[1] ಸನ್ಮಾನ್ಯ ಥೆಯೊಫಿಲನೇ, ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ.
[2] ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ.
[3] ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ.
[4] ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
[5] ಹೆರೋದನು ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್.
[6] ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು.
[7] ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
[8] ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು.
[9] ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು.
[10] ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
[11] ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು.
[12] ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು.
[13] ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು.
[14] ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು.
[15] ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.
[16] “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು.
[17] ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
[18] ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
[19] ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ.
[20] ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
[21] ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು.
[22] ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು.
[23] ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
[24] ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ.
[25] ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
[26] ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು.
[28] ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
[29] ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
[30] ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ.
[31] ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು.
[32] ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು.
[33] ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
[34] ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
[35] ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು.
[36] ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.
[37] ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
[38] ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
[39] ಆಗ ಮರಿಯಳು ಎದ್ದು ಜುದೇಯದ ಗುಡ್ಡಪ್ರದೇಶದಲ್ಲಿರುವ ಒಂದು ಊರಿಗೆ ಬೇಗಬೇಗನೆ ಹೋದಳು.
[40] ಅಲ್ಲಿ ಜಕರೀಯನ ಮನೆಯೊಳಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.
[41] ಎಲಿಜಬೇತಳು ಮರಿಯಳ ವಂದನೆಯನ್ನು ಕೇಳಿದಾಗ, ಆಕೆಯ ಗರ್ಭದಲ್ಲಿದ್ದ ಮಗು ನಲಿದಾಡಿತು. ಆಗ ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
[42] ಹರ್ಷೋದ್ಗಾರದಿಂದ ಹೀಗೆಂದಳು: “ದೇವರು ನಿನ್ನನ್ನು (ಮರಿಯ) ಬೇರೆಲ್ಲಾ ಸ್ತ್ರೀಯರಿಗಿಂತ ಹೆಚ್ಚಾಗಿ ಆಶೀರ್ವದಿಸಿದ್ದಾನೆ. ನಿನ್ನಲ್ಲಿ ಜನಿಸಲಿರುವ ಮಗುವನ್ನು ದೇವರು ಆಶೀರ್ವದಿಸಿದ್ದಾನೆ.
[43] ನನ್ನ ಪ್ರಭುವಿನ ತಾಯಿಯಾದ ನೀನೇ ನನ್ನ ಬಳಿಗೆ ಬಂದದ್ದು ನನಗೆಷ್ಟೋ ಭಾಗ್ಯ!
[44] ನಿನ್ನ ಧ್ವನಿಯನ್ನು ಕೇಳಿದಾಗ, ನನ್ನೊಳಗಿರುವ ಕೂಸು ಸಂತೋಷದಿಂದ ನಲಿದಾಡಿತು.
[45] ಪ್ರಭುವು ನಿನಗೆ ಹೇಳಿದ್ದು ಸಂಭವಿಸೇ ತೀರುವುದೆಂದು ನೀನು ನಂಬಿ ಧನ್ಯಳಾದೆ” ಎಂದಳು.
[46] ಆಗ ಮರಿಯಳು,
[47] “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ. ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
[48] ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ. ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
[49] ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ. ಆತನ ಹೆಸರು ಅತಿ ಪರಿಶುದ್ಧವಾದದ್ದು.
[50] ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
[51] ಆತನು ತನ್ನ ಭುಜಬಲವನ್ನು ತೋರಿ ಗರ್ವಿಷ್ಠರನ್ನು ಚದರಿಸುತ್ತಾನೆ.
[52] ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ ದೀನರನ್ನು ಉನ್ನತಿಗೇರಿಸುತ್ತಾನೆ.
[53] ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
[54] ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
[55] ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
[56] ಮರಿಯಳು ಸುಮಾರು ಮೂರು ತಿಂಗಳ ಕಾಲ ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂತಿರುಗಿದಳು.
[57] ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು.
[58] ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
[59] ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು.
[60] ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
[61] ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು.
[62] ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
[63] ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು.
[64] ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು.
[65] ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು.
[66] ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
[67] ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
[68] “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ. ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
[69] ತನ್ನ ಸೇವಕನಾದ ದಾವೀದನ ಮನೆತನದಿಂದ ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
[70] ಇದನ್ನು ಆತನು ಪೂರ್ವಕಾಲದ ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
[71] ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
[72] ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
[73] ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
[74] ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
[76] “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ. ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
[77] ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
[78] “ನಮ್ಮ ದೇವರ ಮಹಾಕರುಣೆಯಿಂದ ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
[79] ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು. ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
[80] ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.