Skip to content
Opens in a new window
Listen to this chapter • 7:10

[1] “ಫಿಲಿಷ್ಟಿಯರು ಕೆಯೀಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆ,” ಎಂದು ದಾವೀದನಿಗೆ ತಿಳಿಸಿದರು.

[2] ಆದ್ದರಿಂದ ದಾವೀದನು, “ನಾನು ಈ ಫಿಲಿಷ್ಟಿಯರನ್ನು ಹೊಡೆಯಲು ಹೋಗಲೋ?” ಎಂದು ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು, “ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ನಗರವನ್ನು ರಕ್ಷಿಸು,” ಎಂದರು.

[3] ಆಗ ದಾವೀದನ ಜನರು ಅವನಿಗೆ, “ಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ. ಆದರೆ ನಾವು ಫಿಲಿಷ್ಟಿಯರ ಸೈನ್ಯಗಳಿಗೆ ವಿರೋಧವಾಗಿ ಕೆಯೀಲಾ ನಗರಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವುದು,” ಎಂದರು.

[4] ದಾವೀದನು ತಿರುಗಿ ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು ಉತ್ತರವಾಗಿ, “ನೀನೆದ್ದು ಕೆಯೀಲಾ ನಗರಕ್ಕೆ ಹೋಗು; ಏಕೆಂದರೆ ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.

[5] ಹಾಗೆಯೇ ದಾವೀದನೂ, ಅವನ ಜನರೂ ಎದ್ದು ಕೆಯೀಲಾ ನಗರಕ್ಕೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ, ಅವರ ಪಶುಗಳನ್ನು ಹಿಡಿದುಕೊಂಡು ಬಂದು, ಅವರನ್ನು ಪೂರ್ಣವಾಗಿ ಸೋಲಿಸಿದರು. ಈ ಪ್ರಕಾರ ದಾವೀದನು ಕೆಯೀಲಾ ನಗರದ ನಿವಾಸಿಗಳನ್ನು ರಕ್ಷಿಸಿದನು.

[6] ಅಹೀಮೆಲೆಕನ ಮಗ ಅಬಿಯಾತರನು ಕೆಯೀಲಾ ನಗರದಲ್ಲಿ ಇರುವ ದಾವೀದನ ಬಳಿಗೆ ಓಡಿ ಬಂದಾಗ, ಅವನ ಕೈಯಲ್ಲಿ ಏಫೋದು ಇತ್ತು.

[7] ದಾವೀದನು ಕೆಯೀಲಾ ನಗರಕ್ಕೆ ಬಂದಿದ್ದಾನೆ ಎಂಬ ವಿಷಯ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ಅವನು ಬಾಗಿಲುಗಳೂ, ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಈಗ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು.

[8] ಆಗ ಸೌಲನು ದಾವೀದನನ್ನೂ, ಅವನ ಜನರನ್ನೂ ಮುತ್ತಿಕೊಳ್ಳಲು ತನ್ನ ಸೈನಿಕರನ್ನು ಯುದ್ಧಕ್ಕೆ ಹೋಗಲು ಕೆಯೀಲಾ ನಗರಕ್ಕೆ ಕರೆದನು.

[9] ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿದ್ದರಿಂದ ಯಾಜಕನಾದ ಅಬಿಯಾತರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದನು.

[10] ಆಗ ದಾವೀದನು, “ಇಸ್ರಾಯೇಲ್ ದೇವರಾದ ಯೆಹೋವ ದೇವರೇ, ಸೌಲನು ಕೆಯೀಲಾ ನಗರಕ್ಕೆ ಬಂದು, ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿಮ್ಮ ಸೇವಕನು ಖಂಡಿತವಾಗಿ ಕೇಳಿದನು.

[11] ಕೆಯೀಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿಮ್ಮ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ದಯಮಾಡಿ ಇದನ್ನು ನಿಮ್ಮ ಸೇವಕನಿಗೆ ತಿಳಿಸಿರಿ,” ಎಂದನು. ಅದಕ್ಕೆ ಯೆಹೋವ ದೇವರು, “ಅವನು ಬರುವನು,” ಎಂದರು.

[12] ಅನಂತರ ದಾವೀದನು, “ಕೆಯೀಲಾ ಪಟ್ಟಣದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ?” ಎಂದು ಕೇಳಿದನು. ಯೆಹೋವ ದೇವರು, “ಅವರು ಒಪ್ಪಿಸಿಕೊಡುವರು,” ಎಂದರು.

[13] ಆದ್ದರಿಂದ ದಾವೀದನೂ, ಹೆಚ್ಚು ಕಡಿಮೆ ಆರುನೂರು ಮಂದಿಯಿದ್ದ ತನ್ನ ಜನರೂ ಎದ್ದು ಕೆಯೀಲಾವನ್ನು ಬಿಟ್ಟು ವಿವಿಧ ಕಡೆಗಳಲ್ಲಿ ಅಲೆದಾಡಿದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.

[14] ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ, ಜೀಫ್ ಎಂಬ ಮರುಭೂಮಿಯ ಬೆಟ್ಟದಲ್ಲಿಯೂ ವಾಸವಾಗಿದ್ದನು. ಸೌಲನು ದಿನವೂ ಅವನನ್ನು ಹುಡುಕುತ್ತಿದ್ದನು. ಆದರೆ ದೇವರು ದಾವೀದನನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.

[15] ತನ್ನ ಪ್ರಾಣವನ್ನು ತೆಗೆಯುವುದಕ್ಕೆ ಸೌಲನು ಹೊರಟಿದ್ದಾನೆಂದು ದಾವೀದನು ತಿಳಿದಾಗ, ಅವನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು.

[16] ಆಗ ಸೌಲನ ಮಗ ಯೋನಾತಾನನು ಎದ್ದು ಮರುಭೂಮಿಯಲ್ಲಿರುವ ದಾವೀದನ ಬಳಿಗೆ ಹೋಗಿ, ಅವನನ್ನು ದೇವರಲ್ಲಿ ಬಲಪಡಿಸಿ ಸಹಾಯಮಾಡಿದನು.

[17] ಯೋನಾತಾನನು ಅವನಿಗೆ, “ಭಯಪಡಬೇಡ, ಏಕೆಂದರೆ ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವುದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ. ನಾನು ನಿನಗೆ ಎರಡನೆಯವನಾಗಿರುವೆನು ಮತ್ತು ಹೀಗೆ ಆಗುವುದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ,” ಎಂದನು.

[18] ಅವರಿಬ್ಬರೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಹೋರೆಷದಲ್ಲಿಯೇ ಉಳಿದನು. ಆದರೆ ಯೋನಾತಾನನು ತನ್ನ ಮನೆಗೆ ಹೋದನು.

[19] ಆಗ ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪಕ್ಷವಾಗಿಯೇ ಹೋರೆಷದ ಗಿರಿಗಳಲ್ಲಿ ಅಂದರೆ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದನಲ್ಲವೇ?

[20] ಈಗ ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ. ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು,” ಎಂದರು.

[21] ಆಗ ಸೌಲನು, “ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.

[22] ನೀವು ದಯಮಾಡಿ ಹೋಗಿ ಅವನು ಹೆಜ್ಜೆ ಇಡುವ ಸ್ಥಳವನ್ನೂ, ಅಲ್ಲಿ ಅವನನ್ನು ನೋಡಿದವರು ಯಾರು ಎಂಬುದನ್ನೂ ಇನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ನೋಡಿರಿ. ಏಕೆಂದರೆ ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾನೆಂದು ನನಗೆ ಹೇಳುತ್ತಾರೆ.

[23] ಅವನು ಅಡಗಿಕೊಂಡಿರುವ ಸಮಸ್ತ ರಹಸ್ಯ ಸ್ಥಳಗಳನ್ನೂ ನೋಡಿ ತಿಳಿದುಕೊಂಡು, ನಿಶ್ಚಯವಾದ ವರ್ತಮಾನವನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ, ಯೆಹೂದದ ಸಹಸ್ರ ಕುಲದಲ್ಲಿಯೂ ಅವನನ್ನು ಹುಡುಕಿ ಅವನನ್ನು ಹಿಡಿಯುವೆನು,” ಎಂದನು.

[24] ಆದ್ದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ, ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಮಾವೋನಿನ ಮರುಭೂಮಿಯಲ್ಲಿದ್ದರು.

[25] ಸೌಲನೂ, ಅವನ ಜನರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿದಾಗ, ಅವನು ಬಂಡೆಗಳಲ್ಲಿ ಇಳಿದು ಮಾವೋನಿನ ಮರುಭೂಮಿಯಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಮರುಭೂಮಿಯಲ್ಲಿ ದಾವೀದನನ್ನು ಹಿಂದಟ್ಟಿದನು.

[26] ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು. ದಾವೀದನೂ, ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು. ಸೌಲನಿಗೆ ಭಯಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆಪಡುತ್ತಿದ್ದರು. ಆಗ ಸೌಲನೂ, ಅವನ ಜನರೂ ಅವರನ್ನು ಹಿಡಿಯುವಂತೆ ಸುತ್ತಿಕೊಂಡರು.

[27] ಆದರೆ ಒಬ್ಬ ಸೇವಕನು ಸೌಲನ ಬಳಿಗೆ ಬಂದು, “ನೀನು ತ್ವರೆಯಾಗಿ ಬಾ. ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ,” ಎಂದನು.

[28] ಆದ್ದರಿಂದ ಸೌಲನು ದಾವೀದನನ್ನು ಹಿಂದಟ್ಟುವುದನ್ನು ಬಿಟ್ಟು, ಫಿಲಿಷ್ಟಿಯರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಸೇಲಾ ಅಮ್ಮಾಲೆಕೋತ್ ಎಂದರೆ, ಅಡ್ಡ ಬೆಟ್ಟ ಎಂದು ಹೆಸರಿಟ್ಟರು.

[29] ದಾವೀದನು ಆ ಸ್ಥಳವನ್ನು ಬಿಟ್ಟು ಹೋಗಿ ಏನ್ಗೆದಿಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

1 ಸಮುಯೇಲ — Chapters