಂದನು.
[13] ಅವನು ಬರುವಾಗ, ಏಲಿಯು ದೇವರ ಮಂಜೂಷಕ್ಕೋಸ್ಕರ ತನ್ನ ಹೃದಯವು ನಡುಗುತ್ತಾ ಇರುವುದರಿಂದ, ಆಸನದ ಮೇಲೆ ಮಾರ್ಗದ ಬಳಿಯಲ್ಲಿ ನಿರೀಕ್ಷಿಸುತ್ತಾ ಕುಳಿತಿದ್ದನು. ಊರಲ್ಲಿ ವರ್ತಮಾನ ತಿಳಿಸಲು ಆ ಮನುಷ್ಯನು ಪಟ್ಟಣದಲ್ಲಿ ಪ್ರವೇಶಿಸಿದಾಗ ಪಟ್ಟಣವೆಲ್ಲಾ ಕೂಗಿತು.
[14] ಕೂಗುವ ಶಬ್ದವನ್ನು ಏಲಿಯು ಕೇಳಿದಾಗ, “ಆ ಗುಂಪಿನ ಶಬ್ದ ಏನು?” ಎಂದನು. ಆಗ ಆ ಮನುಷ್ಯನು ತ್ವರೆಯಾಗಿ ಬಂದು ಏಲಿಗೆ ತಿಳಿಸಿದನು.
[15] ಏಲಿಯು ತೊಂಬತ್ತೆಂಟು ವರುಷ ಪ್ರಾಯದವನಾಗಿದ್ದನು. ಅವನು ಕಾಣದ ಹಾಗೆ ಅವನ ಕಣ್ಣುಗಳು ಮಬ್ಬಾಗಿದ್ದವು.
[16] ಆ ಮನುಷ್ಯನು ಏಲಿಗೆ, “ಯುದ್ಧರಂಗದಿಂದ ಬಂದವನು ನಾನೇ; ನಾನು ಈ ಹೊತ್ತು ಯುದ್ಧರಂಗದಿಂದ ಓಡಿ ಬಂದೆನು,” ಎಂದನು. ಆಗ ಅವನು, “ನನ್ನ ಮಗನೇ, ಅಲ್ಲಿ ನಡೆದ ವರ್ತಮಾನವೇನು?” ಎಂದನು.
[17] ಅದಕ್ಕೆ ವರ್ತಮಾನ ತಂದವನು, “ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಓಡಿಹೋದರು. ಜನರಲ್ಲಿ ದೊಡ್ಡ ಸಂಹಾರವಾಯಿತು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ಮರಣಹೊಂದಿದರು. ದೇವರ ಮಂಜೂಷವು ಶತ್ರುವಶವಾಯಿತು,” ಎಂದನು.
[18] ವೃದ್ಧನೂ ಸ್ಥೂಲಕಾಯನೂ ಆದ ಏಲಿಯು ದೇವರ ಮಂಜೂಷದ ಮಾತನ್ನು ಕೇಳಿದಾಗ, ಆಸನದ ಮೇಲಿಂದ ಬಾಗಿಲಿನ ಕಡೆಗೆ ಹಿಂದಕ್ಕೆ ಬಿದ್ದು, ಕುತ್ತಿಗೆ ಮುರಿದು ಮರಣಹೊಂದಿದನು. ಅವನು ನಾಲ್ವತ್ತು ವರುಷ ಇಸ್ರಾಯೇಲರಿಗೆ ನ್ಯಾಯತೀರಿಸಿದನು.
[19] ಇದಲ್ಲದೆ ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ಗರ್ಭಿಣಿಯಾಗಿ ಹೆರುವ ಕಾಲದಲ್ಲಿದ್ದಳು. ಅವಳು, ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರೆಂಬುದನ್ನೂ ಕೇಳಿದಾಗ, ಅವಳಿಗೆ ಪ್ರಸವವೇದನೆ ಉಂಟಾಗಿ, ಅವಳು ಗಂಡು ಮಗುವನ್ನು ಹೆತ್ತಳು.
[20] ಅವಳು ಸಾಯುವ ವೇಳೆಯಲ್ಲಿ, ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು, “ಭಯಪಡಬೇಡ. ಗಂಡು ಮಗುವನ್ನು ಹೆತ್ತಿದ್ದೀ,” ಎಂದು ಅವಳಿಗೆ ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯವನ್ನೂ ಕೊಡಲಿಲ್ಲ, ಪ್ರತ್ಯುತ್ತರವನ್ನೂ ಕೊಡಲಿಲ್ಲ.
[21] ಆದರೆ ಅವಳು ಅದಕ್ಕೆ ಉತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರು ವಶವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರಿಂದಲೂ ದೇವರ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು ಎಂದು ಹೇಳಿ, ಆ ಕೂಸಿಗೆ, “ಈಕಾಬೋದ್,” ಎಂದು ಹೆಸರಿಟ್ಟಳು.
[22] ಏಕೆಂದರೆ ಅವಳು, “ದೇವರ ಮಂಜೂಷವು ಶತ್ರು ವಶವಾಗಿ ಹೋದದ್ದರಿಂದ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು,” ಎಂದು ಹೇಳಿದಳು.